ಮಂಗಳೂರು : ಹಿರಿಯ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಉತ್ತಮ ಸಂಘಟಕ, ಪ್ರಸಿದ್ಧ ವಾಗ್ಮಿ, ಎಸ್. ಕೆ. ಜಿ. ಐ. ಸೊಸೈಟಿಯ ಅಧ್ಯಕ್ಷ ಶ್ರೀ ಬೈಕಾಡಿ ಜನಾರ್ದನ ಆಚಾರ್ಯ ಅನಾರೋಗ್ಯದಿಂದಾಗಿ 13.9.2020 ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 8.15ಕ್ಕೆ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ, ಸೊಸೆ, ಅಳಿಯ ಸೇರಿದಂತೆ ಅನೇಕ ಬಂಧು ಮಿತ್ರರನ್ನು, ಸಹಸ್ರಾರು ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಬೈಕಾಡಿ ಜನಾರ್ದನ ಆಚಾರ್ಯರು ಬ್ರಹ್ಮಾವರ ಬಳಿಯ ಬೈಕಾಡಿಯಲ್ಲಿ 05-01-1951ರಲ್ಲಿ ಜನಿಸಿದರು. ಬೈಕಾಡಿಯಲ್ಲಿ ಪ್ರಾಥಮಿಕ, ಎಸ್.ಎಂ.ಎಸ್. ಪಿ.ಯು.ಕಾಲೇಜು, ಬ್ರಹ್ಮಾವರದಲ್ಲಿ ಪ್ರೌಢ ಮತ್ತು ಪಿ.ಯು.ಸಿ. ವಿದ್ಯಾಭ್ಯಾಸದ ಬಳಿಕ ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನಲ್ಲಿ ಬಿ.ಕಾಂ, ಉಡುಪಿಯ ಡಾ| ಟಿ.ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ ದಲ್ಲಿ ಬಿ.ಎಡ್.ಪದವಿ ಪಡೆದರು.
ಬಳಿಕ ವೈಕುಂಠ ಬಾಳಿಗಾ ಲಾ ಕಾಲೇಜು ಉಡುಪಿಯಲ್ಲಿ ಎಲ್.ಎಲ್.ಬಿ ಮಾಡಿದರು. ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ದಲ್ಲಿ ಹಿಂದಿಯಲ್ಲಿ ಎಂ.ಎ.ಪದವಿ, ಮೈಸೂರಿನ ಮೈಸೂರು ವಿಶ್ವ ವಿದ್ಯಾಲಯ ದಲ್ಲಿ ಇಂಗ್ಲೀಷ್ ನಲ್ಲಿ ಎಂ.ಎ.ಪದವಿ ಅಲ್ಲದೆ ಅಲಹಾಬಾದ್ ನ ಪ್ರಯಾಗ ವಿಶ್ವ ವಿದ್ಯಾಲಯ ದಲ್ಲಿ”ಸಾಹಿತ್ಯರತ್ನ” ಪದವಿ ಪಡೆದರು.
ನಾಟಕ ಹಾಗು ಪತ್ರಿಕೋದ್ಯಮ ದಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ಉಡುಪಿಯ”ರಂಗಭೂಮಿ”, ಮಂಗಳೂರಿನ”ಭೂಮಿಕಾ” ತಂಡಗಳಲ್ಲಿ ರಂಗ ತಾಲೀಮು ನಡೆಸಿದರು. ಅಮೃತ ಸೋಮೇಶ್ವರರ “ಗೋಂದೋಳು” , ರಾಮದಾಸರ “ಗರುಡಗಂಬ” ಪ್ರೇಮಾ ಕಾರಂತರ “ಕುರುಡು ಕಾಂಚಾಣ” ನಾಟಕ ನಿರ್ದೇಶನ ಮಾಡಿದ್ದಾರೆ. ಡಾ.ಶಿವರಾಮ ಕಾರಂತ ಜನ್ಮ ಶತಮಾನೋತ್ಸವ ಸಂದರ್ಭ ಕಾರಂತ ರ “ಕಿಸಾಗೌತಮಿ” ನಾಟಕದಲ್ಲಿ ಪಾತ್ರನಿರ್ವಹಿಸಿ ರಾಜ್ಯದಾದ್ಯಂತ ಪ್ರದರ್ಶನ ನೀಡಿರುವರು. ಕೆ.ಎಂ.ಎಫ್. ನವರು ತಯಾರಿಸಿದ “ಪರಿವರ್ತನೆ” ಸಾಕ್ಷ್ಯ ಚಿತ್ರ ದಲ್ಲಿ ನಟಿಸಿದ್ದಾರೆ.
