ಉಡುಪಿ: ವೈದ್ಯರೊಬ್ಬರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣದ ಸೀಟು ನೀಡುವುದಾಗಿ ಭರವಸೆ ನೀಡಿ ವಂಚನೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಹೊಸನಗರದ ನಿವಾಸಿ ಸುಮನ್ ಎಸ್ (24), ಮೂಡುಬಿದಿರೆ ಬೆಳುವಾಯಿ ನಿವಾಸಿಗಳಾದ ಸುಹಾನ್ ಖಾನ್ (22), ಮಹಮ್ಮದ್ ಮಹಜ್ (23) ಬಂಧಿತ ಆರೋಪಿಗಳಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗದು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ 9,56,000 ರೂ ಮೌಲ್ಯದ ಆಸ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ವಿದೇಶದಲ್ಲಿ ಉನ್ನತ ಶಿಕ್ಷಣದ ಸೀಟು ಹಂಚಿಕೆ ವಿಚಾರದಲ್ಲಿ ವಂಚನೆ ಮಾಡಲಾಗಿದೆ ಎಂದು ಸಂತೋಷ್ ಎ. ಎನ್ನುವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಜನರಲ್ ಮೆಡಿಸಿನ್’ ವ್ಯಾಸಂಗ ಮಾಡಿದ್ದು ಹೆಚ್ಚಿನ ವಿದ್ಯಾಭ್ಯಾಸವನ್ನು (ಎಂಪಿಎಚ್ ಪದವಿ) ಯು.ಕೆ.ನಲ್ಲಿ ಪಡೆಯಲು ಉದ್ದೇಶಿಸಿದ್ದರು. ದುಬೈನಲ್ಲಿದ್ದಾಗ, ಅವರು ಅಫ್ತಾಬ್ ಅವರನ್ನು ಭೇಟಿಯಾಗಿದ್ದು, 18 ಲಕ್ಷ ರೂಪಾಯಿಗಳಿಗೆ ಎಂಪಿಎಚ್ ಸೀಟು ಪಡೆಯುವ ಭರವಸೆ ಅಫ್ತಾಭ್ ನೀಡಿದರು. ಸೀಟ್ಗಾಗಿ ಮೊದಲಿಗೆ 8.5 ಲಕ್ಷ ಮುಂಗಡ ಪಾವತಿಯನ್ನು ವರ್ಗಾಯಿಸಲು ಅಫ್ತಾಬ್ ದೂರುದಾರಿಗೆ ಕೇಳಿಕೊಂಡಿದ್ದು ದೂರುದಾರರು ಎನ್ಆರ್ಎ ಖಾತೆಯನ್ನು ಹೊಂದಿರದ ಕಾರಣ, ಅಫ್ತಾಬ್ ಆತನನ್ನು ಎರಡನೇ ಆರೋಪಿ ಸುಮನ್ ಎನ್ನುವನಿಗೆ ಪರಿಚಯಿಸಿದ್ದ. ಅವರ ಸೂಚನೆಯಂತೆ, ದೂರುದಾರರು ಉಡುಪಿಗೆ ಪ್ರಯಾಣಿಸಿ ಉಡುಪಿಯ ಹೋಟೆಲ್ವೊಂದರ ಬಳಿ ಸುಮನ್ ಅವರನ್ನು ಭೇಟಿಯಾದರು. ಆರೋಪಿಯನ್ನು ನಂಬಿದ ದೂರುದಾರರು 8.5 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ಆರೋಪಿಯು ತನ್ನ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಪಿಐ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಈರಣ್ಣ ಶಿರಗುಂಪಿ, ಪಿಎಸ್ಐ ಪುನೀತ್ ಕುಮಾರ್, ಪಿಎಸ್ಐ ಭರತೇಶ್ ಮತ್ತು ತಂಡದ ಸಿಬ್ಬಂದಿಗಳಾದ ಚೇತನ್ ಕುಮಾರ್, ಬಶೀರ್, ಕಾರ್ತಿಕ್, ಸಂತೋಷ್, ಶುಭಾ, ಸುಷ್ಮಾ ಮತ್ತು ನೇತ್ರಾವತಿ ಭಾಗಿಯಾಗಿದ್ದರು. ಅವರಿಗೆ ಸಿಇಎನ್ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್, ವೆಂಕಟೇಶ, ಧರ್ಮಪ್ಪ, ರಾಜೇಶ್, ನಿಲೇಶ್, ದೀಕ್ಷಿತ್ ಮತ್ತು ಮಾಯಪ್ಪ ಸಹಕರಿಸಿದ್ದರು.
ಆರೋಪಿಗಳಿಂದ 5,00,000 ನಗದು, ಇನ್ನೋವಾ ಕಾರು ಮತ್ತು ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 9,56,000 ರೂ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Comments are closed.