ಆರೋಗ್ಯ

ಕಾಂಟಾಕ್ಟ್ ಲೆನ್ಸ್‌ಗಳು ಅಂದಕ್ಕೆ ಓಕೆ, ಆರೋಗ್ಯಕೆ ನಾಟ್ ಓಕೆ, ಯಾಕೆ?..ತಿಳಿಯಿರಿ.

Pinterest LinkedIn Tumblr

ಸಾಂಪ್ರದಾಯಿಕ ಕನ್ನಡಕಗಳಿಗೆ ಹೋಲಿಸಿದರೆ ಹೆಚ್ಚಿನ ಜನರು ಹಲವಾರು ಅನುಕೂಲಗಳನ್ನು ನೀಡುವ ಕಾಂಟಾಕ್ಟ್ ಲೆನ್ಸ್ ಅಥವಾ ಸ್ಪರ್ಶ ಮಸೂರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉತ್ತಮ ನೋಟಕ್ಕಾಗಿ ಅವು ನಿಮ್ಮ ಕಣ್ಣುಗಳನ್ನು ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ಹೊಂದಿಸಿಕೊಳ್ಳುತ್ತವೆ. ಅವು ನೇರವಾಗಿ ಕಣ್ಣುಗಳಲ್ಲಿ ಅಳವಡಿಸಲ್ಪಡುವುದರಿಂದ ಪಾರ್ಶ್ವ ನೋಟಕ್ಕೆ ವ್ಯತ್ಯಯವುಂಟಾಗುವುದಿಲ್ಲ. ಅವು ಒಡೆಯುವ ಭಯವೂ ಇಲ್ಲ, ಹೀಗೆ ಅನೇಕ ಅನುಕೂಲಗಳನ್ನು ಕಾಂಟಾಕ್ಟ್ ಲೆನ್ಸ್‌ಗಳು ಹೊಂದಿವೆ. ಆದರೆ ಅವು ತಮ್ಮದೇ ಆದ ಅಡ್ಡಪರಿಣಾಮಗಳನ್ನೂ ಹೊಂದಿವೆ. ಆ ಕುರಿತು ಮಾಹಿತಿಗಳಿಲ್ಲಿವೆ……

ಕಣ್ಣುಗಳಲ್ಲಿ ಶುಷ್ಕತೆ
ಕಾಂಟಾಕ್ಟ್ ಲೆನ್ಸ್‌ಗಳನ್ನು ಧರಿಸುವ ಹೆಚ್ಚಿನವರು ಶುಷ್ಕ ಕಣ್ಣುಗಳ ಸಮಸ್ಯೆಯನ್ನೆದುರಿಸುತ್ತಿರುತ್ತಾರೆ. ಅವುಗಳನ್ನು ಧರಿಸುವುದರಿಂದ ಕಣ್ಣೀರಿನ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಕಾರ್ನಿಯಾ ಅಥವಾ ಕಣ್ಣಾಲಿಗಳ ಮುಂದಿನ ಪಾರದರ್ಶಕ ಪಟಲಕ್ಕೆ ಆಮ್ಲಜನಕದ ಪೂರೈಕೆಯನ್ನು ತಗ್ಗಿಸುತ್ತವೆ. ಇದು ತುರಿಕೆ ಅಥವಾ ಕುಟುಕುವಂತಹ ನೋವು,ಕಣ್ಣುಗುಡ್ಡೆ ಅಥವಾ ಕಾರ್ನಿಯಾ ಮತ್ತು ಅದರ ಸುತ್ತಲಿನ ಅಂಗಾಂಶಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ.

