ಕ್ರೀಡೆ

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ!

Pinterest LinkedIn Tumblr

ರಾಜ್ ಕೋಟ್: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೇ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬ ಅವರು ವಾಗ್ವಾದ ನಡೆಸಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಅವರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿದೇ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅಲ್ಲದೆ ಅವರೊಂದಿಗೆ ವಾಗ್ವಾದ ನಡೆಸಿ ಇದೀಗ ವ್ಯಾಪಕ ಚರ್ಚೆಗೀಡಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ ಕೋಟ್ ಪೊಲೀಸ್ ಉಪಾಯುಕ್ತ ಮನೋಹರ್ ಸಿಂಗ್ ಅವರು, ರಿವಾಬಾ ಜಡೇಜಾ ಮತ್ತು ಕಾನ್‌ಸ್ಟೆಬಲ್ ಇಬ್ಬರೂ ಪರಸ್ಪರ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಗುಜರಾತ್ ನ ರಾಜ್​ಕೋಟ್​ನ ಕಿಸಾನ್​ಪಾರ ರಸ್ತೆಯಲ್ಲಿ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ಜಡೇಜಾ ದಂಪತಿಯ ಕಾರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಇಬ್ಬರೂ ಮಾಸ್ಕ್ ಧರಿಸದೇ ಇರುವುದನ್ನು ಪೊಲೀಸರು ನೋಡಿ ಪ್ರಶ್ನಿಸಿದ್ದಾರೆ. ಮಾಸ್ಕ್ ಧರಿಸದಿರುವುದಕ್ಕೆ ದಂಡ ಪಾವತಿಸುವಂತೆ ಕೇಳಿದ್ದಾರೆ. ಹಾಗೆಯೇ ಪರವಾನಗಿ ಪರಿಶೀಲನೆಗೆ ಕೇಳಿದಾಗ ಕುಪಿತಗೊಂಡ ರವೀಂದ್ರ ಜಡೇಜಾ ಮತ್ತು ಪತ್ನಿ ರಿವಾಬ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನು ರವೀಂದ್ರ ಜಡೇಜಾ ದಂಪತಿಗಳೊಂದಿಗೆ ವಾಗ್ವಾದ ನಡೆಸಿದ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಸೋನಾಲ್ ಗೊಸಾಯಿ ಅತೀವ ಒತ್ತಡದಿಂದಾಗಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಬಳಿಕ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ ಎನ್ನಲಾಗಿದೆ.

Comments are closed.