ಜಗತ್ತಿನಲ್ಲೇ ಅತೀ ಹೆಚ್ಚಾಗಿ ಸೇವಿಸುವ ಹಣ್ಣು ಬಾಳೆಹಣ್ಣು. ಬಾಳೆಹಣ್ಣು ಅತ್ಯಂತ ಹೆಚ್ಚು ಪೋಷಕಾಂಶವುಳ್ಳ ಆಹಾರ ಎಂದು ವೈದ್ಯರಿಂದ ಹಿಡಿದು ಪ್ರತಿಯೊಬ್ಬರು ಶಿಫಾರಸು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ತಕ್ಷಣವೇ ಶಕ್ತಿ ತುಂಬುತ್ತದೆ. ಒಂದು ರೀತಿಯಲ್ಲಿ ಗ್ಲೂಕೊಸ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಕೂಡ ಹೇಳಬಹುದು. ಬಾಳೆಹಣ್ಣಿನಲ್ಲಿ ಕೂಡ ಸಾಕಷ್ಟು ತಳಿಗಳಿದ್ದರೂ ಬಹುತೇಕ ಎಲ್ಲಾ ಹಣ್ಣುಗಳಲ್ಲಿ ಒಂದೇ ರೀತಿಯ ಪೋಷಾಕಾಂಶಗಳು ಇವೆ ಎಂದು ಭಾವಿಸುತ್ತೇವೆ. ಸಾಮಾನ್ಯವಾಗಿ ಬಾಳೆಹಣ್ಣಿನಲ್ಲಿ 11 ತರಹದ ಖನಿಜಾಂಶಗಳು, 6 ತರಹದ ವಿಟಮಿನ್ಸ್, ಫೈಬರ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳು ಇವೆ.
ಬಾಳೆಹಣ್ಣು ಅಂದರೆ ಹಳದಿ ಬಣ್ಣದ ಬಾಳೆಹಣ್ಣುಗಳಷ್ಟೇ ಎಲ್ಲರಿಗೂ ಗೊತ್ತು. ಆದರೆ ಕೆಂಪು ಬಾಳೆಹಣ್ಣುಗಳ ಬಗ್ಗೆ ಮತ್ತು ಅದರ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಹಣ್ಣು ಇತರೆ ಹಣ್ಣುಗಳಿಗಿಂತ ಹೆಚ್ಚು ಸಿಹಿ ಮಾತ್ರವಲ್ಲ ಹೆಚ್ಚು ಆರೋಗ್ಯದಾಯಕವೂ ಹೌದು.
ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣು ಮತ್ತು ರಾಸ್ಪ್ ಬೆರ್ರಿ ಹಣ್ಣುಗಳ ಸಂಯೋಗದಿಂದ ಉಂಟಾಗುವ ವಿಶಿಷ್ಟ ರುಚಿ ಕೊಡುತ್ತದೆ. ಇದರಲ್ಲಿ ಬಹಳಷ್ಟು ಆರೋಗ್ಯ ಲಾಭಗಳಿವೆ. ಕೆಂಪು ಬಾಳೆಹಣ್ಣುಗಳನ್ನು ಸಾಮಾನ್ಯವಾಗಿ ನಮ್ಮ ದೇಶದ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ವಿಶ್ವದಾದ್ಯಂತ ಸುಮಾರು 14 ರಿಂದ 15 ತರಹದ ಬಾಳೆಹಣ್ಣುಗಳಿವೆ. ಅದರಲ್ಲಿ ಹಳದಿ ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ ಮತ್ತು ಎಲ್ಲರೂ ಸೇವಿಸುತ್ತಾರೆ. ಕೆಂಪು ಬಾಳೆಹಣ್ಣು ಬೆರ್ರಿ ಹಣ್ಣಿನ ರುಚಿಯನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪೊಟಾಶಿಯಂ ಹೊಂದಿದೆ ಮತ್ತು ಕ್ಷಾರೀಯ ಅಂಶವನ್ನೂ ಒಳಗೊಂಡಿದೆ. ಇದರಲ್ಲಿ ಆ್ಯಂಟಿಒಕ್ಸಿಡೆಂಟ್ ಆಗಿ ಕಲಸ ಮಾಡುವ ಆಂಥೋಸಯಾನಿನ್ (anthocyanin) ಎಂಬ ಅಂಶವೂ ಇದೆ.