ಕಾರ್ನಿಯಾದ ಸವೆತ
ಕಾಂಟಾಕ್ಟ್ ಲೆನ್ಸ್‌ಗಳನ್ನು ಸೂಕ್ತವಾಗಿ ಅಳವಡಿಸಿರದಿದ್ದರೆ ಅಥವಾ ಕಣ್ಣುಗಳು ತೀರ ಒಣಗಿದ್ದರೆ ಅವು ಕಾರ್ನಿಯಾವನ್ನು ಉಜ್ಜುತ್ತವೆ. ಇದು ಕಾರ್ನಿಯಾ ಸವೆತಕ್ಕೆ ಕಾರಣವಾಗುತ್ತದೆ. ಅಲ್ಲದೆ ಕಾಂಟಾಕ್ಟ್ ಲೆನ್ಸ್‌ಗಳನ್ನು ಧರಿಸಿಕೊಂಡೇ ಮಲಗುವುದು ಕಾರ್ನಿಯಾ ಸವೆತದ ಅಪಾಯವನ್ನು ಹೆಚ್ಚಿಸುತ್ತದೆ. ಈ ಮಸೂರಗಳಲ್ಲಿ ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಂಡಾಗ ಅವು ಕಾರ್ನಿಯಾವನ್ನು ಉಜ್ಜುತ್ತವೆ ಮತ್ತು ಕಣ್ಣು ಸೋಂಕುಗಳಿಗೆ ಕಾರಣವಾಗುತ್ತದೆ.

ಕಣ್ಣುಗಳಿಗೆ ಆಮ್ಲಜನಕದ ಹರಿವಿಗೆ ಅಡ್ಡಿ
ಕಾರ್ನಿಯಾ ಅಂಚುಗಳನ್ನು ಹೊಂದಿರುತ್ತದೆ ಮತ್ತು ಅದರಲ್ಲಿ ರಕ್ತನಾಳಗಳು ಇರುವುದಿಲ್ಲ. ಸಾಕಷ್ಟು ಆಮ್ಲಜನಕವಿಲ್ಲದಿದ್ದರೆ ಕಾರ್ನಿಯಾದ ಚಯಾಪಚಯವು ಒತ್ತಡಕ್ಕೊಳಗಾಗುತ್ತದೆ ಮತ್ತು ಲ್ಯಾಕ್ಟಿಕ್ ಆಯಸಿಡ್ ಸಂಗ್ರಹಗೊಳ್ಳುತ್ತದೆ. ಇದರಿಂದ ಕಾರ್ನಿಯಾದಲ್ಲಿ ಹೆಚ್ಚುವರಿ ನೀರು ಸೇರಿಕೊಂಡು ಆಸ್ಮಾಟಿಕ್ ಲೋಡ್ ಅಥವಾ ಪರಾಸರಣ ಒತ್ತಡವುಂಟಾಗುತ್ತದೆ. ಇದರಿಂದಾಗಿ ಕಾರ್ನಿಯಾ ಬಾತುಕೊಳ್ಳುತ್ತದೆ. ಸ್ಪರ್ಶ ಮಸೂರಗಳನ್ನು ಧರಿಸಿದಾಗ ಲಭ್ಯ ಆಮ್ಲಜನಕದ ಪ್ರಮಾಣವು ಅವುಗಳ ತಯಾರಿಕೆಗೆ ಬಳಸಲಾದ ವಸ್ತು ಮತ್ತು ದಪ್ಪವನ್ನು ಅವಲಂಬಿಸಿರುತ್ತದೆ.

ಕಾರ್ನಿಯಲ್ ಅಲ್ಸರ್
ಮೃದು ಕಾಂಟಾಕ್ಟ್ ಲೆನ್ಸ್‌ಗಳ ಮೇಲೆ ಬ್ಯಾಕ್ಟೀರಿಯಾಗಳು ಸಂಗ್ರಹಗೊಂಡು ಅವುಗಳ ಸಂಖ್ಯೆ ತ್ವರಿತವಾಗಿ ವೃದ್ಧಿಯಾಗುತ್ತಿದ್ದಾಗ ಕಾರ್ನಿಯಲ್ ಅಲ್ಸರ್ ಅಥವಾ ಕಾರ್ನಿಯಾ ಹುಣ್ಣು ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಲ್ ಬಯೊಫಿಲ್ಮ್ ಅಥವಾ ಜೈವಿಕ ತೆರೆಯನ್ನು ಸೃಷ್ಟಿಸುತ್ತದೆ ಮತ್ತು ಒತ್ತಡಕ್ಕೊಳಗಾದ ಕಾರ್ನಿಯಾ ಸೋಂಕಿಗೆ ಗುರಿಯಾಗುತ್ತದೆ.

