ಆರೋಗ್ಯ

ತಲೆನೋವಿಗೆ ಕೆಫೀನ್ ಒಂದು ಅದ್ಭುತವಾದ ಔಷಧಿ, ನಿಜನಾ..?

Pinterest LinkedIn Tumblr

ಸಾಮಾನ್ಯವಾಗಿ ತಲೆನೋವು ಎದುರಾದ ತಕ್ಷಣ ನಮ್ಮಲ್ಲಿ ಹೆಚ್ಚಿನವರು ಔಷಧಿ ತೆಗೆದುಕೊಳ್ಳುವ ಬದಲು ತಕ್ಷಣವೇ ಒಂದು ಲೋಟ ಕಾಫಿ ಕುಡಿಯುತ್ತಾರೆ. ಈ ಮೂಲಕ ತಲೆನೋವು ಉಲ್ಬಣಗೊಳ್ಳದಂತೆ ತಡೆಯಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ನಿಜಕ್ಕೂ ಕಾಫಿ ತಲೆನೋವನ್ನು ಕಡಿಮೆಗೊಳಿಸುತ್ತದೆಯೇ?

ವೈದ್ಯರ ಪ್ರಕಾರ, ತಲೆನೋವು, ವಿಶೇಷವಾಗಿ ಮೈಗ್ರೇನ್ ಪ್ರಾರಂಭವಾದ ತಕ್ಷಣ ಕಾಫಿ ಕುಡಿಯುವುದರಿಂದ ಕಡಿಮೆಯಾಗುತ್ತದೆ ಎಂದು ನಾವು ಭಾವಿಸಿದರೂ ವಾಸ್ತವದಲ್ಲಿ ಇದು ತಲೆನೋವನ್ನು ಇನ್ನಷ್ಟು ಶೀಘ್ರವಾಗಿ ತೀವ್ರಗೊಳಿಸಬಹುದು. ನಿಮ್ಮ ದೇಹ ಕೆಫೀನ್ ಗೆ ಎಷ್ಟು ಸೂಕ್ಷ್ಮಸಂವೇದಿಯಾಗಿದೆ ಎಂಬ ಅಂಶವನ್ನು ಆಧರಿಸಿ ಕಾಫಿ ತಲೆನೋವನ್ನು ಕಡಿಮೆಗೊಳಿಸುತ್ತದೋ ಅಥವಾ ಉಲ್ಬಣಗೊಳಿಸುತ್ತದೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಮೊದಲಾಗಿ, ತಲೆನೋವಿಗೆ ಮೂಲ ಕಾರಣ ಮೆದುಳಿನಲ್ಲಿರುವ ಕೆಲವು ನರಗಳು ಊದಿಕೊಳ್ಳುತ್ತವೆ. ಕಾಫಿಯಲ್ಲಿರುವ ಕೆಫೀನ್ ರಕ್ತದ ಮೂಲಕ ಈ ನರಗಳಿಗೆ ತಲುಪಿದಾಗ ಊದಿಕೊಂಡಿದ್ದ ನರಗಳನ್ನು ಪುನಃ ಸಂಕುಚಿತಗೊಳಿಸಲು ಹಾಗೂ ಇದೇ ಸಮಯದಲ್ಲಿ ನೋವಿಗೊಳಗಾಗಿದ್ದ ಸ್ನಾಯುಗಳನ್ನು ಸಡಿಲಿಸಲು ನೆರವಾಗುತ್ತದೆ.

ಹಾಗಾಗಿ ತಲೆನೋವಿಗೆ ಕೆಫೀನ್ ಒಂದು ಅದ್ಭುತವಾದ ಔಷಧಿ ಎಂದು ಪರಿಗಣಿಸಬಹುದು. ಆದರೆ ಕೆಫೀನ್ ಪ್ರಮಾಣ ದೇಹ ತಾಳಿಕೊಳ್ಳುವ ಸಂವೇದನೆಯ ಮಿತಿ ಮೀರಿದರೆ ನೋವಿಗೊಳಗಾಗಿದ್ದ ಸ್ನಾಯುಗಳು ಇನ್ನಷ್ಟು ಸಂಕುಚಿತಗೊಂಡು ನೋವನ್ನು ಉಲ್ಬಣಿಸಬಹುದು. ಹಾಗಾದರೆ, ತಲೆನೋವು ಬಂದಾಗ ಕಾಫಿ ಕುಡಿಯುವ ನಿರ್ಧಾರದ ಬಗ್ಗೆ ಮರು ಯೋಚಿಸುತ್ತಿದ್ದೀರಾ?

