ಕರ್ನಾಟಕ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್. ಕೆ. ಉತ್ತಪ್ಪ

Pinterest LinkedIn Tumblr


ಗೋಣಿಕೊಪ್ಪ: ಪುಟ್ಟಿಚಂಡ ಸಂಜನಾ ಅವರೊಂದಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರ ಎಸ್. ಕೆ. ಉತ್ತಪ್ಪ ಅವರು ಇಂದು (ರವಿವಾರ) ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‌ನಲ್ಲಿ ಸರಳ ವಿವಾಹ ಕಾರ್ಯಕ್ರಮದಲ್ಲಿ ಕೊಡವ ಸಂಪ್ರದಾಯದಂತೆ ನೆರವೇರಿತು. ಮೂಲತಃ ಬೊಳ್ಳರಿಮಾಡ್ ಗ್ರಾಮದ ಪುಟ್ಟಿಚಂಡ ಉತ್ತಪ್ಪ- ಲೀಲಾ ದಂಪತಿಯ ಪುತ್ರಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸಂಜನಾ ಅವರೊಂದಿಗೆ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಭಾನುವಾರ ಮಧ್ಯಾಹ್ನ ಕೊಡವ ಸಂಪ್ರದಾಯದಂತೆ ಊರ್ ಕೂಡುವೋ ಶಾಸ್ತ್ರ ನಡೆಸಿ, ಮೆಹಂದಿ ಇಟ್ಟು ಸಂಭ್ರಮಿಸಿದರು. ನಂತರ ಸಂಜೆ ಹಸೆಮಣೆ ಏರಿದರು. ಉತ್ತಪ್ಪ ಅವರ ತಂದೆ ಸಣ್ಣುವಂಡ ಕುಶಾಲಪ್ಪ, ತಾಯಿ ನೀರಜ್ ಕುಶಾಲಪ್ಪ, ಸಹೋದರ ಚಿಣ್ಣಪ್ಪ ದಂಪತಿ ಸೇರಿ ಕುಟುಂಬಸ್ಥರು ಹಾಜರಿದ್ದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಉತ್ತಪ್ಪ, 2012ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರರಾಗಿ ಪದಾರ್ಪಣೆ ಮಾಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 3 ಗೋಲು ಹೊಡೆದು ಗಮನ ಸೆಳೆದಿದ್ದ ಇವರು, 2012ರ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 2016ರಲ್ಲಿ ನಡೆದ ರಿಯೋ ಒಲಿಂಪಿಕ್‌ನಲ್ಲಿ ಆಡಿದ್ದರು. ಇಲ್ಲಿಯವರೆಗೂ 164 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

Comments are closed.