ಗುಯಾನ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಮತ್ತೆ ಅಭಿಮಾನಿಗಳು ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ.
ಹೌದು.. ಇತ್ತೀಚಗಷ್ಟೇ ರೋಹಿತ್ ಶರ್ಮಾ ಜೊತೆಗಿನ ವೈಮನಸ್ಸಿನ ಕುರಿತು ಸ್ಪಷ್ಟನೆ ನೀಡಿದ್ದ ಕೊಹ್ಲಿ, ತಂಡದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಇದೀಗ ಕೊಹ್ಲಿ ಅವರ ಈ ಹೇಳಿಕೆಯೇ ಅವರಿಗೆ ತಿರುಗೇಟಾಗಿ ಮಾರ್ಪಟ್ಟಿದ್ದು, ಕ್ರಿಕೆಟ್ ನಿಮಿತ್ತ ವಿಂಡೀಸ್ ಗೆ ಹಾರಿರುವ ಭಾರತ ಕ್ರಿಕೆಟ್ ತಂಡದೊಂದಿಗೆ ನಾಯಕ ಕೊಹ್ಲಿ ಪೋಸ್ ನೀಡಿದ್ದಾರೆ. ಅಲ್ಲದೆ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ನಾಯಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ನವದೀಪ್ ಸೈನಿ, ಖಲೀಲ್ ಅಹ್ಮದ್, ಶ್ರೇಯಸ್ ಅಯ್ಯರ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಕೆ.ಎಲ್ ರಾಹುಲ್ ಇದ್ದಾರೆ. ಅಲ್ಲದೆ ಈ ಫೋಟೋಗೆ ಸ್ಕ್ವಾಡ್ 100 ಪರ್ಸೆಂಟ್ ಎಂದು ಅಡಿ ಬರಹ ಕೂಡ ನೀಡಿದ್ದಾರೆ. ಆದರೆ ಈ ಫೋಟೋದಲ್ಲಿ ತಂಡದ ಉಪನಾಯಕ ರೋಹಿತ್ ಶರ್ಮಾ ಕಾಣುತ್ತಿಲ್ಲ. ತಂಡದ ಆರಂಭಿಕ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಇಲ್ಲದೆ ತಂಡದ ಪರಿಪೂರ್ಣ ಹೇಗಾಗುತ್ತದೆ ಎಂದು ಅಭಿಮಾನಿಗಳು ಕೊಹ್ಲಿಯ ಕಾಲೆಳೆದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ನಾಯಕ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮನಸ್ಥಾಪ ಏರ್ಪಟ್ಟಿದೆ ಎಂಬ ಸುದ್ದಿ ವ್ಯಾಪಕ ಚರ್ಚೆಗೀಡಾಗಿತ್ತು, ಆದರೆ ಈ ಬಗ್ಗೆ ತಂಡದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಈ ಫೋಟೋದ ಮೂಲಕ ಮತ್ತೆ ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
Comments are closed.