ಕ್ರೀಡೆ

ಸಾನಿಯಾ-ಶೊಯೇಬ್‌ ಲವ್‌ ಸ್ಟೋರಿ ಆರಂಭವಾಗಿದ್ದು ಹೇಗೆ ಗೊತ್ತಾ?

Pinterest LinkedIn Tumblr

ಹೊಬಾರ್ಟ್‌: ಚೊಚ್ಚಲ ತಾಯ್ತನದ ಕಾರಣ ಬರೋಬ್ಬರಿ 2 ವರ್ಷಗಳ ಕಾಲ ವೃತ್ತಿಪರ ಟೆನಿಸ್‌ನಿಂದ ದೂರ ಉಳಿದಿದ್ದ ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರ್ತಿ, 2020ರಲ್ಲಿ ಮರಳಿ ಅಂಗಣಕ್ಕೆ ಕಾಲಿಡಲಿದ್ದಾರೆ. ಹೊಬಾರ್ಟ್‌ ಓಪನ್‌ನಲ್ಲಿ ಆಡುವ ಮೂಲಕ ತಮ್ಮ ಟೆನಿಸ್‌ ವೃತ್ತಿಬದುಕಿನಲ್ಲಿ 2ನೇ ಇನಿಂಗ್ಸ್‌ ಆರಂಭಿಸಲಿದ್ದಾರೆ.

33 ವರ್ಷದ ಅನುಭವಿ ಆಟಗಾರ್ತಿ, 2017ರ ಅಕ್ಟೋಬರ್‌ನಲ್ಲಿ ಚೀನಾ ಓಪನ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇದೀಗ ಉಕ್ರೇನ್‌ನ ಆಟಗಾರ್ತಿ ಡಬಲ್ಸ್‌ ಶ್ರೇಯಾಂಕದಲ್ಲಿ 38ನೇ ಸ್ಥಾನದಲ್ಲಿರುವ ನಾಡಿಯಾ ಕಿಚೆನಾಕ್‌ ಜೊತೆಗೂಡಿ ಹೊಬಾರ್ಟ್‌ ಅಂಗಣದಲ್ಲಿ ಪೈಪೋಟಿಗೆ ಇಳಿಯಲಿದ್ದಾರೆ.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಆಗಿರುವ ಸಾನಿಯಾ, 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಹಾಗೂ ಸ್ಟಾರ್‌ ಆಲ್‌ರೌಂಡರ್‌ ಶೊಯೇಬ್‌ ಮಲಿಕ್‌ ಅವರನ್ನು ಮದುವೆಯಾಗಿದ್ದರು. ಈ ದಂಪತಿ ಕಳೆದ ವರ್ಷ ತಮ್ಮ ಮೊದಲು ಮಗುವಿಗೆ ಜನ್ಮ ನೀಡಿದ್ದು, ಇಝ್ಹಾನ್‌ ಎಂದು ಹೆಸರಿಟ್ಟಿದ್ದಾರೆ.

ಸಾನಿಯಾ-ಶೊಯೇಬ್‌ ವಿವಾಹದ ಬಳಿಕ ಕ್ರಿಕೆಟ್‌ ತಾರೆಗೂ ಟೆನಿಸ್‌ ತಾರೆಗೂ ನಂಟು ಬೆಳೆದಿದ್ದು ಎಲ್ಲಿ ಎಂಬ ಪ್ರಶ್ನೆಗಳು ತಲೆಯೆತ್ತಿದ್ದವು. ಈ ವಿಚಾರವಾಗಿ ಕೊನೆಗೂ ಬಾಯ್ಬಿಟ್ಟಿರುವ ಹೈದರಾಬಾದ್‌ ಮೂಲದ ಆಟಗಾರ್ತಿ ಹೊಬಾರ್ಟ್‌ನಲ್ಲಿ ಶುರುವಾದ ಲವ್‌ ಸ್ಟೋರಿಯನ್ನು ವಿವರಿಸಿದ್ದಾರೆ. ಹೊಬಾರ್ಟ್‌ ಓಪನ್‌ ಸಲುವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಶೊಯೇಬ್‌ ಮತ್ತು ಸಾನಿಯಾ ನಡುವಣ ಲವ್‌ ಸ್ಟೋರಿ ಶುರುವಾಯಿತಂತೆ.

