ಮಂಗಳೂರು: ನಗರದ ಖ್ಯಾತ ಬೋಟ್ ಬಿಲ್ಡರ್ ಹಾಗೂ ಎಂಜಿನಿಯರ್, ಸಮಾಜ ಸೇವಕ, ಕೊಡುಗೈ ದಾನಿ, ಅತ್ಯಂತ ಪ್ರಾಮಾಣಿಕ ಹಾಗೂ ಯಾವುದೇ ರಿತೀಯ ಕಠಿಣ ಸಂದರ್ಭದಲ್ಲೂ ದೃತಿಗೆಡದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಾಡಿಗ ಸಮುದಾಯದ ಅತ್ಯಂತ ಪ್ರಭಾವಿ ವ್ಯಕ್ತಿ, ಮಂಗಳೂರಿನ ಶಕ್ತಿನಗರ ನಿವಾಸಿ ಶ್ರೀ ಎಂ.ಕೆ. ಹರಿಶ್ಚಂದ್ರ ( 85) ಅವರು ಸೆಪ್ಟಂಬರ್ 1ರಂದು ಬೆಳಿಗ್ಗೆ 7:30 ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.
ಶ್ರೀಯುತರು ಪತ್ನಿ ವಿಮಲಾ, ದುಬೈಯಲ್ಲಿ ನೆಲೆಸಿರುವ ಮಗಳು ಶ್ರೀಮತಿ ಶರ್ಮಿಳಾ ಶೇರಿಗರ್, ಪುತ್ರರಾದ ಉದಯ್, ನಂದಾ ಕಿಶೋರ್ ಹಾಗೂ ಕುಟುಂಬಸ್ಥರು ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಆಗಲಿದ್ದಾರೆ.
ಶ್ರೀಯುತರು ತಮ್ಮ ಸ್ವ ಸಾಮಾರ್ಥ್ಯದೊಂದಿಗೆ 1973ರಲ್ಲಿ ಮಂಗಳೂರು ಬಂದರ್ ನಲ್ಲಿ ಮೆರೈನ್ ಕ್ರಾಪ್ಟ್ಸ್ ಎಂಡ್ ಇಕ್ವಿಪ್‌ಮೆಂಟ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅತ್ಯಂತ ಸರಳ ಸ್ವಭಾವದರಾಗಿದ್ದ ಶ್ರೀಯುತರು, ಸರಳ ಸಜ್ಜನಿಕೆಯೊಂದಿಗೆ ಸೌಜನ್ಯ ಸ್ವಭಾವದಾರಾಗಿದ್ದು, ನಿಷ್ಠಾವಂತ ಹಾಗೂ ಯಾವುದೇ ಸಂದರ್ಭದಲ್ಲೂ ಧೃತಿಗೆಡದ ಸ್ವಭಾವದವರಾಗಿದ್ದರು.
“ಇಂದಿರಾ ಗಾಂಧೀ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ” ” ಗೌರವ:
ಉದ್ಯಮದಲ್ಲಿ ಇವರ ಸೇವೆಯನ್ನು ಗುರುತಿಸಿದ ಅಂದಿನ ಕೇಂದ್ರ ಸರಕಾರ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧೀಯವರ76ನೇ ಜನ್ಮದಿನಾಚರಣೆ ಸಂದರ್ಭ (19th ನವೆಂಬರ್1995) ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಎಂ.ಕೆ. ಹರಿಶ್ಚಂದ್ರ ಅವರಿಗೆ ಉದ್ಯಮದಲ್ಲಿ ಅತ್ಯುತ್ತಮ ಸೇವೆ ಹಾಗೂ ಕೊಡುಗೆಗಳನ್ನು ನೀಡಿದವರಿಗೆ ಕೊಡಲ್ಪಡುವ ಅತ್ಯುತ್ತಮ ಸಾಧಕ ಪ್ರಶಸ್ತಿಯಾದ “ಇಂದಿರಾ ಗಾಂಧೀ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಿದೆ.
ಶ್ರೀಯುತರು ಸಾಮಾಜಿಕ ಕಳಕಳಿಯೊಂದಿಗೆ ತಮ್ಮ ಸಮುದಾಯದವರ ಏಳಿಗೆಗಾಗಿ ಅಗತ್ಯವಿರುವ ಎಲ್ಲಾ ರೀತಿಯ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾತ್ರವಲ್ಲದೇ ತಮ್ಮ ಉದಾತ್ತ ಗುಣಗಳಿಂದ ಬಹಳಷ್ಟು ಖ್ಯಾತರಾಗಿದ್ದ, ಶ್ರೀಯುತರು ತೀರ ಅಗತ್ಯವಿರುವ ಬಡ ಕುಟುಂಬಗಳಿಗೆ ತಮ್ಮ ಕೈಲಾಗುವಂತಹ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಈ ಒಂದು ಸಹಾಯಹಸ್ತ ಗುಣದಿಂದ ನಗರದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರು ನಗರದ ಹಲವಾರು ದೇವಸ್ಥಾನಗಳಿಗೆ ಹಲವು ವರ್ಷಗಳಿಂದ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ. ಮಾತ್ರವಲ್ಲದೇ ನಗರದ ಹಲವಾರು ಕ್ಷೇತ್ರಗಳ ಜಿರ್ಣೋದ್ಧಾರ ಸಂದರ್ಭದಲ್ಲಿ ತಮ್ಮಲ್ಲಿ ಸಾಧ್ಯವಾದಷ್ಟು ಕೊಡುಗೆಗಳನ್ನು ನೀಡುವ ಮೂಲಕ ಜಿರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಶ್ರೀಯುತರು ತಮ್ಮ ಸಮಾಜ ಭಾಂದವರ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಹಲವಾರು ಮಕ್ಕಳ ಶಿಕ್ಷಣಕ್ಕೆ ಸಹಾಯ ಧನ ನೀಡುತ್ತಾ ಬಂದಿರುತ್ತಾರೆ. ಜೊತೆಗೆ ದೇವಾಡಿಗ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೆ ಧನ ಸಹಯಾ ಮಾಡುವ ಮೂಲಕ ಸಂಘ ಸಂಸ್ಥೆಗಳ ಏಳಿಗೆಗೆ ಶ್ರಮಿಸಿದ್ದಾರೆ.
ಅಗಲಿದ ಅವರ ಆತ್ಮಕ್ಕೆ ಸರ್ವಶಕ್ತನಾದ ಭಗವಂತನು ಚಿರ ಶಾಂತಿಯನ್ನು ಕರುಣಿಸಲೆಂದು ಸುಪುತ್ರಿ ಶ್ರೀಮತಿ ಶರ್ಮಿಳಾ ಶೇರಿಗರ್ ಅವರ ಪತಿ, ದುಬೈಯ ಖ್ಯಾತ ಉದ್ಯಮಿ, ಕನ್ನಡ ಹಾಗೂ ತುಳು ಚಿತ್ರ ನಿರ್ಮಾಪಕ, ದುಬಾಯಿಯ ಆಕ್ಮೆ (Acme Building Materials Trading LLC. (UAE and Oman) ಸಂಸ್ಥೆಯ ಸಂಸ್ಥಾಪಕ ಶ್ರೀ ಹರೀಶ್ ಶೇರಿಗಾರ್ ಹಾಗೂ ಇವರ ಸಂಸ್ಥೆಯ ಸಿಬ್ಬಂದಿಗಳು, ಸಂಬಂಧಿಕರು ಮತ್ತು ಮೃತರ ಅಪಾರ ಅಭಿಮಾನಿಗಳು ಶ್ರೀಯುತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Comments are closed.