ಆಯಂಟಿಬಯಾಟಿಕ್ ಅಥವಾ ಪ್ರತಿಜೀವಕ ಮಾತ್ರೆಗಳನ್ನು ಸೇವಿಸುವ ಮುನ್ನ ನಿಮಗೆ ತಿಳಿದಿರಲೇಬೇಕಾದ ಕೆಲವು ಆಸಕ್ತಿದಾಯಕ ವಿಷಯಗಳಿವೆ. ಆಯಂಟಿಬಯಾಟಿಕ್‌ಗಳನ್ನು ಶೋಧಿಸಿದಾಗಿನಿಂದ ಅವುಗಳ ಬಳಕೆ ಹೆಚ್ಚುತ್ತಲೇ ಇದೆ. ಪ್ರತಿದಿನ ಅದೆಷ್ಟೋ ವೈದ್ಯರು ತಮ್ಮ ರೋಗಿಗಳಿಗೆ ಇವುಗಳನ್ನು ಶಿಫಾರಸು ಮಾಡುತ್ತಲೇ ಇರುತ್ತಾರೆ,ಹೀಗಾಗಿ ಆಯಂಟಿಬಯಾಟಿಕ್‌ಗಳ ಸೇವನೆಯ ಬಗ್ಗೆ ಚಿಂತಿಸಬೇಕಿಲ್ಲ ಎಂದು ಅನಿಸುವುದು ಸಹಜವೇ ಆಗಿದೆ. ಆದರೆ ಆಯಂಟಿಬಯಾಟಿಕ್‌ಗಳು ಶಕ್ತಿಶಾಲಿ ಔಷಧಿಗಳಾಗಿವೆ ಎಂಬ ಅಂಶವನ್ನು ಕಡೆಗಣಿಸುವುದು ಅಪ್ಪಟ ಮೂರ್ಖತನವಾಗುತ್ತದೆ. ಈ ಮಾತ್ರೆಗಳನ್ನು ಸೇವಿಸುವ ಮುನ್ನ ನಮಗೆ ಅಗತ್ಯವಾಗಿ ತಿಳಿದಿರಬೇಕಾದ ಮಾಹಿತಿಗಳಿಲ್ಲಿವೆ…….
ಆಯಂಟಿಬಯಾಟಿಕ್‌ಗಳು ಎಲ್ಲವನ್ನೂ ಗುಣಪಡಿಸುವುದಿಲ್ಲ
ಆಯಂಟಿಬಯಾಟಿಕ್‌ಗಳು ಪ್ರತಿಯೊಂದೂ ಕಾಯಿಲೆಯನ್ನು ಗುಣಪಡಿಸುವುದಿಲ್ಲ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಶರೀರದಲ್ಲಿ ಬ್ಯಾಕ್ಟೀರಿಯಾಗಳಿಂದ ಸೋಂಕುಗಳುಂಟಾದಾಗ ಇವು ಕೆಲಸಕ್ಕೆ ಬರುತ್ತವೆ. ವೈದ್ಯರು ವೈರಲ್ ಸೋಂಕುಗಳಿಗೆ ಆಯಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುವುದಿಲ್ಲ.
ಆಯಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾ
ಆಯಂಟಿಬಯಾಟಿಕ್‌ಗಳನ್ನು ಪದೇ ಪದೇ ಸೇವಿಸುತ್ತಿದ್ದರೆ ಶರೀರದಲ್ಲಿ ಆಯಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾ ಸೃಷ್ಟಿಯಾಗುವ ಸಾಧ್ಯತೆಯಿರುತ್ತದೆ. ಆಯಂಟಿಬಯಾಟಿಕ್‌ಗಳಿಗೆ ಈ ಬ್ಯಾಕ್ಟೀರಿಯಾಗಳು ಬಗ್ಗುವುದಿಲ್ಲವಾದ್ದರಿಂಂದ ಚಿಕಿತ್ಸೆ ಕಠಿಣವಾಗುತ್ತದೆ ಮತ್ತು ಇವು ವ್ಯಕ್ತಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿ ಹಾನಿಯನ್ನುಂಟು ಮಾಡಬಹುದು.
ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತವೆ
ಆಯಂಟಿಬಯಾಟಿಕ್‌ಗಳಿಗೆ ಆಯ್ಕೆ ಸಾಮರ್ಥ್ಯವಿಲ್ಲ,ಅಂದರೆ ಅವು ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವ ಉದ್ದೇಶದಿಂದ ಆಯಂಟಿಬಯಾಟಿಕ್‌ಗಳನ್ನು ಸೇವಿಸಲಾಗುತ್ತದೆಯಾದರೂ ಕರುಳುಗಳಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳ ನಾಶವು ವ್ಯಕ್ತಿಯ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ.