“ಪರಸ್ಪರ ಮುಖಾಮುಖಿ ಭೇಟಿಯಾಗದೇ ಇದ್ದರೂ ಒಬ್ಬರ ಬಗ್ಗೆ ಒಬ್ಬರಿಗೆ ತಿಳಿದಿತ್ತು. ಹೊಬಾರ್ಟ್‌ನಲ್ಲಿ ಸಂಜೆ 6ರ ಬಳಿಕ ಮನುಷ್ಯರಿರಲಿ ಪಕ್ಷಿ-ಪ್ರಾಣಿಗಳು ಕೂಡ ಕಾಣಲು ಸಿಗುವುದಿಲ್ಲ. ಹೀಗಿರುವಾಗ ಅಲ್ಲಿನ ರೆಸ್ಟೋರೆಂಟ್‌ ಒಂದರಲ್ಲಿ ಸಂಜೆ ಅಚಾನಕ್ಕಾಗಿ ಭೇಟಿಯಾಗಿದ್ದೆವು. ಇದು ವಿಧಿ ಲಿಖತ ಎನ್ನಬಹುದು. ಬಳಿಕ ನನಗೆ ತಿಳಿದಿದ್ದೇನೆಂದರೆ. ನಾನು ಅಲ್ಲಿರುವುದನ್ನು ತಿಳಿದೇ ಶೊಯೇಬ್‌ ಅಲ್ಲಿಗೆ ಬಂದಿದ್ದರು ಎಂಬುದು. ನಾನು ನಮ್ಮಿಬ್ಬರ ಭೇಟಿ ವಿಧಿ ಲಿಖಿತ ಎಂದುಕೊಂಡಿದೆ. ಆದರೆ ಬಳಿಕ ಅದೆಲ್ಲವೂ ಸುಳ್ಳಾಯಿತು,” ಎಂದು ಸಾನಿಯಾ ಅವರನ್ನು ಭೇಟಿಯಾಗಲು ಶೊಯೇಬ್‌ ನಡೆಸಿದ್ದ ಸರ್ಕಸ್‌ ಕುರಿತಾಗಿ ಸಾನಿಯಾ ವಿವರಿಸಿದ್ದಾರೆ.

ತಾಯ್ತನದ ಬಳಿಕ ದೇಹದ ತೂಕ ಹೆಚ್ಚಿಸಿಕೊಂಡಿದ್ದ ಸಾನಿಯಾ, ಟೆನಿಸ್‌ಗೆ ಮರಳುವ ಸಲುವಾಗಿ ಕಠಿಣ ವ್ಯಾಯಾಮ ಮತ್ತು ಯೋಗಾ ಮಾಡುವ ಮೂಲಕ ಬರೋಬ್ಬರಿ 26 ಕೆ.ಜಿ ಗಳಿಗೂ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ಹೊಬಾರ್ಟ್‌ ಓಪನ್‌ ಮೂಲಕ ಅಂಗಣಕ್ಕೆ ಮರಳುವುದಾಗಿ ಘೋಷಿಸಿರುವ ಸಾನಿಯಾ, ಇದಕ್ಕೂ ಮುನ್ನ ಮುಂಬೈನಲ್ಲಿ ನಡೆಯಲಿರುವ ಐಟಿಎಫ್‌ ಟೂರ್ನಿಯೊಂದರಲ್ಲಿ ಆಡುವ ಸಾಧ್ಯತೆ ಇದೆಯಾಗಿಯೂ ಹೇಳಿದ್ದಾರೆ.

“ಹೊಬಾರ್ಟ್‌ನಲ್ಲಿ ಆಡಲಿದ್ದೇನೆ. ಬಳಿಕ ಆಸ್ಟ್ರೇಲಿಯಾ ಓಪನ್‌. ಇದಕ್ಕೂ ಮುನ್ನ ಮುಂಬೈನಲ್ಲಿ ಮುಂದಿನ ತಿಂಗಳು ನಡೆಯಲಿರುವ ಥಟಿಎಫ್‌ ಟೂರ್ನಿಯಲ್ಲೂ ಆಡುವ ಸಾಧ್ಯತೆ ಇದೆ. ಆದರೆ, ನನ್ನ ಅಂಗೈ ಮಣಿಕಟ್ಟು ಹೇಗಿದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ,” ಎಂದು ಹೇಳಿದ್ದಾರೆ. ಸಾನಿಯಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಒಟ್ಟು 6 ಗ್ರ್ಯಾಂಡ್‌ ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Comments are closed.