ಕರಾವಳಿ

ಕುಂಭಾಶಿ ‘ಮಕ್ಕಳ ಮನೆ’ಯಲ್ಲಿ ಕೊರಗ ಸಮುದಾಯದವರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ‘ಲಕ್ಕಿ ಟ್ರೋಫಿ-2025’

Pinterest LinkedIn Tumblr

ಕುಂದಾಪುರ: ಕ್ರೀಡೆಗಳ ಆಯೋಜನೆಯಿಂದ ಸಂಘಟನೆ ಬೆಳೆಯವುದರ ಜೊತೆಗೆ ಸಮಾಜವು ಒಗ್ಗೂಡುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗೀಧಾರಿಕೆಯೇ ಮುಖ್ಯವಾಗಬೇಕು. ಸಮಾಜದ ಹಿರಿಯರ ಹೋರಾಟದ ಫಲವಾಗಿ ಇಂದು ಕೊರಗ ಸಮುದಾಯ ಬೆಳವಣಿಗೆಯ ಬೆಳಕನ್ನು ಸಮಾಜದಲ್ಲಿ ಕಾಣುವಂತಾಗಿದೆ ಎಂದು ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ ಶೆಟ್ಟಿ ಹೇಳಿದರು.

ಕುಂಭಾಸಿಯ ಮಕ್ಕಳ ಮನೆ ವಠಾರದ ಮೈದಾನದಲ್ಲಿ ಲಕ್ಕಿ ಫ್ರೆಂಡ್ಸ್ ಕೋಟ ಇವರ ಆಶ್ರಯದಲ್ಲಿ, ಮಕ್ಕಳ ಮನೆ ಕುಂಭಾಸಿ ಇವರ ಸಹಭಾಗಿತ್ವದಲ್ಲಿ 3ನೇ ಬಾರಿಗೆ ಕೊರಗ ಸಮುದಾಯ ಬಾಂಧವರಿಗಾಗಿ ಭಾನುವಾರ ಜರುಗಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ಯುವಜನ ಸಬಲೀಕರಣ ಮತ್ತು ಕ್ರೀಡಾ  ಇಲಾಖೆಯ ಸಹಾಯಕ  ನಿರ್ದೇಶಕರಾದ ಕುಸುಮಾಕರ್ ಶೆಟ್ಟಿ ಮಾತನಾಡಿ, ಕೊರಗ ಸಮುದಾಯವು ಅತ್ಯಂತ ಬಡ ಹಾಗೂ ಶೋಷಿತ ಸಮುದಾಯದವರಾದರು ಕೂಡ ಈಗ ಹಂತ ಹಂತವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಮುದಾಯದವರು ವಿಶೇಷವಾಗಿ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಹೊಂದಿದ್ದಾರೆ ಎಂದರು.

ಕುಂಭಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ತಾಲ್ಲೂಕು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಗುತ್ತಿಗೆದಾರ ಅರ್ಜುನ್‌ದಾಸ್, ಕುಂಭಾಸಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಾಲು, ಸಮಾಜದ ಮುಖಂಡರಾದ ಸುಬ್ರಾಯ ಮಾಜಾಲಿ, ಗಣೇಶ್ ವಿ ಕುಂದಾಪುರ, ಗಣೇಶ್ ಬಾರ್ಕೂರು, ಲಕ್ಷ್ಮಣ ಮರವಂತೆ, ಶೇಖರ ಮರವಂತೆ ಮತ್ತಿತರರು ಉಪಸ್ಥಿತರಿದ್ದರು.

ಪಾರಿವಾಳವನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಕ್ರೀಡಾಕೂಟ ಪಂದ್ಯಾಟವನ್ನು ಅತಿಥಿಗಳು ಉದ್ಘಾಟಿಸಿದರು. ಕಾಸರಗೋಡು, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ 26 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಮಕ್ಕಳ ಮನೆ ಮುಖ್ಯಸ್ಥರಾದ ಗಣೇಶ್ ವಿ. ಕುಂದಾಪುರ ಸ್ವಾಗತಿಸಿದರು, ಮಕ್ಕಳ ಮನೆ ಶಿಕ್ಷಕಿ ವಿನಿತಾ ಪಡುಕೋಣೆ ಪ್ರಾಸ್ತಾವಿಕ ಮಾತನಾಡಿದರು, ಅಶ್ವಿನಿ ಬಾರ್ಕೂರು ನಿರೂಪಿಸಿದರು.

ಫಲಿತಾಂಶ: ಪ್ರಥಮ ಬಹುಮಾನ-ಸ್ವಾಮಿ ಫ್ರೆಂಡ್ಸ್ ತಲ್ಮಕ್ಕಿ

ದ್ವಿತೀಯ ಬಹುಮಾನ- ಮೆರಿಣ ಯುವಕ ಮಂಡಲ ಕಾರ್ಕಳ.

Comments are closed.