ಇತರ ವಿಟಾಮಿನ್ಗಳು,ಖನಿಜಗಳು ಮತ್ತು ಪೋಷಕಾಂಶಗಳಂತೆ ಮ್ಯಾಗ್ನೀಷಿಯಂ ಕೂಡ ನಮ್ಮ ಶರೀರಕ್ಕೆ ಅಗತ್ಯವಾಗಿದೆ. ನಮ್ಮ ಸ್ನಾಯುಗಳು ಮತ್ತು ಹೃದಯದ ಆರೋಗ್ಯಕ್ಕಾಗಿ ಮ್ಯಾಗ್ನೀಷಿಯಂ ಸೇವನೆ ಮುಖ್ಯವಾಗಿದೆ. ಸೂಕ್ತ ಪ್ರಮಾಣದಲ್ಲಿ ಮ್ಯಾಗ್ನೀಷಿಯಂ ಸೇವನೆಯು ಅಪಧಮನಿ ಕಾಠಿಣ್ಯ,ಅಪಧಮನಿಗಳ ಭಿತ್ತಿಗಳಲ್ಲಿ ಕೊಬ್ಬು ಸಂಗ್ರಹ ಮತ್ತು ಅಧಿಕ ರಕ್ತದೊತ್ತಡಗಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆಗೊಳಿಸುತ್ತದೆ.
ಅಂದ ಹಾಗೆ ಶರೀರದಲ್ಲಿಯ 300ಕ್ಕೂ ಅಧಿಕ ಜೈವಿಕ ರಾಸಾಯನಿಕ ಪ್ರತಿವರ್ತನೆಗಳಿಗೆ ಮ್ಯಾಗ್ನೀಷಿಯಂ ಅಗತ್ಯವಾಗಿದೆ ಎನ್ನುವುದು ನಿಮಗೆ ಗೊತ್ತೇ? ನಮ್ಮ ಶರೀರಕ್ಕೆ ಇಷ್ಟೆಲ್ಲ ಲಾಭಗಳನ್ನು ನೀಡುವ ಮ್ಯಾಗ್ನೀಷಿಯಂ ಕೊರತೆಯನ್ನು ಸೂಚಿಸುವ ಐದು ಸಂಕೇತಗಳ ಕುರಿತು ಮಾಹಿತಿಗಳಿಲ್ಲಿವೆ…
ಸ್ನಾಯು ಸೆಳೆತ
ಸ್ನಾಯುಗಳ ಸೆಳೆತ ಮತ್ತು ನಡುಕ ಆಗಿಂದಾಗ್ಗೆ ಅನುಭವವಾಗುತ್ತಿದ್ದರೆ ಅದು ನಮ್ಮ ಶರೀರದಲ್ಲಿ ಮ್ಯಾಗ್ನೀಷಿಯಂ ಕೊರತೆಯನ್ನು ಸೂಚಿಸುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ಸ್ನಾಯುಗಳು ಸೆಳವುಗಳಿಗೂ ಒಳಗಾಗುತ್ತವೆ. ಸ್ನಾಯು ಸೆಳೆತಕ್ಕೆ ಒತ್ತಡ ಅಥವಾ ಅತಿಯಾದ ಕೆಫೀನ್ ಸೇವನೆಯಂತಹ ಇತರ ಕಾರಣಗಳೂ ಇವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.
ಅಧಿಕ ರಕ್ತದೊತ್ತಡ
ಕಡಿಮೆ ಮ್ಯಾಗ್ನೀಷಿಯಂ ಮಟ್ಟವು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿವಿಧ ಅಧ್ಯಯನಗಳು ಸೂಚಿಸಿವೆ. ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಮ್ಯಾಗ್ನೀಷಿಯಂ ಸೇವನೆಯು,ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಹಿರಿಯರಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
ಅಸ್ತಮಾ
ಕೆಲವೊಮ್ಮೆ ಅಸ್ತಮಾದಿಂದ ಬಳಲುತ್ತಿರುವ ರೋಗಿಗಳಲ್ಲಿ ಮ್ಯಾಗ್ನೀಷಿಯಂ ಕೊರತೆಯಿರುವುದು ಕಂಡುಬಂದಿದೆ. ಅಂದರೆ ಇಂತಹ ವ್ಯಕ್ತಿಗಳಲ್ಲಿ ಇತರ ಆರೋಗ್ಯಯುತ ವ್ಯಕ್ತಿಗಳಿಗಿಂತ ಕಡಿಮೆ ಮಟ್ಟದಲ್ಲಿ ಮ್ಯಾಗ್ನೀಷಿಯಂ ಇರಬಹುದು. ಮ್ಯಾಗ್ನೀಷಿಯಂ ಕೊರತೆಯು ಶ್ವಾಸಕೋಶಗಳ ವಾಯುಮಾರ್ಗದ ಪದರಗಳಲ್ಲಿಯ ಸ್ನಾಯುಗಳಲ್ಲಿ ಕ್ಯಾಲ್ಸ್ಸಿಯಂ ಸಂಗ್ರಹಗೊಳ್ಳಲು ಕಾರಣವಾಗಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಉಸಿರಾಡುವುದು ಹೆಚ್ಚು ಕಷ್ಟವಾಗುತ್ತದೆ.
