ಆರೋಗ್ಯ

ಉತ್ತಮ ಆರೋಗ್ಯದ ಪನ್ನೀರೇ : ಮಣ್ಣಿನ ಮಡಿಕೆಯ ನೀರು

Pinterest LinkedIn Tumblr

ಮಂಗಳೂರು: ನಮ್ಮ ನಿತ್ಯದ ಚಟುವಟಿಕೆಗಳಿಗೆ ನೀರು ತುಂಬಾ ಅಗತ್ಯ. ಈ ನೀರು ಶುದ್ದವಾಗಿರುವುದು ಮಾತ್ರವಲ್ಲ ಸರಿಯಾದ ತಾಪಮಾನದಲ್ಲಿಯೂ ಇದ್ದರೆ ಮಾತ್ರ ಆರೋಗ್ಯಕ್ಕೆ ಪೂರಕ. ಕುಡಿಯುವ ನೀರಿನ ವಿಷಯ ಬಂದಾಗ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನೀರಿನಲ್ಲಿ ಕರಗಿರುವ ಲವಣಗಳು ಪ್ರತಿ ಪ್ರದೇಶದಲ್ಲಿಯೂ ಬೇರೆಬೇರೆಯಾಗಿದ್ದು ಹೊಸಬರು ಈ ನೀರನ್ನು ಕುಡಿದ ತಕ್ಷಣ ಅವರ ದೇಹದ ರಕ್ಷಣಾ ವ್ಯವಸ್ಥೆ ಹೊಸದಾದ ಈ ಲವಣಗಳನ್ನು ವೈರಿಗಳೆಂದೇ ಪರಿಗಣಿಸಿ ನೆಗಡಿಯಂತಹ ರೋಗ ನಿರೋಧಕಾ ವ್ಯವಸ್ಥೆಯನ್ನು ಪ್ರಾರಂಭಿಸಿಬಿಡುತ್ತದೆ. ಇದೇ ಕಾರಣಕ್ಕೆ ಹೊಸ ಊರಿಗೆ ಹೋದವರು ಆ ನೀರನ್ನು ಕುಡಿಯದೇ ಮಿನೆರಲ್ ವಾಟರ್ ಎಂದು ಬಾಟಲಿಗಳಲ್ಲಿ ಸಿಗುವ ಶುದ್ಧ ನೀರನ್ನೇ ಕುಡಿಯುತ್ತಾರೆ.

ಈಗ ಈ ಶುದ್ಧ ನೀರಿನ ಅಗತ್ಯ ಮನೆಯ ನೀರಿಗೂ ಬಂದೊದಗಿದೆ. ಇದಕ್ಕೆಂದೇ ಆರ್. ಒ ಫಿಲ್ಟರ್, ಅಕ್ವಾಗಾರ್ಡ್ ಮೊದಲಾದವು ಮಾರುಕಟ್ಟೆಗೆ ಬಂದಿವೆ. ಆದರೆ ಈ ತೊಂದರೆ ಹಿಂದಿನವರಿಗೂ ಇತ್ತಲ್ಲವೇ? ಅವರೇನು ದೇಶಾಟನೆ ಮಾಡಿರಲಿಲ್ಲವೇ? ಆಗ ನೀರು ಕುಡಿದಿದ್ದರೂ ಕಾಯಿಲೆ ಏಕೆ ಬೀಳಲಿಲ್ಲ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಇದಕ್ಕೆ ಸಿಗುವ ಸರ್ವವ್ಯಾಪಿ ಉತ್ತರ ಎಂದರೆ ಮಣ್ಣಿನ ಮಡಕೆ. ಸಾವಿರಾರು ವರ್ಷಗಳಿಂದ ಮಣ್ಣಿನ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿ ಕುಡಿಯುತ್ತಾ ಬರಲಾಗಿದೆ.

ಅಲ್ಲದೇ ಈ ನೀರನ್ನು ಕುಡಿಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ ಎಂದು ಇಂದಿನ ವಿಜ್ಞಾನ ಸಾಬೀತುಪಡಿಸಿದೆ. ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರು ಸ್ಟೀಲ್, ಪ್ಲಾಸ್ಟಿಕ್ ಅಥವಾ ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಿದ ನೀರಿಗಿಂತಲೂ ಆರೋಗ್ಯಕರ ಎಂದು ಕಂಡುಕೊಳ್ಳಲಾಗಿದೆ. ಬನ್ನಿ, ಮಡಕೆ ನೀರು ಹೇಗೆ ಉತ್ತಮ ಎಂಬುದನ್ನು ನೋಡೋಣ….

