ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹಣದ ಹೊಳೆ ಹರಿಸಿದ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿ ಮಾಡಿದ್ದಾರೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್ವೆಲ್ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಅಲ್ಲದೆ ಭಾರತೀಯ ದೇಶಿ ಕ್ರಿಕೆಟ್ನಲ್ಲಿ ಮಿಂಚಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಯುವ ಆಟಗಾರರಿಗೂ ಕೆಲವು ಫ್ರಾಂಚೈಸಿ ಮಣೆಹಾಕಿದೆ. ಯಶಸ್ವಿ ಜೈಸ್ವಾಲ್, ರೋಹನ್ ಕದಮ್, ಪ್ರಯಾಮ್ ಗರ್ಗ್ ಸೇರಿ ಕೆಲ ಆಟಗಾರರು ಐಪಿಎಲ್ನಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಈ ನಡುವೆ ಇಂಗ್ಲಿಷ್ ವೆಬ್ಸೈಟ್ ಒಂದು ಪ್ರಕಟಿಸಿದ ವರದಿ ಪ್ರಕಾರ, 2020 ಐಪಿಎಲ್ ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆಯಂತೆ. ಐಪಿಎಲ್ ಮಂಡಳಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಮಾರ್ಚ್ 28 ರಿಂದ ಮೇ 24ರ ವರೆಗೆ 13ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ನಡೆಯಲಿದೆಯಂತೆ.
ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ ರದ್ದು ಮಾಡುವುದಾಗಿ ಹೇಳಿದ್ದಾರೆ. ಓಪನಿಂಗ್ ಸೆರೆಮನಿಗೆ ಬಾಲಿವುಡ್ ತಾರೆಯರು, ಗಾಯಕರು, ನೃತ್ಯ ಪಟುಗಳು ಹೀಗೆ ಅನೇಕ ಸೆಲೆಬ್ರಿಟಿಗಳು ಹಾಜರಿರುತ್ತಾರೆ. ಇವರಿಗೆ ಕೋಟಿಗಟ್ಟಲೆ ಹಣ ನೀಡಬೇಕಾಗುತ್ತದೆ.
ಹೆಚ್ಚು ಹಣ ಖರ್ಚು ಮಾಡುವ ಬದಲು ಉಳಿತಾಯದ ಉದ್ದೇಶದ ಜೊತೆಗೆ ಕ್ರಿಕೆಟ್ ಅಭಿಮಾನಿಗಳು ಕೂಡ ಇದಕ್ಕೆ ಜಾಸ್ತಿ ಆಸಕ್ತಿ ತೋರಿಸದ ಹಿನ್ನಲೆ ಉದ್ಘಾಟನಾ ಸಮಾರಂಭ ರದ್ದು ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಒಂದು ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಸುಮಾರು 30 ಕೋಟಿಯಷ್ಟು ಖರ್ಚಾಗುತ್ತಿತ್ತು. ಈ ಹಣವನ್ನು ಉಳಿತಾಯ ಮಾಡುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2020ರ ಐಪಿಎಲ್ನ ಈ ಹಣದಲ್ಲಿ 11 ಕೋಟಿಯನ್ನು ಇಂಡಿಯನ್ ಆರ್ಮಿಗೆ ಮತ್ತು 7 ಕೋಟಿಯನ್ನು ಸಿಆರ್ಪಿಎಫ್ಗೆ ಹಾಗೂ ನೌಕಾ ಮತ್ತು ವಾಯು ಸೇನೆಗೆ ತಲಾ ಒಂದು ಕೋಟಿ ಕೊಡಲು ಬಿಸಿಸಿಐ ನಿರ್ಧಾರಮಾಡಿದೆ ಎನ್ನಲಾಗಿದೆ.
Comments are closed.