ಕರಾವಳಿ

ಪಂಜರದ ಮೀನು ಕೃಷಿ ಮೂಲಕ ಸ್ವಂತ ಉದ್ಯೋಗ ಸೃಷ್ಟಿಸುವ ಗುರಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಪಂಜರದಲ್ಲಿ ಮೀನು ಕೃಷಿ ಮಾಡುವ ಕಾರ್ಯಕ್ರಮ ಇಲಾಖೆಗೆ ಹೊಸದಾಗಿದೆ. ಪಂಜರ ಕೃಷಿಯ ಮೂಲಕ ಲಕ್ಷಾಂತರ ಗಳಿಕೆಯ ಯೋಚನೆಗಿಂತ ಇಂತಹ ಕೃಷಿಯನ್ನು ಮಾಡಬಹುದು ಎಂದು ತೋರಿಸಿಕೊಡುವ ಕಾರ್ಯಕ್ರಮ ಇದಾಗಿದೆ. ಪಂಜರದ ಮೀನು ಕೃಷಿ ಮೂಲಕ ಸ್ವಂತ ಉದ್ಯೋಗ ಸೃಷ್ಟಿಸುವ ಗುರಿ ಇದಾಗಿದೆ. ಶೃದ್ಧೆಯಿಂದ ಕೆಲಸ ಮಾಡುವ ಮೂಲಕ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಒಳನಾಡಿನ ಮೀನು ಕೃಷಿಯನ್ನು ಉತ್ತೇಜಿಸುವ ಮೂಲಕ ಭಾರತದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನಕ್ಕೆ ಬರಬೇಕೆಂಬುದು ಇಲಾಖೆಯ ಗುರಿಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡ ಪಂಜರದಲ್ಲಿ ಮೀನು ಕೃಷಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಗಾರದ ಮೂಲಕ ಗೊಂದಲಗಳು, ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ವಿಜ್ಞಾನಿಗಳ ಸಲಹೆ ಪಡೆಯಬಹುದು. ಕಿಸಾನ್ ಕಾರ್ಡ್ ಮೂಲಕ ಮೀನುಗಾರರಿಗೆ ಸಾಲ ಸೌಲಭ್ಯ ಕೊಡಿಸುವ ಚಿಂತನೆಯೂ ಇದೆ. ಮೀನುಗಾರರ ಜೊತೆ ಇಲಾಖೆ ಸದಾ ಇರಲಿದೆ ಎಂದು ಸಚಿವ ಕೋಟ ಭರವಸೆ ನೀಡಿದರು. ಮತ್ಸ್ಯ ಸಂಪದ ಯೋಜನೆಯ ಕಾರ್ಯಗಾರ ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿವೃತ್ತ ಅಧಿಕಾರಿಗಳ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೀನುಗಾರಿಕೆಯನ್ನು ಸ್ವಾವಲಂಭೀಕರಣ ಮಾಡುವ ಮಹತ್ವದ ಚಿಂತನೆಯಿದೆ. ಸಂಕಷ್ಟದ ಕಾಲದಲ್ಲಿಯೂ ಮೀನುಗಾರರ ನೆರವಿಗೆ ಸರಕಾರ ಬಂದಿದೆ. ಕಟ್ಟ ಕಡೆಯ ಮೀನುಗಾರನು ತನ್ನ ಕಾಲ ಮೇಲೆ ನಿಲ್ಲಬೇಕು, ಆತನಿಗೆ ಸಮಸ್ಯೆಯಾದಾಗ ಇಲಾಖೆ ನೆರವಿಗೆ ಬರಬೇಕು ಎಂಬುದು ನಮ್ಮ ಆಶಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಪ್ರತಿಭಾ ರೋಹಿತ್ ಮೀನುಗಾರರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಮಕಿಶನ್ ಹೆಗ್ಡೆ, ದಕ್ಷಿಣ ಕನ್ನಡ ಉಡುಪಿ ಮೀನುಗರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಜಿ.ಪಂ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚರ್ಯ ಮೊದಲಾದವರಿದ್ದರು.

ಮುಕುಂದ ಪ್ರಾರ್ಥಿಸಿದರು. ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ.ಗಣೇಶ್ ಸ್ವಾಗತಿಸಿದರು. ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ಕಾರ್ಯಕ್ರಮ ನಿರ್ವಹಿಸಿ, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಎಂ.ಶಿವಕುಮಾರ್ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.