ಫೈಬರ್ ಮತ್ತು ವಿಟಮಿನ್ ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಸಾಮಾನ್ಯವಾಗಿ ಎಲ್ಲಾ ಜಾತಿಯ ಬಾಳೆಹಣ್ಣುಗಳು ಒಂದೇ ತರಹದ ಪೋಷಕಾಂಶಗಳನ್ನು ಹೊಂದಿದ್ದರೂ, ಕೆಂಪು ಬಾಳೆಹಣ್ಣುಗಳು ಬೇರೆಯದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್, ಖನಿಜಾಂಶ ಮತ್ತು ಆ್ಯಂಟಿಒಕ್ಸಿಡೆಂಟ್ ಅಂಶಗಳಿವೆ.ಈ ಬಾಳೆಹಣ್ಣುಗಳಲ್ಲಿ ನಾರಿನಂಶ ಹೆಚ್ಚಿಗೆ ಇರುವುದರಿಂದ ಇದು ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ.ಇದು ಸಕ್ಕರೆ ಅಂಶವನ್ನು ದೇಹದಲ್ಲಿ ನಿಧಾನವಾಗಿ ಹರಡುವುದರಿಂದ ದೇಹದ ಶಕ್ತಿಯ ಉತ್ತಮ ಮಟ್ಟದಲ್ಲಿರಿಸುತ್ತದೆ. ಪೊಟಾಶಿಯಂ ಅಷ್ಟೇ ಅಲ್ಲದೆ, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್, ಬಿ6 ವಿಟಮಿನ್, ವಿಟಮಿನ್ ಡಿ ಇದ್ದು, ಇವು ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡಿ, ಪ್ರೊಟೀನ್ ಒದಗಿಸುತ್ತದೆ.
ಕೆಂಪು ಬಾಳೆಹಣ್ಣಿನ ಇತರ ಉಪಯೋಗಗಳು:
ದೇಹ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ:
ಕೆಂಪು ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶ ನಿಮಗೆ ತುಂಬಾ ಹೊತ್ತು ಹಸಿವಾಗದಂತೆ ತಡೆಯುತ್ತದೆ. ಒಂದು ಪೂರ್ತಿ ಕೆಂಪು ಬಾಳೆಹಣ್ಣು ಕೇವಲ 90 ರಿಂದ 100 ರಷ್ಟು ಕ್ಯಾಲೋರಿಯನ್ನು ಹೊಂದಿದ್ದು, ಒಳ್ಳೆಯ ಪಿಷ್ಠವನ್ನು ಒಳಗೊಂಡಿರುವುದರಿಂದ ಅನಗತ್ಯವಾಗಿ ತಿನ್ನುವ ಬಯಕೆಗೆ ಕಡಿವಾಣ ಆಗುತ್ತದೆ. ಇದು ನಿಮ್ಮ ತೂಕ ಇಳಿಸುವ ಕ್ರೀಯೆಗೆ ಸಹಾಯ ಮಾಡುತ್ತದೆ.
ಕಿಡ್ನಿಯ ಆರೋಗ್ಯಕ್ಕೆ ಉತ್ತಮ:
ಎಲ್ಲರಿಗೂ ಗೊತ್ತಿರುವಂತೆ ಪೊಟಾಶಿಯಂ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಸಮತೋಲನದಲ್ಲಿಡಲೂ ಇದು ಸಹಾಯಕಾರಿ. ಇದರಿಂದ ಶರೀರದಲ್ಲಿರುವ ಮೂಳೆಗಳು ಆರೋಗ್ಯಕರವಾಗಿದ್ದು, ಗಟ್ಟಿಯಾಗಿರುತ್ತದೆ.
