‘ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ..’ ಎಂದು ಭಾವ ತುಂಬಿ ಹಾಡಿದಾತನ ‘ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ.’
ಸಂಗೀತ ಲೋಕದ ದಿಗ್ಗಜ, ಸ್ವರ ಸಾಮ್ರಾಟ, ಮಹಾನ್ ಗಾಯಕ ಎಸ್‌ಪಿ.ಬಿ ನಿಧನಕ್ಕೆ ಗಣ್ಯರಿಂದ ಕಂಬನಿ
ಬಹು ಭಾಷಾ ನಟ, ಸಂಗೀತ ಲೋಕದ ದಿಗ್ಗಜ, ಸ್ವರ ಸಾಮ್ರಾಟ, ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ದೇಶ ವಿದೇಶಗಳ ಗಣ್ಯರು ಹಾಗೂ ಅವರ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಕರೋನ ಸೊಂಕಿನಿಂದ ಬಳಲುತ್ತಿದ್ದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕಳೆದ ಕೆಲವು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಅವರ ಶ್ವಾಸಕೋಶವು ತೀವ್ರ ಪ್ರಮಾಣದಲ್ಲಿ ಏರುಪೇರು ಉಂಟಾದ ಪರಿಣಾಮ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಕೊರೋನಾ ವೈರಸ್ ಕಾರಣ ಆಗಸ್ಟ್ 5 ರಂದು ಎಸ್ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್ 13 ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಧ್ವನಿ ಬದುಕುಳಿಯಬೇಕೆಂದು ಕಳೆದ ಒಂದು ತಿಂಗಳುಗಳಿಂದ ಕೋಟ್ಯಂತರ ಸಂಗೀತ ಪ್ರೇಮಿಗಳು ನಿರಂತರವಾಗಿ ಪ್ರಾರ್ಥಿಸುತ್ತಲೇ ಇದ್ದರು.
ಆ ಜೀವವೂ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಇತ್ತ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಮನೆಮಾಡತೊಡಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯನ ಲೋಕದ ಮೇರು ಪ್ರತಿಭೆ ಎಸ್. ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿವಿಧ ಭಾಷೆಯ ಸುಮಾರು ನಲವತ್ತು ಸಹಸ್ರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆ ಕಂಠ ಕೋವಿಡ್ ಎಂಬ ಮಹಾಮಾರಿಯ ಕಪಿಮುಷ್ಠಿಗೆ ಸಿಲುಕಿ ವಿವಿಧ ರೀತಿಯ ನಳಿಕೆಗಳನ್ನು ತೂರಿಸಿಕೊಂಡು ಆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಿಶ್ಚೇತನವಾಗಿ ಮಲಗಿದ್ದರೆ, ಇತ್ತ ಅದನ್ನು ಊಹಿಸಿಕೊಳ್ಳಲೂ ಆಗದ ಸಂಕಟ ಆ ಧ್ವನಿಯನ್ನು ಹಾಗೂ ಸದಾ ನಗುಮೊಗದ, ಮಗು ಮನಸ್ಸಿನ ಆ ವ್ಯಕ್ತಿಯನ್ನು ಪ್ರೀತಿಸುವವರದ್ದಾಗಿತ್ತು.
ಆದರೆ, ಕಾಲನ ಕರೆಗೆ ಇದ್ಯಾವುದೂ ನಾಟಲೇ ಇಲ್ಲ. ‘ಕಣ್ಣಿಗೆ ಕಾಣದ ನಾಟಕಕಾರ’ ಈ ಜಗತ್ತಿನ ಜೊತೆಗಿನ ಅವರ ‘ಬಂಧನ’ನವನ್ನು ಕಳಚಿ ಎಸ್ ಪಿ ಬಿ ಎಂಬ ಸ್ವರ ಮಾಂತ್ರಿಕನ ಪ್ರಾಣವನ್ನು ಕಸಿದುಕೊಂಡು ಹೋಗಿಯೇ ಬಿಟ್ಟ. ಅಲ್ಲಿಗೆ, ‘ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ..’ ಎಂದು ಭಾವ ತುಂಬಿ ಹಾಡಿದಾತ ‘ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ.’ ಎಂದು ಹೇಳಿ ಹೊರಟೇ ಬಿಟ್ಟಿದ್ದಾರೆ.!
ಅವರನ್ನು ಪ್ರೀತಿಸುತ್ತಿದ್ದ ಅವರ ಧ್ವನಿಗೆ ಮಾರು ಹೋಗಿದ್ದ ಹೃದಯಗಳು ಮಾತ್ರ ಇಲ್ಲಿ ‘ಆದ್ರವಾಗಿವೆ’! ಹೌದು, ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಹ್ಮಣ್ಯಂ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಪಿ.ಬಿ. ಎಂಬ ಸ್ವರ ಮಾಂತ್ರಿಕ, ಗಾನ ಗಾರುಡಿ ಇನ್ನು ನೆನಪು ಮಾತ್ರ.
Comments are closed.