(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಂದಾಪುರ ತಾಲೂಕಿನ ಆಲೂರು ನಿವಾಸಿ ಅಂಕಿತಾ ಆಲೂರು ಇವರ ತ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ಗೆದ್ದು ವಿಭಾಗೀಯ ಮಟ್ಟಕ್ಕೆ ಆಯ್ಕೆ ಆಗಿದೆ.
ಬೈಂದೂರು ವಲಯ ಮಟ್ಟದಲ್ಲಿ ಗೆದ್ದಿರುವ ಇವರ ತಂಡ ಶುಕ್ರವಾರ ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೊಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನದಲ್ಲಿ ಗೆಲ್ಲುವ ಮೂಲಕ ಮುಂದೆ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ತಂಡದಲ್ಲಿ ತಂಡದ ನಾಯಕಿ ಅಂಕಿತಾ, ಹಾಗೆ ತಂಡದ ಪ್ರತಿಭಾನ್ವಿತ ಕ್ರೀಡಾಳುಗಳಾಗಿರುವ ಲತಾ, ಸಂಗೀತ, ರಿತಿಕ್ಷಾ, ರಶ್ಮಿತಾ, ಜೋತಿ, ಮಧುಕುಮಾರಿ, ಸೌಮ್ಯ, ಸಾನ್ವಿ ಉತ್ತಮ ಪ್ರದರ್ಶನ ನೀಡಿ ಗೆಲುವು ಪಡೆದರು.
ಆಲೂರಿನ ಗಣೇಶ ಮತ್ತು ಮಾಲತಿ ದಂಪತಿಗಳ ಪುತ್ರಿ ಅಂಕಿತಾ ಈ ಸಾಧನೆ ಮಾಡಿದವರು. ಈ ದಂಪತಿಗಳ ಪುತ್ರ ಪ್ರತಿಭಾನ್ವಿತ ವಿದ್ಯಾರ್ಥಿ ಅಖಿಲೇಶ್ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 602 ಅಂಕ ಪಡೆದು ಕೊರಗ ಸಮುದಾಯದ ಮಕ್ಕಳಿಗೆ ಮಾದರಿಯಾಗಿದ್ದಲ್ಲದೆ ತನ್ನ ಸಾಧನೆ ಮೂಲಕ ಸಮುದಾಯದ ಇತರರಿಗೆ ಪ್ರೇರಣೆಯಾಗಿ ಕೊರಗ ಸಮುದಾಯದ ಮಕ್ಕಳು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಭರವಸೆ ತಂದಿದ್ದರು. ಇದೀಗಾ ಅಖಿಲೇಶ್ ಅವರ ಸಹೋದರಿ, ಮಹತ್ವದ ಸಾಧನೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ್ದಾರೆ.
ಕುಂದಾಪುರ ತಾಲೂಕಿನ ಆಲೂರು ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ಅಂಕಿತಾ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಆಲೂರಿನಂತಃ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾ ಆಸಕ್ತರಿಗೆ ಸಿಗಬಹುದಾದ ಯಾವುದೇ ವ್ಯವಸ್ಥೆಗಳಿಲ್ಲದ ಸಂದರ್ಭದಲ್ಲೂ ಈ ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯವಾಗಿದೆ. ಅಂಕಿತಾ ಮತ್ತು ತಂಡದವರಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ ಅಭಿನಂದನೆ ಸಲ್ಲಿಸಿದ್ದಾರೆ.
Comments are closed.