ಕೆಫೀನ್ ಪ್ರತಿ ವ್ಯಕ್ತಿಯಲ್ಲಿಯೂ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಮೊದಲಾಗಿ ನೆನಪಿನಲ್ಲಿಟುಕೊಳ್ಳಬೇಕು ಹಾಗೂ ತಲೆನೋವು ಮತ್ತು ಮೈಗ್ರೇನ್ ಎದುರಾದಾಗ ಪ್ರತಿಯೊಬ್ಬರಿಗೂ ಕೆಫೀನ್ ಸೂಕ್ತ ಔಷಧಿಯಾಗಲಾರದು.

ಕೆಲವರಿಗೆ ಕಾಫಿ ಕುಡಿದ ಬಳಿಕ ನಿದ್ದೆ ಹಾರಿ ಹೋದರೆ ಕೆಲವರಿಗೆ ಇಲ್ಲದ ನಿದ್ದೆ ಆವರಿಸುತ್ತದೆ. ಕೆಲವರಿಗೆ ಉದ್ವೇಗ ಹೆಚ್ಚಿದರೆ ಕೆಲವರಿಗೆ ಹೆಚ್ಚಿನ ಪ್ರಭಾವವನ್ನೇ ಬೀರುವುದಿಲ್ಲ. ಹಾಗಾಗಿ ಮಾನಸಿಕ ಒತ್ತಡದಿಂದ ಎದುರಾದ ತಲೆನೋವು ಅಥವಾ ಮೈಗ್ರೇನ್ ಎದುರಾದರೆ ಕಾಫಿ ಕುಡಿಯುವುದು ಸೂಕ್ತ ಪರಿಹಾರರವಾಗಲಾರದು.

ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಒಂದರಿಂದ ಎರಡು ಕಪ್ ಕಾಫಿ ಸೇವನೆ ಆರೋಗ್ಯಕ್ಕೆ ಪೂರಕ. ಆದರೆ ಇದಕ್ಕೂ ಹೆಚ್ಚಿನ ಪ್ರಮಾಣದಿಂದ ಅಷ್ಟೊಂದು ಪ್ರಯೋಜನವಿಲ್ಲ. ಬದಲಿಗೆ, ಹೆಚ್ಚಿನ ಕಾಫಿ ಹೆಚ್ಚು ನಿರ್ಜಲೀಕರಣ ಹಾಗೂ ಉದ್ವೇಗವನ್ನು ಹೆಚ್ಚಿಸಿ ಈಗಾಗಲೇ ಮೈಗ್ರೇನ್ ನಿಂದ ಎದುರಾಗಿದ್ದ ನೋವು ಮತ್ತು ಬಳಲಿಕೆಯನ್ನು ಹೆಚ್ಚಿಸಬಹುದು.

ಅಲ್ಲದೇ, ಒಂದು ವೇಳೆ ನಿಮಗೆ ಮೈಗ್ರೇನ್ ತಲೆನೋವಿನ ತೊಂದರೆ ಇದ್ದು ತಕ್ಷಣಕ್ಕೆ ಔಷಧಿ ಲಭ್ಯವಿಲ್ಲದಿದ್ದಲ್ಲಿ, ಯಾವುದೇ ಕಾರಣಕ್ಕೆ ಕೆಫೀನ್ ಭರಿತ ಪೇಯಗಳ ಮೊರೆ ಹೋಗದಿರಿ, ಇವು ಕಾಫಿಗಿಂತಲೂ ಹೆಚ್ಚಿನ ಹಾನಿಯುಂಟುಮಾಡುತ್ತವೆ.

Comments are closed.