Kuwait

ಕುವೈತ್ ಕನ್ನಡ ಕೂಟ ದಾಸೋತ್ಸವ-2022 ‘ಭಕ್ತಿ-ಭಾವ ಸಂಗಮ’

Pinterest LinkedIn Tumblr

ಕುವೈತ್: ಕುವೈತ್ ಕನ್ನಡ ಕೂಟ, ಕುವೈತ್‌ನಲ್ಲಿರುವ ಕರ್ನಾಟಕದ ಜನರ ಸಾಮಾಜಿಕ-ಸಾಂಸ್ಕೃತಿಕ ಸಂಘವು ಸ್ಥಾಪನೆಯಾಗಿ ಪ್ರಸ್ತುತ 38 ನೆಯ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಕೂಟವು ತನ್ನ ವಾರ್ಷಿಕ ಕಾರ್ಯಕ್ರಮ ದಾಸೋತ್ಸವ -2022, ’ಭಕ್ತಿ-ಭಾವ ಸಂಗಮ’ ವನ್ನು ಇತ್ತೀಚೆಗೆ ಆಚರಿಸಲಾಯಿತು. ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜ್ಯದ ಸಂತರ, ಶರಣರ, ದಾಸರುಗಳ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುವೈತ್ ಕನ್ನಡ ಕೂಟದ ಪ್ರತಿ ವರ್ಷದ ಮೊದಲ ಕಾರ್ಯಕ್ರಮ ದಾಸೋತ್ಸವವು ದಾಸರು, ಶರಣರುಗಳ ನೆನಪಿಗಾಗಿ ಹಾಗೂ ಅವರುಗಳ ಆರಾಧನೆಯನ್ನು ಅವರ ಕೀರ್ತನೆ, ಕೃತಿಗಳನ್ನು ಹಾಡಿ, ಅಭಿನಯಿಸುವುದರ ಮೂಲಕ ನಮ್ಮ ಕರ್ನಾಟಕದ ದಾಸ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ನವಪೀಳಿಗೆಯವರಿಗೆ ಹಾಗೂ ಕೂಟದ ಮಕ್ಕಳಿಗೆ ತಿಳಿಸಿಕೊಡುವುದರಲ್ಲಿ ಯಶಸ್ವಿಯಾಯಿತು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಹಾಗೂ ಜನರ ಗುಂಪುಗೂಡುವಿಕೆಯ ಮೇಲಿನ ನಿರ್ಬಂಧಗಳ ನಡುವೆ ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಕಾರ್ಯಕ್ರಮವನ್ನು ನಡೆಸಿ ಪ್ರಸಾರ ಮಾಡಲಾಯಿತು.
ಸಾರ್ವಜನಿಕ ಸಂಪರ್ಕ ಸಮಿತಿಯ ಸದಸ್ಯರು ವಿಭಿನ್ನವಾದ ಜನಾಕರ್ಷಣೆಯ ವಿಡಿಯೋ ಆಮಂತ್ರಣದ ಮೂಲಕ ಸದಸ್ಯರನ್ನು ಆಹ್ವಾನಿಸಿ, ಚಮತ್ಕಾರದ ಸವಿ ನುಡಿಗಳಿಂದ ಕಾರ್ಯಕ್ರಮಕ್ಕೆ ಸಂಚಾಲಕಿ ಗಾಯತ್ರಿ ಕೆ. ಭಟ್ ಮತ್ತು ಸುಜಾತಾ ರಾಮಚಂದ್ರನ್ ತಮ್ಮ ಸಮಿತಿ ಸದಸ್ಯರೊಂದಿಗೆ ಸ್ವಾಗತಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಪ್ರೀತಿ ಪಿ. ಶೆಟ್ಟಿ ಮತ್ತು ಸಹ ಸಂಚಾಲಕಿ ಗಾಯತ್ರಿ ಶಶಿಕಿರಣ್ ರವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆತ್ಮೀಯ ಸ್ವಾಗತ ಕೋರಿದರು. ವಸಂತ ಅಶೋಕ್ ಮತ್ತು ಕುಮಾರಿ ವೈಷ್ಣವಿ ಅಶೋಕ್ ಅವರುಗಳಿಂದ ಹೃದಯಸ್ಪರ್ಶಿ ಸ್ವಾಗತ ಗೀತೆಯ ಗಾಯನ ನೆರವೇರಿತು.