1979ರಿಂದ “ವಿಶ್ವಕರ್ಮ” ಪತ್ರಿಕೆಯ ಸಂಪಾದಕ, 1986 – 2000 ತನಕ “ಸಹಚಿಂತನ” ಪತ್ರಿಕೆಯ ಸಂಪಾದಕ ಆ ಬಳಿಕ ಸ್ವಂತ ಪತ್ರಿಕೆ “ರೂವಾರಿ” ಯ ಸಂಪಾದಕರಾಗಿ ಕೆಲಸ ಮಾಡಿರುತ್ತಾರೆ.
ಮಾನವ ಸಂಪನ್ಮೂಲ ತರಬೇತಿದಾರಾಗಿ ರಾಜ್ಯಾದ್ಯಂತ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳ ಸದಸ್ಯರಿಗೆ, ಬ್ಯಾಂಕು,ಸಹಕಾರಿ ಹಾಗು ಕಾರ್ಖಾನೆಯ ನೌಕರರಿಗೆ ಸುಮಾರು 20 ವರ್ಷಗಳ ಕಾಲ ನಿರಂತರ ತರಬೇತಿಯನ್ನು ನೀಡಿರುವರು. ಭಾಷಣ ಕೌಶಲ್ಯ ತರಬೇತುದಾರರಾಗಿಯೂ ಹೆಸರುವಾಸಿ. ರೋಟರಿ ಕ್ಲಬ್ ಮಂಗಳೂರು ಇವರಿಂದ ಉತ್ತಮ ಶಿಕ್ಷಕ ಪುರಸ್ಕಾರ ಪಡೆದಿದ್ದಾರೆ. ಭಾರತ ಸ್ವಾತಂತ್ರ್ಯೋತ್ಸವ ಸುವರ್ಣ ಮಹೋತ್ಸವ ಸಂದರ್ಭ ಅವಿಭಜಿತ ಜಿಲ್ಲೆಗಳ ಕಾಲೇಜು ಹಾಗು ಪ್ರೌಢಶಾಲಾ ಶಿಕ್ಷಕರೊಳಗೆ ನಡೆದ ಭಾಷಣಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದರು.
ಇವರು ಭಾಗವಹಿಸಿದ ಅನೇಕ ನಾಟಕಗಳು, ಭಾಷಣಗಳು ಆಕಾಶವಾಣಿ ಯಲ್ಲಿ ಪ್ರಸಾರಗೊಂಡಿವೆ. ಸುಮಾರು 25ಕ್ಕೂ ಹೆಚ್ಚು ಸ್ಮರಣಸಂಚಿಕೆ ಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು.
ನಾಲ್ಕು ದಶಕಗಳ ಕಾಲ ಉರ್ವ ಕೆನರಾ ಹೈಸ್ಕೂಲ್ ನಲ್ಲಿ ಭಾಷಾ ಶಿಕ್ಷಕರಾಗಿ ನಿವೃತ್ತರಾದರು. ಬಳಿಕ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಲ್ನಾಡು ಪಿ ಯು ರೆಸಿಡೆನ್ಸಿ ಯಲ್ ಸ್ಕೂಲ್ ನ ಪ್ರಾಂಶುಪಾಲರಾಗಿ, ತದನಂತರ ಮಂಗಳೂರಿನ “ಶಕ್ತಿ ರೆಸಿಡೆನ್ಸಿ ಸ್ಕೂಲ್” ನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು, ಬೆಸೆಂಟ್ ಸ್ಕೂಲ್ ನ ಕರೆಸ್ಪೊಂಡೆಂಟ್ ಆಗಿ,ಉರ್ವ ಅಶೋಕ ನಗರ ವಲಯದ ವಿಶ್ವಹಿಂದೂ ಪರಿಷತ್ ನ ಅಧ್ಯಕ್ಷರಾಗಿ , ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋಪರೇಟಿವ್ ಸೊಸೈಟಿ ಯ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದರು.
ಗಣ್ಯರ ಸಂತಾಪ :
ಬೈಕಾಡಿಯವರ ವಿದ್ಯಾರ್ಥಿ ಪ್ರಸ್ತುತ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮೃತರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರ ದೀಪ ಕುಮಾರ ಕಲ್ಕೂರ , ಶಾರದಾ ವಿದ್ಯಾಲಯದ ಎಂ.ಬಿ. ಪುರಾಣಿಕ್, ಎಸ್.ಕೆ.ಜಿ.ಐ.ಕೋಪರೇಟಿವ್ ಸೊಸೈಟಿ ಯ ಆಡಳಿತ ಮಂಡಳಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿ, ವಿಶ್ವ ಕರ್ಮ ಸಹಕಾರ ಬ್ಯಾಂಕ್, ಬೆಸೆಂಟ್ ಸ್ಕೂಲ್ ಆಡಳಿತ ವರ್ಗ, ಕೆನರಾ ಸ್ಕೂಲ್ ಎಸೋಸಿಯೇಷನ್, ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ದ ಅಧ್ಯಕ್ಷರು ಸಹಿತ ಅನೇಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
Comments are closed.