ನಿರೋಧಕ ಶಕ್ತಿ ಕುಂಠಿತ
ಅಚ್ಚರಿಯ ವಿಷಯವೆಂದರೆ ಆಯಂಟಿಬಯಾಟಿಕ್‌ಗಳ ಅತಿಯಾದ ಸೇವನೆಯು ಶರೀರದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದರಿಂದ ನಾವು ಸೋಂಕುಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆಯಂಟಿಬಯಾಟಿಕ್‌ಗಳು ನಿರೋಧಕ ಶಕ್ತಿಯ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಜೊತೆಗೆ ಕರುಳುಗಳಲ್ಲಿಯ ಒಳ್ಳೆಯ ಬ್ಯಾಕ್ಟೆರಿಯಾಗಳನ್ನು ಕೊಲ್ಲುವ ಮೂಲಕ ವಿಷಮಚಕ್ರವೊಂದನ್ನು ಸೃಷ್ಟಿಸುತ್ತವೆ. ಅಂದರೆ ಹೆಚ್ಚೆಚ್ಚು ಆಯಂಟಿಬಯಾಟಿಕ್‌ಗಳ ಸೇವನೆಯಿಂದ ನಿರೋಧಕ ಶಕ್ತಿಯು ಹೆಚ್ಚೆಚ್ಚು ದುರ್ಬಲಗೊಳ್ಳುತ್ತದೆ ಮತ್ತು ಅವುಗಳನ್ನು ಹೆಚ್ಚೆಚ್ಚು ಸೇವಿಸುವ ಅಗತ್ಯವುಂಟಾಗುತ್ತದೆ.
ಅನಾರೋಗ್ಯದ ಕಾರಣವನ್ನು ನಿವಾರಿಸುವುದಿಲ್ಲ
ಆಯಂಟಿಬಯಾಟಿಕ್‌ಗಳ ಸೇವನೆಯು ಬ್ಯಾಕ್ಟೀರಿಯಾ ಸೋಂಕುಗಳನ್ನು ಗುಣಪಡಿಸುತ್ತದೆಯಾದರೂ,ಅನಾರೋಗ್ಯದ ಮೂಲ ಕಾರಣ ವನ್ನು ನಿವಾರಿಸುವುದಿಲ್ಲ. ಖನಿಜಗಳು ಮತ್ತು ವಿಟಾಮಿನ್‌ಗಳ ಕೊರತೆ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ ಮತ್ತು ಇಂತಹ ಸ್ಥಿತಿಯಲ್ಲಿ ಆಯಂಟಿಬಯಾಟಿಕ್‌ಗಳು ಕೆಲಸಕ್ಕೆ ಬರುವುದಿಲ್ಲ.
ಅಲರ್ಜಿಕ್ ಪ್ರತಿಪರಿಣಾಮಗಳು
ಆಯಂಟಿಬಯಾಟಿಕ್‌ಗಳು ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಔಷಧಿಗಳಾಗಿರುವುದರಿಂದ ಅವುಗಳು ಅತ್ಯಂತ ಸುರಕ್ಷಿತ ಎಂದು ಕಂಡರೂ ಅವು ಶರೀರದಲ್ಲಿ ಅಲರ್ಜಿಯನ್ನುಂಟು ಮಾಡುವ ಪ್ರತಿಪರಿಣಾಮಗಳಿಗೆ ಕಾರಣವಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ವ್ಯಕ್ತಿಯೋರ್ವ ಯಾವುದೇ ಆಯಂಟಿಬಯಾಟಿಕ್‌ಗೆ ಅಲರ್ಜಿಯನ್ನು ಹೊಂದಿರಬಹುದು ಮತ್ತು ಅಲರ್ಜಿಕ್ ಪ್ರತಿಪರಿಣಾಮಗಳು ಸೌಮ್ಯದಿಂದ ತೀವ್ರ ಸ್ವರೂಪದ್ದಾಗಿರಬಹುದು.
ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಯಬಲ್ಲವು
ಆಯಂಟಿಬಯಾಟಿಕ್‌ಗಳು ನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯ ನಿರ್ವಹಣೆಗೆ ವ್ಯತ್ಯಯವುಂಟು ಮಾಡಬಲ್ಲವಾದರೂ ಬ್ಯಾಕ್ಟೀರಿ ಯಾ ಸೋಂಕುಗಳುಂಟು ಮಾಡುವ ಗಂಭೀರ ಕಾಯಿಲೆಗಳನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ.
Comments are closed.