ಹೊಸದಿಲ್ಲಿ: ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಇದೀಗ ಹೊಸದೊಂದು ಸಮಸ್ಯೆಗೆ ಸಿಲುಕಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದೇ ಕಾರ್ತಿಗ್‌ಗೆ ಇದೀಗ ತಲೆನೋವಾಗಿಬಿಟ್ಟಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ನಾಯಕನಾಗಿರುವ ದಿನೇಶ್ ಕಾರ್ತಿಕ್, ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೈಟ್‌ರೈಡರ್ಸ್ ಮಾಲೀಕತ್ವದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡು ಬಿಸಿಸಿಐನಿಂದ ಶೋಕಾಸ್ ನೋಟಿಸ್ ಪಡೆದಿದ್ದಾರೆ.
ಟ್ರಿನ್ಬಾಗೊ ತಂಡದ ಕೋಚ್ ಮತ್ತು ಕೋಲ್ಕೊತಾ ನೈಟ್ ರೈಡರ್ಸ್ ತಂಡದ ನೂತನ ಕೋಚ್ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಅವರೊಟ್ಟಿಗೆ ದಿನೇಶ್ ಕಾರ್ತಿಕ್ ಫ್ರಾಂಚೈಸಿ ತಂಡದ ಡ್ರೆಸಿಂಗ್‌ನಲ್ಲಿ ಆಟಗಾರ ಜೊತೆಗೆ ಕಾಣಿಸಿಕೊಂಡಿದ್ದರು.
ಈ ವಿಚಾರವಾಗಿ ವಿವರಣೆ ನೀಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ದಿನೇಶ್ ಕಾರ್ತಿಕ್ ಬಿಸಿಸಿಐನ ಕೇಂದ್ರ ಒಪ್ಪಂದ ಆಟಗಾರನಾಗಿದ್ದು ಈ ರೀತಿ ವಿದೇಶಿ ಫ್ರಾಂಚೈಸಿ ಲೀಗ್ ಟೂರ್ನಿಗಳಲ್ಲಿ ಕಾಣಿಸಿಕೊಳ್ಳಲು ಮೊದಲಿಗೆ ಮಂಡಳಿಯಿಂದ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಕಾರ್ತಿಕ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
“ಭಾರತೀಯ ಆಟಗಾರನಾಗಿರುವ ಕಾರಣ ಅವರು ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವರು ಬಿಸಿಸಿಐ ಒಪ್ಪಂದ ಹೊಂದಿರುವ ಆಟಗಾರ. ಬಿಸಿಸಿಐಗೆ ತಿಳಿಸದೆ ಅಥವಾ ಅನುಮತಿ ಪಡೆಯದೆ ಅವರು ಸಿಪಿಎಲ್ ಲೀಗ್‌ಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಈ ವಿಚಾರವಾಗಿ ಅವರು 7 ದಿನಗಳ ಒಳಗಾಗಿ ಉತ್ತರ ನೀಡಬೇಕು,” ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಟ್ರಿನ್ಬಾಗೊ ನೈಟ್ ರೈಡರ್ಸ್ ಮತ್ತು ಐಪಿಎಲ್‌ನ ಕೋಲ್ಕೊತಾ ನೈಟ್ ರೈಡರ್ಸ್ ತಂಡಗಳು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಾಲೀಕತ್ವದ್ದಾಗಿದೆ. ಆದರೆ, ವಿದೇಶಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರು ತಲೆ ಹಾಕುವಂತಿಲ್ಲ ಎಂದು ಬಿಸಿಸಿಐ ಈ ಮೊದಲು ಕಟ್ಟಿನಿಟ್ಟಾಗಿ ತಿಳಿಸಿತ್ತು.
ಆದರೆ, ಕೆಲ ತಿಂಗಳ ಹಿಂದಷ್ಟೇ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿಗೆ ಕೆನಡಾದ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿತ್ತು. ಆದರೆ, ಬೇರಾವ ಆಟಗಾರರಿಗೂ ಈರೀತಿಯ ಅನುಮತಿ ನೀಡಿಲ್ಲ.
ಇನ್ನು ದಿನೇಶ್ ಕಾರ್ತಿಕ್ ಮುಂದಿನ ಐಪಿಎಲ್ ಸಲುವಾಗಿ ಚರ್ಚೆ ನಡೆಸಲು ಕೆರಿಬಿಯನ್ ನಾಡಿನಲ್ಲಿದ್ದು, ಡ್ರೆಸಿಂಗ್ ರೂಮ್‌ಗೆ ಸಲಿಗೆಯಿಂದಷ್ಟೇ ಭೇಟಿ ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ, ಈ ನಿಟ್ಟಿನಲ್ಲಿ ಬಿಸಿಸಿಐನ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಎದುರು ದಿನೇಶ್ ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.
“ಶೋಕಾಸ್ ನೋಟಿಸ್‌ಗೆ ದಿನೇಶ್ ಯಾವರೀತಿಯಲ್ಲಿ ಉತ್ತರಿಸುತ್ತಾರೆ ಎಂಬುದನ್ನು ಸಿಒಎ ಪರಿಶೀಲನೆ ಮಾಡಲಿದೆ. ವಿದೇಶಿ ಲೀಗ್ ಟೂರ್ನಿಗಳು ಭಾರತೀಯ ಆಟಗಾರರನ್ನು ಸೆಳೆಯಲು ಹಾತೊರೆಯುತ್ತಿರುವುದರಿಂದ ಆಟಗಾರರ ಈ ವರ್ತನೆಯನ್ನು ಸಮಿತಿ ಗಂಭೀರವಾಗಿ ಪರಿಗಣಿಸುತ್ತದೆ,” ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಗಳು ವಿವರಿಸಿದ್ದಾರೆ.
Comments are closed.