ಕರಾವಳಿ

ಕಿಕ್ ಬಾಕ್ಸಿಂಗ್ ಚಾಂಪಿಯನ್ ಅನೀಶ್ ಶೆಟ್ಟಿಗೆ ಸನ್ಮಾನ- ಬಾಕ್ಸಿಂಗ್ ಗುಟ್ಟು ಬಿಚ್ಚಿಟ್ಟ ಸಾಧಕ(Video)

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಥೈಲ್ಯಾಂಡ್ ನಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ (ಮೊವಾಯ್ ಥಾನ್ ಕಿಕ್ ಬಾಕ್ಸಿಂಗ್) ಚಾಂಪಿಯನ್ ಆಗಿ ಹೊರಹೊಮ್ಮಿದ ಕುಂದಾಪುರದ ಅನೀಶ್ ಶೆಟ್ಟಿ ಕಟ್ಕೆರೆ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ಜನಸೇವಾ ಟ್ರಸ್ಟ್ ಮೂಡುಗಿಳಿಯಾರು,ಯುವ ಬಂಟರ ಸಂಘ ಕುಂದಾಪುರ, ಯುವಶಕ್ತಿ ಯುವಕ ಮಂಡಳ ಕಟ್ಕೆರೆ- ಕೋಟೇಶ್ವರ ಹಾಗೂ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚರ್ಚ್ ರಸ್ತೆ ಕುಂದಾಪುರ ಇವರ ಆಶ್ರಯದಲ್ಲಿ ಶನಿವಾರ ಕುಂದಾಪುರದ ಆರ್.ಎನ್. ಶೆಟ್ಟಿ ಹಾಲ್‌ನ ಸಭಾಂಗಣದಲ್ಲಿ ನಡೆಯಿತು.

ಕಿಕ್ ಬಾಕ್ಸಿಂಗ್ ಚಾಂಪಿಯನ್ ಅನೀಶ್ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಛಲದ ಜೊತೆಗೆ ಆತ್ಮವಿಶ್ವಾಸವೊಂದು ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ತಲುಪಬೇಕಾದ ಗುರಿಯ ಬಗ್ಗೆ ಚಿಂತನೆ, ಅಧ್ಯಯನ ಹಾಗೂ ಆಸಕ್ತಿ ಇದ್ದಾಗ ಸಾಧನೆ ಸಾಧ್ಯವಿದೆ. ಕ್ರೀಡೆಗೆ ಪ್ರೋತ್ಸಾಹ ಹೆಚ್ಚೆಚ್ಚು ಸಿಕ್ಕಿದಾಗ ನಮ್ಮಂತಹ ಕ್ರೀಡಾಳುಗಳು ಚಾಂಪಿಯನ್ ಆಗಲು ಸಾಧ್ಯವಿದೆ. ಕ್ರೀಡಾಪಟುಗಳು ಕಷ್ಟದಿಂದ ಬಂದವರಾದ್ದರಿಂದ ಅವರು ಜನರ ಭಾವನೆಗಳಿಗೆ ಸಕಾರಾತ್ಮಕವಾಗಿ ಬೆಲೆಕೊಡುತ್ತಾರೆ. ಹುಟ್ಟುರಿನಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ನಿಜಕ್ಕೂ ಸಂತಸವಾಗುತ್ತಿದೆ ಎಂದರು.

ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘ ಮಾತ್ರ ಸಂಘದ ಕುಂದಾಪುರ ತಾಲೂಕು ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ಆವರ್ಸೆ, ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಅಮಾಸೆಬೈಲು, ಉದ್ಯಮಿಗಳಾದ ಜೆ.ಪಿ. ಶೆಟ್ಟಿ ಕಟ್ಕೆರೆ, ಕಮಲಕಿಶೋರ್ ಹೆಗ್ಡೆ, ಅನೀಶ್ ಶೆಟ್ಟಿ ಸೋದರ ಹರ್ಷವರ್ಧನ್ ಶೆಟ್ಟಿ, ಯುವಶಕ್ತಿ ಯುವಕ ಮಂಡಲದ ಕಟ್ಕೆರೆ ಇದರ ಅಧ್ಯಕ್ಷ ಗಣೇಶ್ ಶೆಟ್ಟಿ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಮೊದಲಾದವರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಚಿನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೋಟೇಶ್ವರದಿಂದ ಮೆರವಣಿಗೆ:
ಕಿಕ್ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆದ ಅನೀಶ್ ಶೆಟ್ಟಿಯವರನ್ನು ಕೋಟೇಶ್ವರದ ಹಾಲಾಡಿ ರಸ್ತೆಯಿಂದ ಕುಂದಾಪುರ ಹಳೆ ಬಸ್ ನಿಲ್ದಾಣದ ತನಕ ತೆರೆದ ವಾಹನದಲ್ಲಿ ಕುಳ್ಳೀರಿಸಿಕೊಂಡು ಮೆರವಣಿಗೆ ಮೂಲಕ ಕರೆತರಲಾಯಿತು. ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅನೀಶ್ ಶೆಟ್ಟಿಯವರನ್ನು ಅಭಿನಂದಿಸಿದರು. ಈ ಸಂದರ್ಭ ಬಿಜೆಪಿ ಮಾಜಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಯುವ ಬರಹಗಾರ ಪ್ರವೀಣ್ ಯಕ್ಷಿಮಠ ಮೊದಲಾದವರು ಇದ್ದರು.

ಮನೆಯಲ್ಲಿ ಸುಳ್ಳು ಹೀಳಿದ್ದ ಅನೀಶ್!
ಕಿಕ್ ಬಾಕ್ಸಿಂಗ್ ಬಗ್ಗೆ ಆಸಕ್ತಿ ಇತ್ತು. ಆದರೆ ಮನೆಯವರು ಬಿಡುವುದಿಲ್ಲ ಎಂಬುದು ತಿಳಿದಿತ್ತು. ಥೈಲ್ಯಾಂಡ್‌ನಲ್ಲಿ ಸಾಪ್ಟ್‌ವೇರ್ ಪ್ರಾಜೆಕ್ಟ್ ಇದೆ ಎಂದು ಮನೆಯವರಲ್ಲಿ ಸುಳ್ಳು ಹೇಳಿ ಸ್ಪರ್ಧೆಗೆ ತೆರಳಿದ್ದೆ. ಅಲ್ಲದೇ ಕೆಲವು ಸ್ನೇಹಿತರ ಬಳಿ ಕಿಕ್ ಬಾಕ್ಸಿಂಗ್ ಹೋಗುವ ಬಗ್ಗೆ ತಿಳಿಸಿದ್ದೆ. ಕೆಲವರು ನನ್ನನ್ನು ಪ್ರೋತ್ಸಾಹಿಸುವುದು ಬಿಟ್ಟು ಗೇಲಿ ಮಾಡಿದ್ದರು. ಆಗಲೇ ನನಗೆ ಸಾಧಿಸುವ ಬಯಕೆ ಹೆಚ್ಚಾಗಿತ್ತು. ನನ್ನ ಕೋಚ್ ನನಗೆ ಅತೀವ ಸ್ಪೂರ್ತಿ ತುಂಬಿದ್ದರು. ನಾನು ಸ್ಟ್ರೀಟ್ ಫೈಟರ್ ಆಗಿ ಇದೀಗಾ ಚಾಂಪಿಯನ್ ಆಗುವ ಮೊದಲು ಬಾಕ್ಸಿಂಗ್ ಅನ್ನು ಯೂಟ್ಯೂಬ್ ನಲ್ಲಿ ನೋಡಿ ಕಲಿತಿದ್ದೆ.
– ಅನೀಶ್ ಶೆಟ್ಟಿ (ಕಿಕ್ ಬಾಕ್ಸಿಂಗ್ ಚಾಂಪಿಯನ್)

(ವರದಿ- ಯೋಗೀಶ್ ಕುಂಭಾಸಿ)

 

Comments are closed.