ಕ್ರೀಡೆ

ಸಚಿನ್‌ ತೆಂಡೂಲ್ಕರ್ ಕಟೌಟ್‌ಗೆ ಮಸಿ ಬಳಿದು ಪ್ರತಿಭಟಿಸಿದ ಕೇರಳ ಯೂತ್ ಕಾಂಗ್ರೆಸ್..!

Pinterest LinkedIn Tumblr

ಕೊಚ್ಚಿನ್‌: ರೈತ ಹೋರಾಟಕ್ಕೆ ಬೆಂಬಲ ನೀಡದೆ ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿ ಸೆಲೆಬ್ರಿಟಿಗಳ ಹಸ್ತಕ್ಷೇಪ ಒಳಿತಲ್ಲ ಎಂದು ಟ್ವೀಟ್‌ ಮಾಡಿ ರೈತ ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಸಚಿನ್ ತೆಂಡೂಲ್ಕರ್‌ ವಿರುದ್ಧ ಕೇರಳ ಯೂತ್‌ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿನ್‌ ಕಟೌಟ್‌ಗೆ ಮಸಿ ಬಳಿದು ಪ್ರತಿಭಟನೆ ನಡೆಸಿದೆ. ಈ ದೇಶದ ರೈತರ ಹೋರಾಟಕ್ಕೆ ಬೆಂಬಲಿಸುವ ಬದಲು ಸರ್ಕಾರದ ಪರ ಬ್ಯಾಟ್‌ ಬೀಸಿದ್ದಾರೆ ಎಂದು ಕೊಚ್ಚಿನ್‌ನಲ್ಲಿ ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಮೆರಿಕ ಪಾಪ್ ಗಾಯಕಿ ರಿಹಾನಾ, ಪರಿಸರಪರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಸೇರಿದಂತೆ ಹಲವು ವಿದೇಶಿ ಸೆಲೆಬ್ರೆಟಿಗಳು ಭಾರತದ ರೈತರ ಹೋರಾಟದ ಪರ ಧ್ವನಿಗೂಡಿಸಿದ್ದರು. ವಿದೇಶಿ ಸೆಲೆಬ್ರಿಟಿಗರು ರೈತರ ಪ್ರತಿಭಟನೆ ಪರ ಮಾತನಾಡುತ್ತಿದ್ದಂತೆ ಭಾರತದ ವಿರುದ್ಧ ವಿಶ್ವಮಟ್ಟದಲ್ಲಿ ಸಂಚು ರೂಪಿಸಲಾಗಿದೆ ಎಂಬ ವಾದ ಶುರುವಾಗಿತ್ತು. ಅಲ್ಲದೇ ಭಾರತದ ಸಿನಿಮಾ ರಂಗ, ಕ್ರಿಕೆಟಿಗರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರದ ಪರ ಟ್ವೀಟ್‌ ಮಾಡಿ ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿಗರ ಹಸ್ತಕ್ಷೇಪ ಸರಿಯಲ್ಲ ಎಂದು ಟ್ವೀಟ್‌ ಮಾಡಿದ್ದರು.

ಈ ಮದ್ಯೆ ಸಚಿನ್ ತೆಂಡೂಲ್ಕರ್ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರೈತರ ಹೋರಾಟಕ್ಕೆ ಒಂದೇ ಒಂದು ದಿನ ಬೆಂಬಲ ಸೂಚಿಸದ ಭಾರತದ ಸೆಲೆಬ್ರಿಟಿಗಳು ಈಗ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆಂದು ಕೇರಳ ಯೂತ್‌ ಕಾಂಗ್ರೆಸ್‌ ಆರೋಪಿಸಿದೆ.

ಕೇರಳದಲ್ಲಿ ಸಚಿನ್ ವಿರುದ್ಧದ ಪ್ರತಿಭಟನೆ ಟ್ರೆಂಡಿಂಗ್ ಆಗಿದ್ದು, ವಿಶ್ವವಿಖ್ಯಾತ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ ಅವರು, 2015ರಲ್ಲಿ ಸಚಿನ್‌ ತೆಂಡೂಲ್ಕರ್‌ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದ ವೇಳೆ ಕೇರಳದಲ್ಲಿ ಶರಪೋವಾ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಇದೀಗ ಕೇರಳಿಗರು ಮರಿಯಾ ಶರಪೋವಾಗೆ ಕ್ಷಮೆ ಕೇಳಿದ್ದಾರೆ. ‘ಕ್ಷಮಿಸಿ ಮರಿಯಾ, ನೀವು ಅಂದು ಸಚಿನ್ ಯಾರೆಂದು ಕೇಳಿದಾಗ ನಿಮ್ಮ ವಿರುದ್ಧ ಮುಗಿಬಿದ್ದಿದ್ದೆವು. ಆದರೆ ನೀವು ಹೇಳಿದ್ದು ಸರಿ. ಸಚಿನ್ ನಮಗೆ ಆಟಗಾರನಾಗಿ ಮಾತ್ರ ಗೊತ್ತಿತ್ತು.ವ್ಯಕ್ತಿಯಾಗಿ ಗೊತ್ತಿಲ್ಲ. ಕ್ಷಮಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದಾರೆ.

ಚಿತ್ರ ಕೃಪೆ: ANI

Comments are closed.