ಆರೋಗ್ಯ

ಒಣದ್ರಾಕ್ಷಿ ನೀಡುವ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿಗಳು ಇಲ್ಲಿವೆ.

Pinterest LinkedIn Tumblr

ಒಣದ್ರಾಕ್ಷಿ ಅಥವಾ ಕಿಶ್‌ಮಿಶ್ ಯಾರಿಗೆ ಇಷ್ಟವಿಲ್ಲ? ಅದು ಅತ್ಯಂತ ಸಾಮಾನ್ಯ ನೈಸರ್ಗಿಕ ಸಿಹಿಕಾರಕವಾಗಿದ್ದು, ಯಾವುದೇ ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುವುದಿಲ್ಲ. ಒಣದ್ರಾಕ್ಷಿ ನೀಡುವ ಆರೋಗ್ಯಲಾಭಗಳ ಬಗ್ಗೆ ಮಾಹಿತಿಗಳು ಇಲ್ಲಿವೆ……

* ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
ಒಣದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯಂಟ್ ಅಥವಾ ಸಸ್ಯಜನ್ಯ ಪೋಷಕಾಂಶಗಳ ಆಗರವಾಗಿದ್ದು,ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ದೀರ್ಘಕಾಲಿಕ ಕಾಯಿಲೆಗಳನ್ನು ತಡೆಯುತ್ತವೆ. ಪ್ರತಿನಿತ್ಯ ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ ಮತ್ತು ಇದರಿಂದ ಹೃದಯವೂ ಆರೋಗ್ಯಯುತವಾಗಿರುತ್ತದೆ.

* ಕ್ಯಾನ್ಸರ್‌ನ್ನು ತಡೆಯುತ್ತದೆ
ಒಣದ್ರಾಕ್ಷಿಯು ಟೈಪ್ 2 ಮಧುಮೇಹಿಗಳಿಗೆ ಅತ್ಯಂತ ಆರೋಗ್ಯಕರ ತಿನಿಸು ಎಂದು ಪರಿಗಣಿಸಲಾಗಿದೆ. ಒಣದ್ರಾಕ್ಷಿಗಳ ಸೇವನೆಯಿಂದ ಊಟದ ಬಳಿಕ ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಶೇ.23ರಷ್ಟು ಕಡಿಮೆಯಾಗುತ್ತದೆ ಮತ್ತು ಸಿಸ್ಟೋಲಿಕ್ ಅಥವಾ ಸಂಕೋಚನ ರಕ್ತದೊತ್ತಡವು ಇಳಿಕೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

* ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿಯ ಫ್ರೀ ರ್ಯಾಡಿಕಲ್‌ಗಳು ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುವುದನ್ನು ತಡೆಯುತ್ತವೆ. ಫ್ರೀ ರ್ಯಾಡಿಕಲ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತವೆ,ಹೀಗಾಗಿ ಒಣದ್ರಾಕ್ಷಿಗಳ ಸೇವನೆಯು ಕ್ಯಾನ್ಸರ್‌ನ್ನು ದೂರವಿಡಬಲ್ಲುದು.

* ಜೀರ್ಣಕ್ರಿಯೆಗೆ ನೆರವಾಗುತ್ತದೆ
ಒಣದ್ರಾಕ್ಷಿಯಲ್ಲಿರುವ ನಾರು ಹೊಟ್ಟೆಯಲ್ಲಿ ವಿರೇಚಕ ಪರಿಣಾಮನ್ನು ಬೀರುವ ಮೂಲಕ ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ. ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಕರುಳಿನ ಚಲನೆಗೆ ನೆರವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ.

* ರಕ್ತಹೀನತೆಯನ್ನು ತಡೆಯುತ್ತದೆ
ಒಣದ್ರಾಕ್ಷಿಯು ಕಬ್ಬಿಣದ ಉತ್ತಮ ಮೂಲವಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆಗೆ ಮತ್ತು ಶರೀರದ ವಿವಿಧ ಭಾಗಗಳಿಗೆ ಅಮ್ಲಜನಕವನ್ನು ಸಾಗಿಸಲು ಕಬ್ಬಿಣವು ಅತ್ಯಗತ್ಯವಾಗಿದೆ. ಒಣದ್ರಾಕ್ಷಿಯ ಸೇವನೆಯಿಂದ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ತಡೆಯಬಹುದು.

* ದಂತಕುಳಿಗಳುಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ
ಒಣದ್ರಾಕ್ಷಿಯಲ್ಲಿರುವ ಫೈಟೊಕೆಮಿಕಲ್‌ಗಳಿಗೂ ಬಾಯಿಯ ಆರೋಗ್ಯಕ್ಕೂ ಸಂಬಂಧವಿದೆ. ಈ ಫೈಟೊಕೆಮಿಕಲ್‌ಗಳು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಮೂಲಕ ಹಲ್ಲುಗಳು ಮತ್ತು ವಸಡುಗಳನ್ನು ಆರೋಗ್ಯಯುತವಾಗಿರಿಸುವಲ್ಲಿ ನೆರವಾಗುತ್ತವೆ ಹಾಗೂ ದಂತಕುಳಿಗಳಗುವ ಸಾಧ್ಯತೆಗಳನ್ನು ತಗ್ಗಿಸುತ್ತವೆ.

