ಕ್ರೀಡೆ

ದೀರ್ಘಕಾಲ ಪ್ರೇಯಸಿ ಜೊತೆಗೆ ಹಸೆಮಣೆ ಏರಲು ಸಜ್ಜಾದ ವಿಂಡೀಸ್‌ ಕ್ರಿಕೆಟಿಗ!

Pinterest LinkedIn Tumblr


ಬೆಂಗಳೂರು: ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಮ್ರಾನ್‌ ಹೆಟ್ಮಾಯೆರ್‌, ಇತ್ತೀಚೆಗಷ್ಟೇ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 7.75 ಕೋಟಿ ರೂ. ಬೆಲೆಗೆ ಮಾರಾಟಗೊಂಡು ಭಾರಿ ಸುದ್ದಿಯಾಗಿದ್ದರು.

ಇದೀಗ ಕ್ರಿಸ್‌ಮಸ್‌ ದಿನದಂದು ತಮ್ಮ ದೀರ್ಘಕಾಲ ಪ್ರೇಯಸಿ ಜೊತೆಗೆ ವಿವಾಹ ಬಂಧನಕ್ಕೆ ಕಾಲಿಡುವುದಾಗಿ ಘೋಷಿಸಿ ಸುದ್ದಿಯಾಗಿದ್ದಾರೆ. 23 ವರ್ಷದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಶಿಮ್ರಾನ್‌ ಹೆಟ್ಮಾಯೆರ್‌, ಇತ್ತೀಚಿನ ದಿನಗಳಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್‌ ಮೂಲಕ ವೆಸ್ಟ್‌ ಇಂಡೀಸ್‌ ತಂಡದ ಭವಿಷ್ಯದ ತಾರೆಯಾಗಿ ಹೊರಹೊಮ್ಮಿದ್ದಾರೆ.

ಐಪಿಎಲ್‌ನಲ್ಲಿ ಕಳೆದ ಆವೃತ್ತಿಯಲ್ಲಿ ರಾಯಲ್‌ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ ಅನುಭವ ಹೊಂದಿರುವ ಹೆಟ್ಮಾಯೆರ್‌, ತಮ್ಮ ಪ್ರೇಯಸಿ ಉಮ್ರಾವ್‌ ನಿರ್ವಾಣಿ ಅವರನ್ನು ಮದುವೆಯಾಗುವಂತೆ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ನಿವೇದನೆ ಇಟ್ಟಿದ್ದಾರೆ. ಇದಕ್ಕೆ ಉಮ್ರಾವ್‌ ಕೂಡ ಸಮ್ಮತಿಸಿದ್ದು, ಇಬ್ಬರೂ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಈ ವಿಚಾರವನ್ನು ಖಾತ್ರಿ ಪಡಿಸಿದ್ದಾರೆ.

2017ರಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಪದಾರ್ಪಣೆ ಮಾಡಿದ ಶಿಮ್ರಾನ್‌ ಹೆಟ್ಮಾಯೆರ್‌, ಈವರೆಗೆ 16 ಟೆಸ್ಟ್‌, 43 ಏಕದಿನ ಮತ್ತು 20 ಅಂತಾರಾಷ್ಟ್ರೀಯ ಟಿ0 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮಾದರಿಯಿಂದ ಸಮಗ್ರ 2000ಕ್ಕೂ ಅಧಿಕ ರನ್‌ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲೂ ಅಬ್ಬರಿಸಿದ್ದ ಹೆಟ್ಮಾಯರ್‌, ಒಂದು ಶತಕ ಸೇರಿದಂತೆ 3 ಪಂದ್ಯಗಳಿಂದ 60ರ ಸರಾಸರಿಯಲ್ಲಿ 180 ರನ್‌ ಬಾರಿಸಿದ್ದರು. ಅಷ್ಟೇ ಪಂದ್ಯಗಳ ಟಿ20 ಸರಣಿಯಲ್ಲೂ 120 ರನ್‌ಗಳನ್ನು ಚಚ್ಚಿದ್ದರು.

ಸೋಷಿಯಲ್‌ ಮೀಡಿಯಾ ಮೂಲಕ ಬಹಿರಂಗ
ಈ ವರ್ಷದ ಕೊನೆಯ ತಿಂಗಳೂ ಹೆಟ್ಮಾಯೆರ್‌ಗೆ ಅದೃಷ್ಠ ತಂದಂತಿದೆ. ಮೊದಲಿಗೆ ಭಾರತ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ಮತ್ತು ಐಪಿಎಲ್‌ನಲ್ಲಿ 7.75 ಕೋಟಿ ರೂ. ಪಡೆದದ್ದು, ಇದೀಗ ಮದುವೆಗೆ ಪ್ರೇಯಸಿಯಿಂದ ಗ್ರೀನ್‌ ಸಿಗ್ನಲ್‌ ಲಭ್ಯವಾಗಿದೆ. ಡಿ.25ರ ರಾತ್ರಿ ತಮ್ಮ ಪ್ರೇಯಸಿ ಬಳಿ ವಿವಾಹವಾಗುವುದಾಗಿ ಹೆಟ್ಮಾಯೆರ್‌ ಕೇಳಿದ್ದು, ಆಕೆ ಸಮ್ಮತಿಸಿದ ಬಳಿಕ ಉಂಗುರವನ್ನೂ ತೊಡಿಸಿದ್ದಾರೆ. “ನನ್ನ ಪ್ರಿಯಕರ ಕ್ರಿಸ್‌ಮಸ್‌ ದಿನದಂದು ಮದುವೆಯಾಗುವುದಾಗಿ ಕೇಳಿದ. ಅದಕ್ಕೆ ಸಮ್ಮತಿಸಿದ್ದೇನೆ. ಐ ಲವ್‌ ಯು ಬೇಬಿ,” ಎಂದು ನಿರ್ವಾಣಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments are closed.