ಧೂಮಪಾನ ತ್ಯಜಿಸಲು ಸಹಕಾರಿ:
ಮೆಗ್ನಿಶಿಯಂ ಮತ್ತು ಪೊಟಾಶಿಯಂ ನಿಕೋಟಿನ್ ಹೊಂದಿರುವ ಧೂಮಪಾನ, ಗುಟ್ಕಾ ಮುಂತಾದ ದುಶ್ಚಟಗಳಿಂದ ಹೊರಬರಲು ಸಹಾಯ ಮಾಡುತ್ತದೆ. ನಿಕೋಟಿನ್ ಸಿಗರೇಟ್ ಮತ್ತು ಇತರ ತಂಬಾಕುಗಳಲ್ಲಿರುವ ಒಂದು ಅಂಶವಾಗಿರುವುದರಿಂದ ಕೆಂಪು ಬಾಳೆಹಣ್ಣು ಸೇವನೆ ಮಾಡುವುದರಿಂದ ಈ ಅಭ್ಯಾಸದಿಂದ ನಿಧಾನವಾಗಿ ಹೊರಬರಬಹುದು.
ಚರ್ಮದ ರಕ್ಷಣೆ:
ಕೆಂಪು ಬಾಳೆಹಣ್ಣುಗಳ ಸೇವನೆಯಿಂದ ಮಾತ್ರ ಆರೋಗ್ಯ ಲಾಭವಲ್ಲ, ಇದನ್ನು ಸೇವಿಸುವುದರಿಂದ ಅಥವಾ ಇದರ ಪೇಸ್ಟ್ ಮುಖಕ್ಕೆ ಹಚ್ಚಿಕೊಳ್ಳುವುದೂ ಬಹಳ ಒಳ್ಳೆಯದು.ಪೌಡರ್ ಮಾಡಿದ ಓಟ್ಸ್, ಕಿವುಚಿದ ಕೆಂಪು ಬಾಳೆಹಣ್ಣು ಮತ್ತು ಕೆಲವು ಹನಿ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಮುಖ ತೊಳೆದರೆ ಮುಖ ಕಾಂತಿಯುತವಾಗುತ್ತದೆ.
ರಕ್ತ ಶುದ್ಧೀಕರಿಸುತ್ತದೆ:
ಈ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ರಕ್ತವನ್ನು ಶುದ್ಧೀಕರಿಸಿ, ಹಿಮೋಗ್ಲೋಬಿನ್ ಮಟ್ಟವನ್ನು ಉತ್ತಮಪಡಿಸುತ್ತದೆ.ಇದು ನಿಮ್ಮ ಇಮ್ಯುನಿಟಿಯನ್ನೂ ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ದೇಹದಲ್ಲಿರುವ ಪ್ರೋಟಿನ್ ನ್ನು ಸಮತೋಲದಲ್ಲಿಟ್ಟು ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ.
ಕೂದಲಿಗೆ ಅತ್ಯುತ್ತಮ:
ಕೆಂಪು ಬಾಳೆಹಣ್ಣನ್ನು ಕಿವುಚಿ ಅದಕ್ಕೆ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಅಥವಾ ಬಾದಾಮಿ ಎಣ್ಣೆ ಹಾಕಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ. ನಂತರ ಇದರ ಮೇಲೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಸಿಂಪಡಿಸಿ. 30 ನಿಮಿಷದ ನಂತರ ಕೂದಲು ತೊಳೆದರೆ ಮಿನುಗುವ ಸಿಲ್ಕೀ ಕೂದಲು ನಿಮ್ಮದಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ತಲೆಹೊಟ್ಟು, ಕೂದಲುದುರುವಿಕೆ ಮತ್ತು ಒಣಕೂದಲಿನಿಂದ ರಕ್ಷಿಸುತ್ತದೆ.
Comments are closed.