* ಅಸ್ಥಿರಂಧ್ರತೆಯನ್ನು ತಡೆಯುತ್ತದೆ
ಆರೋಗ್ಯಕರ ಮತ್ತು ಸದೃಢ ಹಲ್ಲುಗಳಿಗೆ ಅಗತ್ಯವಾಗಿರುವ ಕ್ಯಾಲ್ಸಿಯಂ ಒಣದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಋತುಬಂಧವಾಗಿರುವ ಮಹಿಳೆಯರು ಹೆಚ್ಚು ಒಣದ್ರಾಕ್ಷಿಗಳನ್ನು ತಿನ್ನುವ ಮೂಲಕ ಅಸ್ಥಿರಂಧ್ರತೆ ಉಂಟಾಗುವುದನ್ನು ತಡೆಯಬಹುದಾಗಿದೆ.

* ಕಣ್ಣುಗಳನ್ನು ರಕ್ಷಿಸುತ್ತದೆ
ಒಣದ್ರಾಕ್ಷಿಯು ಒಂದು ವಿಧದ ಉತ್ಕರ್ಷಣ ನಿರೋಧಕಗಳಾಗಿರುವ ಪಾಲಿಫಿನೈಲ್‌ಗಳನ್ನು ಒಳಗೊಂಡಿದ್ದು, ಇವು ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಇದರಿಂದ ಮೋತಿಬಿಂದು ಮತ್ತು ವಯೋಸಂಬಂಧಿ ಅಕ್ಷಿಪಟಲ ಅವನತಿಯಂತಹ ಕಣ್ಣಿನ ರೋಗಗಳು ಉಂಟಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

* ಅತಿ ಆಮ್ಲೀಯತೆಯನ್ನು ತಡೆಯುತ್ತದೆ
ಒಣದ್ರಾಕ್ಷಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಕಬ್ಬಿಣ,ತಾಮ್ರ,ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಜಠರದಲ್ಲಿ ಆಮ್ಲೀಯ ಮಟ್ಟಗಳ ಸಮತೋಲನಕ್ಕೆ ನೆರವಾಗುತ್ತವೆ. ಆಮ್ಲೀಯತೆ ಉಂಟಾದಾಗ ಒಣದ್ರಾಕ್ಷಿಯನ್ನು ತಿಂದರೆ ಜಠರದಲ್ಲಿ ಆಮ್ಲೀಯ ಮಟ್ಟ ಕಡಿಮೆಯಾಗುತ್ತದೆ.

* ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ
ಒಣದ್ರಾಕ್ಷಿಯಲ್ಲಿರುವ ಸತು,ಸಿ ವಿಟಾಮಿನ್‌ನಂತಹ ವಿವಿಧ ಉತ್ಕರ್ಷಣ ನಿರೋಧಕಗಳು ಮತ್ತು ಪ್ರಮುಖ ಪೋಷಕಾಂಶಗಳು ಚರ್ಮದ ಜೀವಕೋಶಗಳ ತಾರುಣ್ಯವನ್ನು ಕಾಯ್ದುಕೊಳ್ಳಲು ನೆರವಾಗುವ ಮೂಲಕ ವಯಸ್ಸಾಗುವುದನ್ನು ನಿಧಾನಿಸುತ್ತವೆ. ಅದರಲ್ಲಿರುವ ರಿಸರ್ವಟ್ರಾಲ್ ಎಂಬ ರಾಸಾಯನಿಕವು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಒಣದ್ರಾಕ್ಷಿಯು ಸೂರ್ಯನಿಂದ ಹಾನಿಯ ವಿರುದ್ಧ ಚರ್ಮಕ್ಕೆ ರಕ್ಷಣೆಯನ್ನೂ ನೀಡುತ್ತದೆ.

ಒಣದ್ರಾಕ್ಷಿ ಸೇವನೆಯ ಸಂಭಾವ್ಯ ಅಪಾಯಗಳು: ಹಾಗೆ ನೋಡಿದರೆ ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಹಾನಿಯೇನಿಲ್ಲ. ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಿನ್ನಬಾರದು. ಅಲ್ಲದೆ ಒಣದ್ರಾಕ್ಷಿ ನಾರನ್ನು ಒಳಗೊಂಡಿರುವುದರಿಂದ ಅವುಗಳ ಅತಿಯಾದ ಸೇವನೆಯು ಹೊಟ್ಟೆಯುಬ್ಬರ,ವಾಯು,ಅತಿಸಾರ ಮತ್ತು ಹೊಟ್ಟೆ ಸೆಳೆತಗಳನ್ನುಂಟು ಮಾಡಬಹುದು.

Comments are closed.