ಪ್ರಮುಖ ಭಾರತೀಯ ಸಂಪ್ರದಾಯವಾದ ಕಾರ್ಯಕ್ರಮದ ಮೊದಲು ಸಾಂಪ್ರದಾಯಿಕ ದೀಪ ಬೆಳಗಿಸುವುದನ್ನು ಅಧ್ಯಕ್ಷರಾದ ಚಿನ್ಮಯ ಕೆ, ಉಪಾಧ್ಯಕ್ಷ ಉದಯ್ ಬಿ ವರ್ಣೇಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ರಾವ್ ನೇರಂಬಳ್ಳಿ ಮತ್ತು ಖಜಾಂಚಿ ಕಾರ್ಯಪ್ಪ ಎನ್. ಎಸ್. ಅವರನ್ನೊಳಗೊಂಡ 2022 ರ ಕಾರ್ಯಕಾರಿ ಸಮಿತಿಯವರು ಜ್ಯೋತಿ ಪ್ರಜಲ್ವನಗೊಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಕರ್ನಾಟಕದ ಸಂಸ್ಕೃತಿಗೆ ಸಂತರ, ದಾಸರ ಕೊಡುಗೆಯನ್ನು ಕೊಂಡಾಡಿದರು. ಭಕ್ತಿ ಚಳುವಳಿಯನ್ನು ಪ್ರಾರಂಭಿಸುವಲ್ಲಿ ಅವರುಗಳ ಪ್ರಭಾವದಿಂದಾಗಿ ಅವರನ್ನು ನೆನಪಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಷ್ಟಕರ ಸಂದರ್ಭಗಳಲ್ಲೂ ಕೂಡಾ ಕೂಟದ ಈ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಲು ವಿವಿಧ ಸಮಿತಿಗಳು ಮಾಡಿದ ಪ್ರಯತ್ನಗಳನ್ನು ಅಧ್ಯಕ್ಷರು ಶ್ಲಾಘಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಸಮಿತಿಯ ಸದಸ್ಯರನ್ನು ಪರಿಚಯಿಸುವ ಆಸಕ್ತಿದಾಯಕ ಮತ್ತು ನವೀನ ವಿಧಾನದೊಂದಿಗೆ ಪ್ರಾರಂಭವಾಯಿತು.

ಕೂಟದ ಮಕ್ಕಳಿಂದ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳ ಅಲಂಕಾರಿಕ ಉಡುಗೆ ಸ್ಪರ್ಧೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದು ಶಿಶುಗಳಿಂದ ಹಿಡಿದು ಹಿರಿಯರವರೆಗೆ ಎಲ್ಲಾ ವಯೋಮಾನದವರನ್ನು ಒಳಗೊಂಡಿತ್ತು. ಸಂಗೀತ, ನೃತ್ಯ, ಕಲೆ, ಪತ್ರಿಕೋದ್ಯಮ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ಗಣ್ಯರುಗಳಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಪ್ರದೀಪ್ ಬೇಕಲ್, ವಿದುಷಿ ಜ್ಞಾನ ಐತಾಳ್, ರೇಖಾ ಸುದೇಶ್ ರಾವ್, ಪ್ರೇಮಲತಾ ದಿವಾಕರ್, ಸೌಮ್ಯಾ ಸುಧೀಂದ್ರ ರಾವ್, ವಾಮನ್ ರಾವ್ ಬೇಕಲ್ ಮತ್ತು ಡಾ. ಲಕ್ಷ್ಮಿ ಜಿ. ಪ್ರಸಾದ್ ಇವರುಗಳು ಹಲವು ಸ್ಪರ್ಧೆಗಳ ತೀರ್ಪುಗಾರರಾಗಿ ಕುವೈತ್ ಕನ್ನಡ ಕೂಟಕ್ಕೆ ಸಹಕಾರ ನೀಡಿದರು.

