ದುಬೈ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ) ಮತ್ತು ಕನ್ನಡಿಗರು ದುಬಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಅರಬ್ಬರ ನಾಡಿನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬ ಇದರ ಪೂರ್ವಭಾವಿ ಸಮಾಲೋಚನಾ ಸಭೆ ಮತ್ತು ಪತ್ರಿಕಾಗೊಷ್ಠಿ ಕಾರ್ಯಕ್ರಮ ದುಬಾಯಿನ ಓಮೆಗಾ ಹೋಟೆಲ್ ಸಭಾಂಗಣದಲ್ಲಿ ಅ.23ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಟಿ.ಶಿವಕುಮಾರ್ ನಾಗರ ನವಿಲೇ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ , ಕನ್ನಡಿಗರು ದುಬಾಯಿ ಮತ್ತು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷರಾದ ಶ್ರೀಯುತ ಸದನ್ ದಾಸ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇದರ ಸಾಂಸ್ಕೃತಿಕ ಮತ್ತು ಕಲೆ ಸಮಿತಿಯ ರಾಜ್ಯಾಧ್ಯಕ್ಷ ರವಿಸಂತೋಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದ ಮುಂದಿನ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಸದನ್ ದಾಸ್ ಅವರು ವಿವರಿಸಿದರು. ಮುಖ್ಯ ಅತಿಥಿಯಾಗಿ ರವಿಸಂತೋಷ ಮಾತನಾಡಿ ದುಬಾಯಿನಲ್ಲಿ ನೆಲೆಸಿ ಕನ್ನಡ ತಾಯಿಯ ಸೇವೆ ಸಲ್ಲಿಸಿತ್ತಿರುವ ಅನಿವಾಸಿ ಕನ್ನಡಿಗರು ನಮ್ಮ ಹೆಮ್ಮೆ ಎಂದರು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಅನಿವಾಸಿ ಕನ್ನಡಿಗರ ಬೆಂಬಲ ಮತ್ತು ಸಹಕಾರ ಅಗತ್ಯ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳಾಡಿದ ಡಾ. ಟಿ. ಶಿವಕುಮಾರ್ ನಾಗರ ನವಿಲೇ ಈ ಕಾರ್ಯಕ್ರವು ಮೂಲ ಕನ್ನಡಿಗರು ಮತ್ತು ಅನಿವಾಸಿ ಕನ್ನಡಿಗರ ಬೆಸುಗೆಯಾಗಲಿದೆ. ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವುದು ಮುಖ್ಯ ಉದ್ದೇಶ ಆ ನಿಟ್ಟಿನಲ್ಲಿ ಈ ಬಾರಿ ಅದ್ದೂರಿಯಾಗಿ ವಿಶ್ವ ಕನ್ನಡ ಹಬ್ಬವನ್ನು ಅರಬ್ಬರ ನಾಡಿನಲ್ಲಿ ನಡೆಸಲಾಗುವುದು ಎಂದು ಹೇಳುತ್ತಾ ಶುಭ ಹಾರೈಸಿದರು.
ಪ್ರತೀ ವರ್ಷದಂತೆ ಈ ವರ್ಷದ ಕನ್ನಡಿಗರು ದುಬಾಯಿ ಇವರ ಆಶ್ರಯದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಮತ್ತು ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಇದೇ ವೇದಿಕೆಯಲ್ಲಿ ನಡೆಯಲಿದೆ.
ಅದೇ ರೀತಿ ವಿಶೇಷವಾಗಿ ಈ ವರ್ಷದಿಂದ ನೀಡಲಾಗುವ ಕನ್ನಡ ರತ್ನ ಡಾ.ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಪರ ಸಾಧನೆ ಮಾಡಿದ ಸಾಧಕರಿಗೆ ನೀಡಿ ಗೌರವಿಸಲಾಗುವುದು ಎಂದು ಕನ್ನಡಿಗರು ದುಬಾಯಿ ಇದರ ಅಧ್ಯಕ್ಷ ಸದನ್ ದಾಸ್ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ ಇದರ ಉಪಾಧ್ಯಕ್ಷರಾಗಿ ಗಣೇಶ್ ರೈ ಮತ್ತು ದೀಪಕ್ ಸೋಮಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ಗುಜ್ಜಾರ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಯು.ಎ.ಇ ಘಟಕದ ಅಧ್ಯಕ್ಷರಾಗಿ ಅರುಣ್ ಕುಮಾರ್ ಇವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದ ಸ್ವಾಗತ ದೀಪಕ್ ಅವರು ಮಾಡಿ ವಂದನಾರ್ಪಣೆಯನ್ನು ಅರುಣ್ ಕುಮಾರ್ ನೇರವೆರಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ವಿಘ್ನೇಶ್ ಕುಂದಾಪುರ ನಡೆಸಿಕೊಟ್ಟರು.
Comments are closed.