ಕರಾವಳಿ

ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಗೆ ಬಂತು ಹೈಟೆಕ್ ದೋಟಿ: ಅಮಾಸೆಬೈಲಿನಲ್ಲಿ‌ ಪ್ರಾತ್ಯಕ್ಷಿಕೆ

Pinterest LinkedIn Tumblr

ಕುಂದಾಪುರ: ಹೈಟೆಕ್ ದೋಟಿ ಅಥವಾ ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅಮಾಸೆಬೈಲಿನ ಕೃಷಿಕ‌ ಆನಂದ ಕೊಡ್ಗಿ ಅವರ ನಿವಾಸದ ಬಳಿಯ ಅಡಿಕೆ ತೋಟದಲ್ಲಿ ಭಾನುವಾರ ನಡೆಯಿತು.

ಅಡಿಕೆ‌ ಕೃಷಿಯಲ್ಲಿ ಮಾನವ ಶ್ರಮದ ಉಳಿತಾಯ, ಸಮಯದ ಉಳಿತಾಯದ ಜೊತೆಗೆ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಹಾಸನ ಜಿಲ್ಲೆಯ ಅರಕಲಗೂಡಿನ ಮೆಕ್ಯಾನಿಕಲ್ ಇಂಜಿನಿಯರ್ ಬಾಲಸುಬ್ರಹ್ಮಣ್ಯ ಮತ್ತು ತಂಡ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಹೈಟೆಕ್ ದೋಟಿಯ ಪ್ರಯೋಜನವೇನು..?
ನೆಲದಿಂದಲೇ ಹೈಟೆಕ್ ದೋಟಿಯಿಂದ 60ರಿಂದ 80 ಅಡಿ ಮೇಲಿರುವ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ ಸಾಧ್ಯವಿದೆ. ಅತ್ಯಾಧುನಿಕ ಬ್ಯಾಟರಿ ಸ್ಪ್ರೇಯರ್ ಗಳನ್ನು ಅಳವಡಿಸಲಾಗಿದೆ. ಅಡಿಕೆ ಮರಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗದಂತೆ ಅಡಿಕೆ ಕೊಯ್ಲು ಮಾಡಲಾಗುತ್ತದೆ ಇನ್ನು ದೋಟಿಯಿಂದ ಕೊಯ್ಲು ಮಾಡಿದ ಅಡಿಕೆ ನೆಲಕ್ಕೆ ಬೀಳದಂತೆ ಹಿಡಿಯುವ ವಿಧಾನ ಅಳವಡಿಸಲಾಗಿದೆ. ಪರಿಣಾಮಕಾರಿಯಾಗಿ ಔಷಧಿ ಸಿಂಪಡಣೆ ಮಾಡಿ ಕೊಳೆರೋಗದಿಂದ ಅಡಿಕೆ ಬೆಳೆಯ ರಕ್ಷಣೆ ಸಾಧ್ಯವಿದೆ. 20,000 ಸಾವಿರದಿಂದ 84,000 ಸಾವಿರ ಮೌಲ್ಯದ ಅತ್ಯುತ್ತಮ ಹೈಟೆಕ್ ದೋಟಿಗಳ ಮೂಲಕ ಕೊಯ್ಲು ಮತ್ತು ಔಷಧಿ ಸಿಂಪಡಣೆಯ ಆಯ್ಕೆ‌ ರೈತರಿಗಿದೆ ಎಂದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕೋಡ್ಗಿ ಈ ಸಂದರ್ಭ ಮಾತನಾಡಿ, ಅಡಿಕೆ ಬೆಳೆಗಾರರ ಆರೋಗ್ಯ ಸೌಲಭ್ಯಗಳು ಸಹಿತ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ಯಾಂಪ್ಕೋ ಹತ್ತು ಹಲವು ಯೋಜನೆ‌ ರೂಪಿಸಿದೆ. ಈಗಾಗಾಲೇ ಮಾರುಕಟ್ಟೆಯಲ್ಲಿ ಹಲಸಿನ ಚಾಕಲೇಟ್ ಬಿಡುಗಡೆಯಾಗಿದ್ದು ಉತ್ತಮ ರೆಸ್ಫಾನ್ಸ್ ಸಿಕ್ಕಿದೆ. ಅಡಿಕೆ ಬೆಳೆಗಾರರು ಹೈಟೆಕ್ ದೋಟಿಯಂತಹ ಆಧುನಿಕ ವ್ಯವಸ್ಥೆಗಳನ್ನು‌ ಬಳಸಿ ಇನ್ನಷ್ಟು ಲಾಭ ಗಳಿಸಬೇಕು. ಮುಂದಿನ ದಿನದಲ್ಲಿ ಪುತ್ತೂರು ಕಾವು ಬಳಿ ಚಾಕಲೇಟ್ ಪಾರ್ಕ್ ಮಾಡುವ ಗುರಿ ಕ್ಯಾಂಪ್ಕೊ ಹೊಂದಿದೆ ಎಂದರು.

ಈ ಸಂದರ್ಭ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಹಿರಿಯ ಕೃಷಿಕ ಅರುಣ್ ಕುಮಾರ್ ಶೆಟ್ಟಿ ಸೇನಾಪುರ, ಜಿಲ್ಲಾ ತೋಟಗಾರರ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಸಿಇಒ ಕೃಷ್ಣಕುಮಾರ್ ಭಾಗವತ್, ಪ್ರದೀಪ್ ಹೆಬ್ಬಾರ್ ಮೊದಲಾದವರಿದ್ದರು.

ಈ ಬಳಿಕ ಆಜ್ರಿ, ಹಳ್ಳಿಹೊಳೆ, ವಂಡ್ಸೆಯಲ್ಲಿ ಈ ಪ್ರಾತ್ಯಕ್ಷಿಕೆ ನಡೆದಿದ್ದು ಆಯಾಯಾ ಭಾಗದ ನೂರಾರು ರೈತರು ಭಾಗವಹಿಸಿದರು.

Comments are closed.