ಅನಿಯಮಿತ ಹೃದಯ ಬಡಿತ
ಹಾರ್ಟ್ ಅರಿಥಿಮಿಯಾ ಅಥವಾ ಅನಿಯಮಿತ ಹೃದಯ ಬಡಿತವು ಮ್ಯಾಗ್ನೀಷಿಯಂ ಕೊರತೆಯನ್ನು ಸೂಚಿಸುವ ಅತ್ಯಂತ ಗಂಭೀರ ಲಕ್ಷಣವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಹಾರ್ಟ್ ಅರಿಥಿಮಿಯಾದ ಲಕ್ಷಣಗಳು ಸೌಮ್ಯವಾಗಿರಬಹುದು ಅಥವಾ ಲಕ್ಷಣಗಳೇ ಇಲ್ಲದಿರಬಹುದು. ಕೆಲವು ವ್ಯಕ್ತಿಗಳಲ್ಲಿ ಅದು ಹೃದಯಬಡಿತಗಳ ನಡುವೆ ವಿರಾಮಕ್ಕೆ ಕಾರಣವಾಗಬಹುದು. ತಲೆ ಹಗುರವಾಗುವಿಕೆ,ಉಸಿರಾಟದ ತೊಂದರೆ,ಎದೆನೋವು ಅಥವಾ ಬವಳಿಯುಂಟಾಗುವಿಕೆ ಇವು ಅರಿಥಿಮಿಯಾದ ಸಂಭಾವ್ಯ ಲಕ್ಷಣಗಳಾಗಿವೆ. ಆದರೆ ಕೆಲವು ಗಂಭೀರ ಪ್ರಕರಣಗಳಲ್ಲಿ ಅರಿಥಿಮಿಯಾ ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಹುದು.
ಮಾನಸಿಕ ಅನಾರೋಗ್ಯ
ಮಾನಸಿಕ ಅಸ್ವಸ್ಥತೆಯು ಮ್ಯಾಗ್ನೀಷಿಯಂ ಕೊರತೆಯಿಂದ ಉಂಟಾಗುವ ಇನ್ನೊಂದು ಆರೋಗ್ಯ ಸಮಸ್ಯೆಯಾಗಿದೆ. ಮ್ಯಾಗ್ನೀಷಿಯಂ ಕೊರತೆಯು ಭಾವಶೂನ್ಯತೆ,ಸನ್ನಿ ಮತ್ತು ಕೋಮಾಗಳಿಗೆ ಕಾರಣವಾಗುತ್ತದೆ.ಶರೀರದಲ್ಲಿ ಮ್ಯಾಗ್ನೀಷಿಯಂ ಮಟ್ಟ ಕುಸಿಯುವುದರಿಂದ ಖಿನ್ನತೆಗೊಳಗಾಗುವ ಅಪಾಯವೂ ಹೆಚುತ್ತದೆ.
ಡಾರ್ಕ್ ಚಾಕ್ಲೇಟ್,ಸೋಯಾ ಮೊಸರು,ಬಾದಾಮ,ಗೋಡಂಬಿ ಮತ್ತು ನೆಲಗಡಲೆ,ನವಣೆ ಅಕ್ಕಿ, ಇಡಿಯ ಗೋದಿ, ಬಸಳೆ,ಕಪ್ಪು ಅವರೆ,ಅವಕಾಡೊ ಇತ್ಯಾದಿಗಳು ಸಮೃದ್ಧವಾಗಿ ಮ್ಯಾಗ್ನೀಷಿಯಂ ಅನ್ನು ಒಳಗೊಂಡಿವೆ.
Comments are closed.