pot_water_photo_2

ಪ್ಲಾಸ್ಟಿಕ್ ಬಾಟಲಿಗಳಲ್ಲಿಟ್ಟಿದ್ದ ನೀರಿನಲ್ಲಿ ಬಿಸಿಲಿನ ಮೂಲಕ ಪ್ಲಾಸ್ಟಿಕ್ಕಿನಲ್ಲಿರುವ BPA ಎಂಬ ಹಾನಿಕಾರಕ ಕಣ ಕರಗಿರುತ್ತದೆ. ಇದು ನೀರಿನ ಕಣಗಳಿಗೆ ಅಂಟಿಕೊಂಡಿರುತ್ತವೆ. ಈ ನೀರನ್ನು ಕುಡಿದಾಗ ಆರೋಗ್ಯದಲ್ಲಿ ಹಲವಾರು ತೊಂದರೆಗಳು ಎದುರಾಗುತ್ತವೆ. ಆದರೆ ಮಡಕೆಯಲ್ಲಿಟ್ಟ ನೀರಿನಲ್ಲಿ ಮಣ್ಣಿನ ಯಾವುದೇ ಅಂಶಗಳು ಕರಗುವುದಿಲ್ಲ.

ಒಂದು ವೇಳೆ ಮಣ್ಣಿನಿಂದ ಕೆಂಪಗಾಗಿದ್ದ ನೀರೇ ಆಗಿದ್ದರೂ ಈ ಕಣಗಳು ತುಂಬಾ ಭಾರವಿದ್ದು ಇದನ್ನು ಕುಡಿದಾಗ ನಮ್ಮ ಜೀರ್ಣಾಂಗಗಳ ಮೂಲಕ ಶೋಧಿಸಲ್ಪಟ್ಟು ಹೊರಹಾಕಲ್ಪಡುತ್ತವೆ. ಇದೇ ಕಾರಣಕ್ಕೆ ಮಣ್ಣಿನ ಕೆಂಪು ನೀರು ಕುಡಿದೇ ಇಂದು ಆಫ್ರಿಕಾದ ಹಲವಾರು ಬುಡಕಟ್ಟು ಜನಾಂಗಗಳು ಜೀವಂತವಿದ್ದಾರೆ. ಮಡಕೆಯ ನೀರು ಅಪ್ಪಟವಾಗಿದ್ದು ಜೀವ ರಾಸಾಯನಿಕ ಕ್ರಿಯೆ ಸುಲಭವಾಗಿಸುತ್ತದೆ.

ವಾಸ್ತವವಾಗಿ ಮಣ್ಣಿನಲ್ಲಿರುವ ಲವಣಗಳು ಕ್ಷಾರೀಯವಾಗಿವೆ. ಯಾವುದೇ ಸೆಲೆಯಿಂದ ಬಂದ ನೀರು ಕೊಂಚವಾದರೂ ಆಮ್ಲೀಯತೆ ಹೊಂದಿರುತ್ತದೆ. ಮಣ್ಣಿನಲ್ಲಿರುವ ಲವಣಗಳು ಈ ಆಮ್ಲಗಳನ್ನು ತಟಸ್ಥಗೊಳಿಸಿ ನೀರಿನ ಪಿಎಚ್ ಮಟ್ಟವನ್ನು ಸೊನ್ನೆಗಿಳಿಸುತ್ತವೆ. ಇದೇ ಕಾರಣಕ್ಕೆ ನೆಲದಿಂದ ಉಕ್ಕಿದ ಅಥವಾ ಬಂಡೆಗಳ ನಡುವೆ ಜಿನುಗುವ ನೀರು ಅಪ್ಪಟವಾಗಿದೆ.

ಮಣ್ಣಿನ ಮಡಿಕೆಯಲ್ಲಿಯೂ ಇದೇ ರೀತಿಯ ಕಾರ್ಯ ಜರುಗುತ್ತದೆ. ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಥಟ್ಟನೇ ಅಪ್ಪಟವಾಗುವುದಿಲ್ಲ, ಒಂದು ರಾತ್ರಿಯಾದರೂ ಇಡಬೇಕು. ಬಳಿಕ ಸೇವಿಸಿದರೆ ಉತ್ತಮ. ಬರೆಯ ನೀರು ಮಾತ್ರವಲ್ಲ, ಆಮ್ಲೀಯವಾಗಿರುವ ಇತರ ಆಹಾರ, ಹಾಲು ಮೊದಲಾದವುಗಳನ್ನೂ ಮಣ್ಣಿನ ಮಡಕೆಯಲ್ಲಿ ಬಿಸಿಮಾಡುವುದೂ ಆರೋಗ್ಯಕರ.