ಕೂಟದ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅವರ ಯಶಸ್ವಿ ಕೊಡುಗೆಗಾಗಿ ಪ್ರಸ್ತುತ ವರ್ಷದ ಕಾರ್ಯಕಾರಿ ಸಮಿತಿಯವರು, 2021 ರ ಕಾರ್ಯಕಾರಿ ಸಮಿತಿಯವರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಕೂಟದ ಮಕ್ಕಳಿಂದ ’ನವಶಕ್ತಿ ವೈಭವ’ ವರ್ಣರಂಜಿತ ನೃತ್ಯ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೂರೆಗೊಂಡಿತು. ನಂತರ 10 ಮತ್ತು 12ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿದ ಸಂಘದ ಮಕ್ಕಳನ್ನು ಸನ್ಮಾನಿಸಲಾಯಿತು. ಇದರ ನಂತರ ಮರಳಮಲ್ಲಿಗೆ ಸಮಿತಿಯ ಸಂಚಾಲಕರಾದ ಶ್ರೀ ಕಿರಣ್ ರೇಣುಕಾರಾಧ್ಯ ಮತ್ತು ತಂಡದಿಂದ ಕೂಟದ ಪತ್ರಿಕೆ ’ಮರಳ ಮಲ್ಲಿಗೆ’ ಬಿಡುಗಡೆಯಾಯಿತು. ಮಾಹಿತಿಯುಕ್ತ ಲೇಖನಗಳು, ರೇಖಾಚಿತ್ರಗಳು, ಕವಿತೆಗಳು, ಸ್ಪರ್ಧೆಗಳು ಇತ್ಯಾದಿಗಳನ್ನು ಒಳಗೊಂಡಿದ್ದು, ಸಂಪೂರ್ಣವಾಗಿ ಸಂಘದ ಸದಸ್ಯರು ಮತ್ತು ಮಕ್ಕಳ ಕೊಡುಗೆಯಾಗಿದೆ.

ಕುವೈತ್ ಕನ್ನಡ ಕೂಟ ವೆಲ್ಫೇರ್ ಅಸೋಸಿಯೇಶನ್
(ಕೆಕೆಕೆಡಬ್ಲ್ಯುಎ) ಕಾರ್ಯದರ್ಶಿ ಪ್ರಶಾಂತ ಶೆಟ್ಟಿ ಇವರು ಗ್ರಾಮೀಣ ಕರ್ನಾಟಕದಲ್ಲಿ ಸುಮಾರು 1800 ಮಕ್ಕಳಿಗೆ ಅನುಕೂಲವಾಗುತ್ತಿರುವ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಸಂಘಗಳ ಪರೋಪಕಾರಿ ಚಟುವಟಿಕೆಗಳ ಕುರಿತು ವಿವರಿಸಿದರು.

ಸದಸ್ಯರುಗಳಿಗಾಗಿ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಕೂಟದ ಮಹಿಳೆಯರು ರಾಜ್ಯದ ಹಬ್ಬಗಳ ಆಚರಣೆಯನ್ನು ಪ್ರದರ್ಶಿಸುವ ಮೂಲಕ ಫ್ಯಾನ್ಸಿ ಡ್ರೆಸ್ (ಛದ್ಮ ವೇಷ) ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ಕೆಲವು ಪ್ರಸಿದ್ಧ ಐತಿಹಾಸಿಕ ವ್ಯಕ್ತಿಗಳ ವೇಷಭೂಷಣಗಳನ್ನು ಧರಿಸಿ ಪುರುಷರು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಬುಹಲೀಫಾ ಮತ್ತು ಸಾಲ್ಮಿಯಾ ಪ್ರದೇಶದ ಕೂಟದ ಮಹಿಳೆಯರು ನಡೆಸಿಕೊಟ್ಟ ಸುಶ್ರಾವ್ಯ ಭಜನಾ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ನಂತರ ಕೂಟದ ಪುರುಷರಿಂದ ಭಾವಪೂರ್ಣ ಭಜನೆ ನಡೆಯಿತು. ಈ ಹಿಂದೆ ನಡೆದ ವಿವಿಧ ರಂಗ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಕಾರ್ಯಕಾರಿ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಯಿತು.

ಕುವೈತ್ ಕನ್ನಡ ಕೂಟದ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಎಸ್. ರಾವ್ ನೇರಂಬಳ್ಳಿಯವರು ವಂದಿಸಿದರು.

Comments are closed.