ದುಬೈ: ಯುಎಇಯ ಅನಿವಾಸಿ ಪದ್ಮಶಾಲಿ ಸಂಘಟನೆ ಯುಎಇ ಪದ್ಮಶಾಲಿ ಸಮುದಾಯದ 14ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ಪದ್ಮಶಾಲಿ ಸಮಾಜದ ಅಧ್ಯಕ್ಷ ರಘುರಾಮ್ ಶೆಟ್ಟಿಗಾರ್, ಕುಕ್ಕಿಕಟ್ಟೆ ಇವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜಾ ಕೈಂಕರ್ಯವನ್ನು ಬಹಳ ಅದ್ದೂರಿಯಾಗಿ ಭಕ್ತಿ ಶ್ರದ್ಧೆಗಳಿಂದ ಮೇ 7ರಂದು ದುಬೈಯ ಸಿಂಧಿ ಸರೆಮೋನಿಯಲ್ ಸೆಂಟರ್ನಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಯಿಂದ ಆರಂಭಗೊಂಡು ಪೂಜಾ ವಿಧಿ ವಿಧಾನಗಳೊಂದಿಗೆ ಮಧ್ಯಾಹ್ನ 3:00 ಗಂಟೆಗೆ ಸಮಾಪನಗೊಂಡಿತು. ಪದ್ಮಶಾಲಿಗರ ಪರವಾಗಿ ಜಗದೀಶ್ ಪದ್ಮಶಾಲಿ ಮತ್ತು ದಿವ್ಯ ಜಗದೀಶ್ ದಂಪತಿಗಳು ಪೂಜೆಗೆ ಕುಳಿತು, ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ಯೊಂದಿಗೆ ಸಾಂಗವಾಗಿ ನೆರವೇರಿತು. ಪುರೋಹಿತರಾದ ಭುಜಂಗ ಭಟ್ಟ ಅವರು ಪೂಜೆಯನ್ನು ನೆರವೇರಿಸಿದರು, ಮುರಳೀಧರಕೃಷ್ಣರವರು ಪುರೋಹಿತರಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಎಇ ಪದ್ಮಶಾಲಿ ಸಮಾಜದ ಸ್ಥಾಪಕ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಮತ್ತು ಯುಎಇಯ ಗಣ್ಯರಾದ ಸರ್ವೊತ್ತಮ್ ಶೆಟ್ಟಿ, ಗಣೇಶ್ ರೈ, ಶೋಧನ್ ಪ್ರಸಾದ್, ಆನಂದ ಬೈಲೂರು, ಬಾಲ ಸಾಲ್ಯಾನ್, ಸತೀಶ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದ ಕೋಶಾಧಿಕಾರಿ ಕೀರ್ತಿ ಕುಮಾರ್ ಅವರು ಯುಎಇ ಪದ್ಮಶಾಲಿ ಸಮಾಜ ಸ್ಥಾಪನೆ ಬಗ್ಗೆ ಕಿರುಪರಿಚಯ ನೀಡಿದರು. ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರ ರವರು, ಮುಖ್ಯ ಅತಿಥಿ ರವಿ ಶೆಟ್ಟಿಗಾರ್ ಮತ್ತು ಯುಎಇಯ ಗಣ್ಯ ಅತಿಥಿಗಳನ್ನು ಸ್ವಾಗತಿಸಿ, ಪದ್ಮಶಾಲಿ ಸಮುದಾಯದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು ಮತ್ತು ಪದ್ಮಶಾಲಿಗರು ಶ್ರೇಯಸ್ಸನ್ನು ಗಳಿಸಬೇಕಾದರೆ ಉನ್ನತ ವಿದ್ಯಾಭ್ಯಾಸದೊಂದಿಗೆ ಮಾತ್ರ ಸಾಧ್ಯ ಎಂದು ತಿಳಿಹೇಳಿದರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ರವಿ ಶೆಟ್ಟಿಗಾರರವರನ್ನು, ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರರವರು ಶಾಲು ಹೊದಿಸಿ ಸನ್ಮಾನಿಸಿದರು. ರವಿ ಶೆಟ್ಟಿಗಾರರವರು ಮಾತನಾಡಿ ಯುಎಇ ಪದ್ಮಶಾಲಿ ಸಮಾಜದ ಹುಟ್ಟು ಮತ್ತು ಬೆಳವಣಿಗೆಗೆ ಕಾರಣೀಭೂತರಾದವರನ್ನು ಶ್ಲಾಘಿಸಿದರು.
ಹಾರ್ಮೋನಿಯಂನಲ್ಲಿ ಸಹಕರಿಸಿದ ರಾಘವೇಂದ್ರ ಮತ್ತು ತಬಲದಲ್ಲಿ ಸಹಕರಿಸಿದ ರಾಜೇಶ್ ಕುತ್ತಾರ್ ಅವರಿಗೂ ಅಧ್ಯಕ್ಷರಾದ ರಘುರಾಮ್ ಶೆಟ್ಟಿಗಾರರವರು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯದರ್ಶಿ ಅರುಂಧತಿ ಮನೋಹರ್ ರವರು ಮುಖ್ಯ ಅತಿಥಿ ರವಿ ಶೆಟ್ಟಿಗಾರ್ ಮತ್ತು ಅತಿಥಿಗಳಾಗಿ ಬಂದಂತಹ ಯುಎಇಯ ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ವಂದನಾರ್ಪಣೆ ಸಲ್ಲಿಸಿದರು ಹಾಗೂ ಸತ್ಯನಾರಾಯಣ ಪೂಜೆ ಯಶಸ್ಸಿಗೆ ಸಹಕರಿಸಿದ ಸಮಾಜದ ಮತ್ತು ಇತರ ಸಮಾಜದ ಬಂಧುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಧನಂಜಯ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್, ಅರವಿಂದ್ ಶೆಟ್ಟಿಗಾರ್, ಮನೋಹರ್ ಶೆಟ್ಟಿಗಾರ್, ಮನೀಷ್ ಪದ್ಮಶಾಲಿ, ಅವೀನ್ ಕುಮಾರ್ ಮತ್ತು ಪದ್ಮಶಾಲಿ ಮಹಿಳಾ ಬಳಗ, ಒಳಗೊಂಡ ಸ್ವಯಂ ಸೇವಕರ ತಂಡವು, ಪದ್ಮಶಾಲಿ ಸಮುದಾಯದ ಉಪಾಧ್ಯಕ್ಷರಾದ ವರದರಾಜ್ ಶೆಟ್ಟಿಗಾರ್ ರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಸಹಕರಿಸಿತು.
ಅಶೋಕ್ ಬೆಲ್ಮಣ್ ಮತ್ತು ವಿವೇಕ್ ರವರು ಸುದ್ದಿ ಮಾಧ್ಯಮಗಳ ಪರವಾಗಿ ಭಾಗವಹಿಸಿದ್ದರು.
Comments are closed.