ಕೆಂಗಣ್ಣು
ತುಂಬ ಸಮಯದವರೆಗೆ, ವಿಶೇಷವಾಗಿ ರಾತ್ರಿಯಿಡೀ ಕಾಂಟಾಕ್ಟ್ ಲೆನ್ಸ್ ‌ಗಳನ್ನು ಧರಿಸಿದ್ದಾಗ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದು ಸೂಕ್ಮ ಜೀವಿಗಳು ವೃದ್ಧಿಯಾಗಲು ಅನುಕೂಲವಾದ ತೇವಾಂಶ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣವನ್ನು ಸೃಷ್ಟಿಸುತ್ತದೆ. ಆಕಾರ ಕಳೆದುಕೊಂಡ ಲೆನ್ಸ್‌ ಗಳು ಅಥವಾ ಅವುಗಳ ಕಳಪೆ ಅಳವಡಿಕೆ ಇತ್ಯಾದಿಗಳು ಕಣ್ಣು ಕೆಂಪಗಾಗಲು ಇತರ ಕಾರಣಗಳಾಗಿವೆ.

ಬಾಹ್ಯ ಕೆರಟೈಟಿಸ್
ಕಾರ್ನಿಯಾದ ಅತ್ಯಂತ ಹೊರಗಿನ ಪದರವು ಊರಿಯೂತಕ್ಕೊಳಗಾದಾಗ ಅಂತಹ ಸ್ಥಿತಿಯನ್ನು ಬಾಹ್ಯ ಕೆರಟೈಟಿಸ್ ಎಂದು ಕರೆಯಲಾಗುತ್ತದೆ. ಲೆನ್ಸ್‌ಗಳನ್ನು ಸ್ವಚ್ಛವಾಗಿಡಲು ಬಳಸುವ ದ್ರಾವಣಗಳು,ಅಲರ್ಜಿಗಳು,ಸೋಂಕುಗಳು ಇದಕ್ಕೆ ಇತರ ಕಾರಣಗಳಾಗಿವೆ.

ಕಾರ್ನಿಯಲ್ ಮೋಲ್ಡಿಂಗ್
ಕಾಂಟಾಕ್ಟ್ ಲೆನ್ಸ್‌ಗಳ ಧರಿಸುವಿಕೆಯಿಂದ ಕಾರ್ನಿಯಾದ ಆಕಾರದಲ್ಲಿ ಉಂಟಾಗುವ ಬದಲಾವಣೆಗಳನ್ನು ಕಾರ್ನಿಯಲ್ ಮೋಲ್ಡಿಂಗ್ ಎಂದು ಕರೆಯಲಾಗುತ್ತದೆ. ಆಮ್ಲಜನಕದ ಕೊರತೆ ಮತ್ತು ತಗ್ಗಿದ ಒತ್ತಡಗಳಿಂದಾಗಿ ಲೆನ್ಸಗಳ ಅಡಿಯಲ್ಲಿ ಗುಳ್ಳೆಗಳು ರೂಪುಗೊಳ್ಳುವುದು ಇದಕ್ಕೆ ಕಾರಣವಾಗುತ್ತದೆ.

ದ್ರವ ತುಂಬುವಿಕೆ
ಸುದೀರ್ಘ ಸಮಯ ಕಾಂಟಾಕ್ಟ್ ಲೆನ್ಸ್‌ಗಳ ಧರಿಸುವಿಕೆ,ಅವುಗಳ ಅಸಮಂಜಸ ಅಳವಡಿಕೆ, ಭಿನ್ನ ವಿಧಗಳ ಲೆನ್ಸ್‌ಗಳ ಧರಿಸುವಿಕೆ ಮತ್ತು ಲೆನ್ಸ್‌ ಗಳ ಕಳಪೆ ನಿರ್ವಹಣೆಯಿಂದಾಗಿ ಕಾರ್ನಿಯಾದ ಮಧ್ಯಭಾಗಲ್ಲಿಯ ಮಸುಕಾದ,ಬೂದು ಜಾಗಗಳಲ್ಲಿ ದ್ರವವು ತುಂಬಿಕೊಳ್ಳುತ್ತದೆ.

Comments are closed.