ಸಿಂಗಾಪುರ: ನ. 25ರಿಂದ ಶುರುವಾದ ವಿಶ್ವ ಚಾಂಪಿಯನ್‌ಶಿಪ್ ಡಿ. 12ಕ್ಕೆ ಮುಗಿದಿದೆ. ಭಾರತದ ಡಿ.ಗುಕೇಶ್ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ (32)ವಿರುದ್ಧ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದ 18ನೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ 18ನೇ ವರ್ಷದಲ್ಲೇ ಈ ಸಾಧನೆ ಮಾಡುವ ಮೂಲಕ, ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಮತ್ತು ನಾರ್ವೆಯ ಮ್ಯಾಗ್ನಸ್ ಕಾಲ್ಸನ್‌ರನ್ನು ಅವರು ಹಿಂದಿಕ್ಕಿ ಇಲ್ಲೂ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಒಟ್ಟು 14 ಪಂದ್ಯಗಳ ಕೂಟದಲ್ಲಿ ಗುಕೇಶ್ 1ನೇ ಪಂದ್ಯವನ್ನೇ ಸೋತಿದ್ದರು. 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಲಿರೆನ್‌ಗೆ ಸಡ್ಡು ಹೊಡೆದರು. ಅನಂತರ ಇಬ್ಬರ ನಡುವಿನ ಪಂದ್ಯಗಳು ಸತತ ಡ್ರಾಗೊಳ್ಳುತ್ತ ಸಾಗಿದವು. 11ನೇ ಪಂದ್ಯವನ್ನು ಗೆದ್ದ ಗುಕೇಶ್ ವಿಶ್ವ ಚಾಂಪಿಯನ್ ಆಗುವ ಸುಳಿವು ನೀಡಿದರು. 12ನೇ ಪಂದ್ಯದಲ್ಲಿ ಲಿರೆನ್ ಗೆದ್ದು ಮತ್ತೆ ಅಂಕ ಸಮಬಲಗೊಳ್ಳುವುದರೊಂದಿಗೆ ಕೂಟದ ರೋಚಕತೆ ತೀವ್ರಗೊಂಡಿತು. 13ನೇ ಪಂದ್ಯವೂ ಡ್ರಾಗೊಂಡಿದ್ದರಿಂದ ಕೂಟ ಎಲ್ಲಿ ಟೈಬ್ರೇಕರ್‌ಗೆ ಹೋಗುವುದೋ ಎಂಬ ಅನುಮಾನ ಮೂಡಿತ್ತು. ಗುರುವಾರ ನಡೆದ 14ನೇ ಪಂದ್ಯದ ಹೊತ್ತಿಗೆ ಇಬ್ಬರ ಅಂಕಗಳೂ ತಲಾ 6.5 ಅಂಕಗಳೊಂದಿಗೆ ಸಮಗೊಂಡಿದ್ದವು. ಇಲ್ಲಿ ಯಾರು ಗೆಲ್ಲುತ್ತಾರೋ ಅವರು ಚಾಂಪಿಯನ್ ಆಗುತ್ತಿದ್ದರು. ಕೂಟದ ನಿಯಮಗಳ ಪ್ರಕಾರ ಮೊದಲು 7.5 ಅಂಕ ಗಳಿಸಿದವರು ವಿಜೇತರಾಗುತ್ತಾರೆ. ಹಾಗಾಗಿ ಗುರುವಾರದ ಪಂದ್ಯಕ್ಕೆ ರೋಚಕತೆ ಬಂದಿತ್ತು. ಒಂದು ವೇಳೆ ಪಂದ್ಯ ಡ್ರಾಗೊಂಡಿದ್ದರೆ ಇಬ್ಬರ ಅಂಕ ತಲಾ 7 ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಟೈಬ್ರೇಕರ್ ಆಡಿಸಬೇಕಾಗುತ್ತಿತ್ತು. ಅದಕ್ಕೆಲ್ಲ ಗುಕೇಶ್ ಅವಕಾಶವೇ ಕೊಡಲಿಲ್ಲ. ಗುರುವಾರವೇ ಗೆದ್ದು ವಿಶ್ವಪಟ್ಟದ ಮೇಲೆ ಕೈಯನ್ನಿಟ್ಟರು.
ಪ್ರಸ್ತುತ ಪಂದ್ಯ 55ನೇ ನಡೆವರೆಗೆ ಪೈಪೋಟಿಯಲ್ಲೇ ನಡೆಯುತ್ತಿತ್ತು. ಈ ಹಂತದಲ್ಲಿ ಒತ್ತಡ ಅನುಭವಿಸಿದ ಲಿರೆನ್ ತಮ್ಮ ಆನೆಯನ್ನು ಬಲಿಕೊಟ್ಟರು. ಅನಂತರ ಅವರ ಕೈಯಿಂದ ಪಂದ್ಯ ತಪ್ಪಿಹೋಯಿತು. 58ನೇ ನಡೆಯಲ್ಲಿ ಆಟ ಮುಗಿದುಹೋಯಿತು. ಅಷ್ಟರಲ್ಲಿ 4 ಗಂಟೆಗಳು ಕಳೆದಿದ್ದವು. ಈ ಕೂಟಕ್ಕೆ ಮೊದಲೇ ಲಿರೆನ್ ಚಾಂಪಿಯನ್ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಹಿಂದಿನ ವಿಶ್ವಚಾಂಪಿಯನ್ ಆಗಿರುವ ಅವರು ಸದ್ಯ ಹೇಳಿಕೊಳ್ಳುವ ಲಯದಲ್ಲಿರಲಿಲ್ಲ. ಅದನ್ನೂ ಚೆಸ್ ಜಗತ್ತು ಹಾಗೆಯೇ ಸ್ವತಃ ಲಿರೆನ್ ಹೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಗುಕೇಶ್ ವಿಶ್ವಪಟ್ಟಕ್ಕೇರಿದರು.
ಇಬ್ಬರ ನಡುವೆ ನಡೆದ 14 ಪಂದ್ಯಗಳಲ್ಲಿ 9 ಪಂದ್ಯ ಡ್ರಾ ಆದವು. ಫಲಿತಾಂಶ ಬಂದಿದ್ದು 5 ಪಂದ್ಯ ಮಾತ್ರ. ಈ ಪೈಕಿ ಗುಕೇಶ್ 3, ಲಿರೆನ್ 2 ಪಂದ್ಯ ಗೆದ್ದಿದ್ದಾರೆ.
Comments are closed.