ಯಾವುದೇ ಊರಿನ ನೀರಾದರೂ ಆ ಊರಿನ ಜನರಿಗೆ ತೊಂದರೆ ನೀಡದಿದ್ದರೂ ಹೊಸಬರು ಈ ನೀರು ಕುಡಿದ ತಕ್ಷಣ ಗಂಟಲ ತುರಿಕೆ ಪ್ರಾರಂಭವಾಗುತ್ತದೆ. ಆದರೆ ಇದೇ ನೀರನ್ನು ಒಂದು ರಾತ್ರಿ ಮಡಿಕೆಯಲ್ಲಿಟ್ಟು ಮರುದಿನ ಹೊಸಬರಿಗೆ ನೀಡಿದರೆ ಹೊಸಬರಿಗೂ ಗಂಟಲ ತುರಿಕೆ ಅಥವಾ ಬೇರಾವ ತೊಂದರೆಯೂ ಬರುವುದಿಲ್ಲ. ವಿಶೇಷವಾಗಿ ಆಟವಾಡಿ ದಣಿದು ಮನೆಗೆ ಬರುವ ಮಕ್ಕಳು ನೀರು ಕುಡಿದಾಗ ಹಿರಿಯರು ಫ್ರಿಜ್ಜಿನ ನೀರಿನ ಬದಲು ಮಡಕೆಯ ನೀರನ್ನು ಕುಡಿಯಲು ಸಲಹೆ ನೀಡುವುದನ್ನು ಗಮನಿಸಬಹುದು.

ಏಕೆಂದರ ದಣಿದ ದೇಹಕ್ಕೆ ಕೊಂಚ ತಂಪಗಿರುವ ನೀರು ಬೇಕೇ ಹೊರತು ಅತಿ ತಣ್ಣಗಿರುವುದಲ್ಲ. ಆದರೆ ಫ್ರಿಜ್ಜಿನ ನೀರು ಕುಡಿದರೆ ದೇಹದ ತಾಪಮಾನ ಥಟ್ಟನೇ ಇಳಿದು ಬಿಡುವ ಕಾರಣ ಆರೋಗ್ಯ ಕೆಡಬಹುದು. ಆದರೆ ಮಡಕೆಯ ನೀರು ಕೊಂಚವೇ ತಣ್ಣಗಿದ್ದು ದೇಹದ ತಾಪಮಾನವನ್ನು ಆರೋಗ್ಯಕರ ಮಟ್ಟಕ್ಕೆ ಮಾತ್ರ ಇಳಿಸುತ್ತದೆ.

ಮಣ್ಣಿನಿಂದ ಮಾಡಿದ ಯಾವುದೇ ಪಾತ್ರೆಗಳು ಸುಲಭವಾಗಿ ಒಡೆಯುವುದರಿಂದ ತುಂಬಾ ಕಾಳಜಿ ಅಗತ್ಯ. ಅಲ್ಲದೇ ಮಡಕೆ ಚೆನ್ನಾಗಿ ಸುಟ್ಟಿರಬೇಕು. ಸುಡದ ಅಥವಾ ಬಿಸಿಲಿನಲ್ಲಿ ಒಣಗಿಸಿದ ಮಡಿಕೆಯಲ್ಲಿ ನೀರು ತಣ್ಣಗಾಗುವುದಿಲ್ಲ. ಸುಟ್ಟ ಮಡಿಕೆಯಲ್ಲಿ ಮಾತ್ರ ಸೂಕ್ಷ್ಮ ರಂಧ್ರಗಳು ಮೂಡಿದ್ದು ಇದರಿಂದ ಹೊರಹೋಗುವ ನೀರಿನ ಪಸೆ ಆವಿಯಾಗುವಾಗ ತನ್ನೊಂದಿಗೆ ಕೊಂಚ ತಾಪಮಾನವನ್ನೂ ಕೊಂಡು ಹೋಗುತ್ತದೆ. ಮಡಿಕೆಯ ನೀರು ತಣ್ಣಗಾಗಲು ಇದೇ ಕಾರಣ.

ಯಾವುದೇ ಕಾರಣಕ್ಕೂ ಮಡಿಕೆಯ ಹೊರಭಾಗಕ್ಕೆ ಬಣ್ಣ ಹೊಡೆಯಬಾರದು. ಮಡಿಕೆಯಲ್ಲಿಟ್ಟ ನೀರನ್ನು ಗರಿಷ್ಠ ಮೂರು ದಿನಗಳ ಒಳಗೆ ಬಳಸಬೇಕು. ಇಲ್ಲದಿದ್ದರೆ ಈ ನೀರನ್ನು ಪೂರ್ಣವಾಗಿ ಖಾಲಿ ಮಾಡಿ ಹೊಸ ನೀರನ್ನು ಹಾಕಬೇಕು. ವಾರಕ್ಕೊಮ್ಮೆ ಒಳಭಾಗವನ್ನು ಉಜ್ಜಿ ಸ್ವಚ್ಛಗೊಳಿಸಬೇಕು.

Comments are closed.