Bahrain

ಬಹರೈನ್’ನಲ್ಲಿ ಯಶಸ್ವಿ ಪ್ರೀಮಿಯರ್ ಪ್ರದರ್ಶನ ಕಂಡ ತುಳು ಚಲನಚಿತ್ರ ‘ರಾಜ್ ಸೌಂಡ್ ಏಂಡ್ ಲೈಟ್ಸ್’

Pinterest LinkedIn Tumblr

ಬಹರೈನ್: ಇಲ್ಲಿನ ಮುಕ್ತಾ ಚಲನಚಿತ್ರ ಮಂದಿರದಲ್ಲಿ ತುಳು ಚಲನ ಚಿತ್ರ “ರಾಜ್ ಸೌಂಡ್ ಅಂಡ್ ಲೈಟ್ಸ್ ” ಇದರ ಪ್ರೀಮಿಯರ್ ಪ್ರದರ್ಶನ ಯಶಸ್ವಿಯಾಗಿ ಜರುಗಿದ್ದು ನೆರೆದ ತುಳು ಪ್ರೇಕ್ಷಕರನ್ನು ರಂಜಿಸಿದ್ದು ಮಾತ್ರವಲ್ಲದೆ ಬಹರೈನ್ನಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡ ಪ್ರಥಮ ತುಳು ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಯಿತು.

ಪ್ರಪ್ರಥಮ ಬಾರಿಗೆ ತುಳು ಚಲನಚಿತ್ರವೊಂದು ಒಟ್ಟು 11 ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನವನ್ನು ಕಾಣುತಿದ್ದು ಬಹರೈನ್ ನ ಪ್ರೀಮಿಯರ್ ಪ್ರದರ್ಶನವನ್ನು ‘ಗಿರ್ ಗಿಟ್’ ಖ್ಯಾತಿಯ ಖಳನಾಯಕ ರೋಷನ್ ಶೆಟ್ಟಿಯವರು ಆಯೋಜಿಸಿದ್ದರು . ಸ್ವತಃ ನಟನಾಗಿದ್ದು ಬಹರೈನ್ ನಲ್ಲಿ ಉದ್ಯೋಗದಲ್ಲಿರುವ ರೋಷನ್ ಶೆಟ್ಟಿಯವರು ಇದಾಗಲೇ ಅನೇಕ ತುಳು ಚಿತ್ರಗಳ ಪ್ರದರ್ಶನವನ್ನು ಬಹರೈನ್ ನಲ್ಲಿ ಆಯೋಜಿಸಿದ್ದು ತನ್ಮೂಲಕ ಹೊರನಾಡಿನಲ್ಲಿ ತುಳು ಭಾಷೆಯನ್ನೂ ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ .

‘ರಾಜ್ ಸೌಂಡ್ ಅಂಡ್ ಲೈಟ್ಸ್’ಚಿತ್ರಕ್ಕೆ ಬಹರೈನ್ ನ ತುಳು ಚಲನಚಿತ್ರ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಚಿತ್ರ ಮಂದಿರ ತುಂಬಿತ್ತು . ಚಲನಚಿತ್ರ ಪ್ರಾರಂಭಕ್ಕೆ ಮುನ್ನ ಚಿತ್ರ ಮಂದಿರದ ಎದುರು ನಡೆದ ಕಾರ್ಯಕ್ರಮದಲ್ಲಿ ಚಿತ್ರ ವೀಕ್ಷಿಸಲು ಬಂದ ಪ್ರೇಕ್ಷಕರನ್ನು ಸ್ವಾಗತಿಸಲಾಯಿತು.

ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ನಟ ರೋಷನ್ ಶೆಟ್ಟಿ, ಸದಾ ಬೆಂಬಲಿಸಿ ಪ್ರೋತ್ಸಾಹಿಸಿ ಬೆಂಬಲಿಸುವ ಬಹರೈನ್ ನ ಸರ್ವ ಧರ್ಮದ ತುಳುಚಿತ್ರ ಪ್ರೇಮಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಹೊಸ ಕನ್ನಡ ಆಲ್ಬಮ್ ‘ಪಯಣ’ದ ಹಾಡಿನ ಟೀಸರ್ ಬಿಡುಗಡೆಯಾಗಲಿದ್ದು ಅದಕ್ಕೆ ಎಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದರು . ‘ತುಳು ಸಿನಿಮಾ’ ಯು ಯೂಟ್ಯೂಬ್ ಚಾನೆಲ್ ನ ಅಮಿತ್ ದೇವಾಡಿಗ ಈ ಕಾರ್ಯಕ್ರಮದ ಚಿತ್ರೀಕರಣವನ್ನು ಮಾಡಿದರು . ಚಿತ್ರವನ್ನು ವೀಕ್ಷಿಸಿದ ಚಿತ್ರಪ್ರೇಮಿಗಳು ಬಹಳ ದಿನಗಳ ನಂತರ ಒಂದು ಉತ್ತಮ ತುಳು ಚಿತ್ರವನ್ನು ನೋಡಿದ ಅನುಭವವನ್ನು ಹಂಚಿಕೊಂಡು ಚಿತ್ರವನ್ನು ಮುಕ್ತ ಕಂಠದಿಂದ ಹೊಗಳಿದರು. ಕಮಲಾಕ್ಷ ಅಮೀನ್ ಕಾರ್ಯಕ್ರಮವನ್ನು ನಿರೂಪಿಸಿದರು .

(ವರದಿ- ಕಮಲಾಕ್ಷ ಅಮೀನ್ ಬಹರೇನ್)

Comments are closed.