ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದೆಂದು ಹಿರಿಯರು ಹೇಳುತ್ತಾರೆ. ಏಕೆಂದು ಕೇಳಿದರೆ ಗಣಪತಿ ಕಥೆ ಹೇಳಿ ಬಾಯಿ ಮುಚ್ಚಿಸುತ್ತಾರೆ ಹೊರತು, ಇದರ ಹಿಂದಿನ ವೈಜ್ಞಾನಿಕ ಕಾರಣವೇನೆಂದು ಹೇಳುವುದಿಲ್ಲ. ಅಷ್ಟಕ್ಕೂ ಈ ಆಚರಣೆಗೇನು ಕಾರಣ?
ರಾತ್ರಿ ಮಲಗುವಾಗ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಏಕೆ ಎಂದು ಕೇಳಿದರೆ ನಮಗೆಲ್ಲ ಸಿಕ್ಕಿರುವ ಉತ್ತರ ಗಣಪತಿಯ ಕತೆ. ಪಾರ್ವತಿ ಸ್ನಾನ ಮಾಡುವಾಗ ಬಾಗಿಲು ಕಾಯಲು ಗಣಪತಿಯನ್ನು ನಿಲ್ಲಿಸಿದ್ದಳಂತೆ. ಆಗ ಈಶ್ವರ ಬಂದು ಮನೆಯೊಳಗೆ ಹೋಗಲು ದಾರಿ ಬಿಡು ಅಂದ. ಗಣಪತಿ ಒಪ್ಪಲಿಲ್ಲ. ಈಶ್ವರ ಸಿಟ್ಟುಗೊಂಡು ಅವನ ತಲೆ ಕತ್ತರಿಸಿದ. ಪಾರ್ವತಿ ಸ್ನಾನ ಮುಗಿಸಿ ಬಂದು ಅದನ್ನು ನೋಡಿ ಸಿಟ್ಟುಗೊಂಡಳು. ನಂತರ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿರುವ ಪ್ರಾಣಿಯ ರುಂಡ ಕತ್ತರಿಸಿ ತಂದು ಇವನಿಗೆ ಜೋಡಿಸಿ ಬದುಕಿಸಿ ಅಂದಳು. ಅದರಂತೆ ಈಶ್ವರ ಉತ್ತರ ದಿಕ್ಕಿಗೆ ತಲೆ ಹಾಕಿದ್ದ ಆನೆಯ ರುಂಡ ಕತ್ತರಿಸಿ ಗಣಪತಿಗೆ ತಂದು ಜೋಡಿಸಿದ. ಅಂದಿನಿಂದ ಗಣಪತಿಗೆ ಆನೆಯ ಮುಖ ಬಂತು ಮತ್ತು ಉತ್ತರ ದಿಕ್ಕಿಗೆ ತಲೆಹಾಕಿ ಮಲಗುವುದು ಒಳ್ಳೆಯದಲ್ಲ ಎಂಬ ಕತೆಯೂ ಬಂತು.
ಈ ಕತೆ ಹೊರತಾಗಿ, ವಾಸ್ತು ಶಾಸ್ತ್ರವೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಎಂದು ಹೇಳುತ್ತದೆ. ಮೃತ ಶರೀರವನ್ನು ಮಾತ್ರ ಉತ್ತರ ದಿಕ್ಕಿಗೆ ತಲೆ ಇರಿಸಿ ಮಲಗಿಸುವ ಪದ್ಧತಿ ಇದೆ. ನಾವು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದರೆ ಅನಾರೋಗ್ಯದ ಸಮಸ್ಯೆಗಳು ಬರಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗುವುದು ಒಳ್ಳೆಯದು.
ಹಳೆ ಆಚಾರ, ಹೊಸ ವಿಚಾರ: ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ನಮ್ಮ ಶರೀರಕ್ಕೆ ತಲೆಯು ಉತ್ತರ ಧ್ರುವ ಇದ್ದಂತೆ. ತಲೆಯನ್ನು ಉತ್ತರ ದಿಕ್ಕಿಗೆ ಇರಿಸಿ ಮಲಗಿದರೆ ದೇಹದ ಉತ್ತರ ಧ್ರುವ ಹಾಗೂ ಭೂಮಿಯ ಉತ್ತರ ಧ್ರುವಗಳು ಸಂಧಿಸಿ ರಕ್ತದ ಚಲನೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅದರಿಂದ ನಿದ್ದೆ ಸರಿಯಾಗಿ ಬರುವುದಿಲ್ಲ ಮತ್ತು ಒತ್ತಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ವೈದ್ಯಕೀಯ ವಿಜ್ಞಾನ ಒಪ್ಪುವುದಿಲ್ಲ. ಆದರೂ, ಉತ್ತರ ದಿಕ್ಕು ಹೊರತುಪಡಿಸಿ ಇನ್ನೂ ಮೂರು ದಿಕ್ಕುಗಳಿರುವುದರಿಂದ ಉತ್ತರ ದಿಕ್ಕಿಗೆ ತಲೆಹಾಕಿ ಮಲಗುವುದನ್ನು ತಪ್ಪಿಸಿದರೆ ನಷ್ಟವೇನಿಲ್ಲ.
Comments are closed.