ಕುಂದಾಪುರ: ಕೊರೋನಾ ಸಂದರ್ಭದಲ್ಲಿ ಗುರುಗಳ ಮಹತ್ವದ ಸ್ಥಾನವನ್ನು ಮೊಬೈಲ್ ಕಸಿದಿತ್ತು. ವಿದ್ಯಾಭ್ಯಾಸದ ಬದಲು ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚಿದ ಇಂತಹ ಸಂದರ್ಭದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜನೆ ಅನಿವಾರ್ಯ ಎಂದು ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ ಹೇಳಿದರು.
ಅವರು ಸೋಮವಾರ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆ ನೇತೃತ್ವದಲ್ಲಿ ನಡೆದ ಸಿಬಿಎಸ್ಸಿ- ಐಸಿಎಸ್‌ಇ ಮಾಧ್ಯಮದ ಅಂತರ್ ಶಾಲೆಗಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಜೀವನ ಉತ್ತಮವಾಗಿರುವಂತೆ ಸದ್ಬಳಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಗಳಿಸುವ ಛಲ, ಗುರಿ ಇರಬೇಕು. ಮೊಬೈಲ್ ಆಪ್-ಗೇಮ್ಸ್‌ಗಳತ್ತ ಮಕ್ಕಳು ಆಸಕ್ತರಾಗುತ್ತಿದ್ದು, ಅದರಿಂದ ಹೊರಬರಲು ಇಂತಹ ಕಬಡ್ಡಿ ಪಂದ್ಯಾಟಗಳು ಸಹಕಾರಿಯಾಗುತ್ತದೆ. ಆಟದಲ್ಲಿ ಗೆದ್ದವರು ನಾಯಕನಾದರೆ, ಸೋತವನು ಮಾರ್ಗದರ್ಶಕನಾಗುತ್ತಾನೆ. ಗುರುಕುಲ ವಿದ್ಯಾಸಂಸ್ಥೆ ಹೆಸರಿಗೆ ತಕ್ಕಂತೆ ಕಲಿಕಾ ವಿಧಾನ, ಪರಿಸರ ರೂಪಿಸಿದೆ. ಇಲ್ಲಿನ ವಾತಾವರಣವೇ ಒಂದು ರೀತಿಯಲ್ಲಿ ಖುಷಿ ಕೊಡುತ್ತಿದೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಲು ಆಯೋಜಿಸುವ ಒಂದೊಂದು ಕಾರ್‍ಯಕ್ರಮವು ವಿಶಿಷ್ಟವಾಗಿರುತ್ತದೆ. ಸಂಸ್ಥೆಯಲ್ಲಿರುವ ಪಾರಂಪರಿಕ ಸಂಸ್ಕೃತಿ ಬಗೆಗಿನ ಕಾಳಜಿ ಶ್ಲಾಘನೀಯ. ಈ ಸಂಸ್ಥೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯ ವೃದ್ಧಿಗೆ ಕಬಡ್ಡಿಯಂತಹ ಕ್ರೀಡೆ ಸಹಕಾರಿ. ನಮ್ಮ ದೇಸಿ ಕ್ರೀಡೆಯಾಗಿರುವ ಕಬಡ್ಡಿಗೂ ಈಗ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿರುವುದು ಖುಷಿಯ ವಿಚಾರ ಎಂದರು.
ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಮಕ್ಕಳು, ಸಂಸ್ಥೆಯ ಶಿಕ್ಷಕರು, ಸಿಬಂದಿ ಉಪಸ್ಥಿತರಿದ್ದರು.
15 ಶಾಲೆಗಳು ಭಾಗಿ
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 15 ಸಿಬಿಎಸ್ಸಿ- ಐಸಿಎಸ್‌ಇ ಶಾಲೆಗಳ ವಿವಿಧ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಮೋಹನ್ ಕೆ. ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.
Comments are closed.