ಮೊಬೈಲ್ ಫೋನ್ ಆಗಿರಲಿ ಅಥವಾ ಕಂಪ್ಯೂಟರ್ ಆಗಿರಲಿ,ಸ್ಕ್ರೀನ್‌ನತ್ತ ದಿಟ್ಟಿಸುತ್ತಿರುವುದು ಆಧುನಿಕ ಜಗತ್ತಿನ ಅನಿವಾರ್ಯ ಕರ್ಮವಾಗಿದೆ. ಮಕ್ಕಳಿಂದ ಹಿಡಿದು ಕಚೇರಿಗೆ ತೆರಳುವ ವಯಸ್ಕರವರೆಗೆ ಎಲ್ಲರೂ ಡಿಜಿಟಲ್ ಪರದೆಗಳನ್ನು ಗಂಟೆಗಟ್ಟಲೆ ನೋಡುತ್ತಲೇ ಇರುತ್ತಾರೆ ಮತ್ತು ತಮಗರಿವಿಲ್ಲದೆ ಕಣ್ಣುಗಳ ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿರುತ್ತಾರೆ. ನೀವು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಾಗಿದ್ದರೆ ಮತ್ತು ಹೆಚ್ಚಿನ ಸಮಯವನ್ನು ಕಂಪ್ಯೂಟರ್ ಮುಂದೆ ಕಳೆಯುವವರಾಗಿದ್ದರೆ ಹಾಗೂ ಇತ್ತೀಚಿಗೆ ಕಣ್ಣುಗಳಲ್ಲಿ ಆಯಾಸ,ಮಸುಕಾದ ದೃಷ್ಟಿ,ಸೆಟೆದ ಕುತ್ತಿಗೆ,ತಲೆನೋವು ಅಥವಾ ಭುಜದ ನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡಿದ್ದರೆ ನೀವು ಈ ಲೇಖನವನ್ನು ಅಗತ್ಯ ಓದಬೇಕು.
ಈ ಲಕ್ಷಣಗಳು ನೀವು ಕಂಪ್ಯೂಟರ್ ವಿಝನ್ ಸಿಂಡ್ರೋಮ್(ಸಿವಿಎಸ್)ನಿಂದ ಬಳಲುತ್ತಿರಬಹುದು ಎನ್ನುವುದನ್ನು ಸೂಚಿಸುತ್ತವೆ. ಹೆಸರೇ ಸೂಚಿಸುವಂತೆ ಇದು ನಿರಂತರ ಕಂಪ್ಯೂಟರ್ ಬಳಕೆಯಿಂದ ದೃಷ್ಟಿಯ ಮೇಲೆ ಪರಿಣಾಮವನ್ನುಂಟು ಮಾಡುವ ಕಣ್ಣಿನ ಸಮಸ್ಯೆಗಳ ಒಂದು ಗುಚ್ಛವಾಗಿದೆ. ಇದು ವಯಸ್ಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇಂದಿನ ದಿನಗಳಲ್ಲಿ ಮಕ್ಕಳೂ ಮೊಬೈಲ್ ಮತ್ತು ಕಂಪ್ಯೂಟರ್ ಸ್ಕ್ರೀನ್ ವೀಕ್ಷಣೆಯಲ್ಲಿ ಗಂಟೆಗಟ್ಟಲೆ ಸಮಯವನ್ನು ಕಳೆಯುತ್ತಿದ್ದಾರೆ ಮತ್ತು ಇದು ದೀರ್ಘಾವಧಿಯಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ.
ಕಂಪ್ಯೂಟರ್ ಪರದೆಯನ್ನು ಹೆಚ್ಚು ಹೊತ್ತು ನೋಡುತಿದ್ದರೆ ಅದು ಕಣ್ಣುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಸ್ನಾಯುಗಳು ನಿರಂತರವಾಗಿ ಕೆಲಸ ಮಾಡುವುದಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಣ್ಣಿನ ಮಸೂರದ ನಮ್ಯತೆಯು ಕಡಿಮೆಯಾಗುತ್ತದೆ ಮತ್ತು ಸಿವಿಎಸ್ ಅಪಾಯವನ್ನು ಹೆಚ್ಚಿಸುತ್ತದೆ.
ಕಣ್ಣುಗಳನ್ನು ಮಿಟುಕಿಸದಿರುವುದು ಮತ್ತು ಅಲ್ಪ ಅಂತರದಲ್ಲಿ ದೃಷ್ಟಿಯ ಕೇಂದ್ರೀಕರಣ ಇವು ಸಿವಿಎಸ್‌ಗೆ ಎರಡು ಪ್ರಮುಖ ಕಾರಣಗಳಾಗಿವೆ. ಕಣ್ಣು ಮಿಟಿಕಿಸುವಿಕೆಯು ಕಣ್ಣುಗಳು ಆರ್ದ್ರವಾಗಿರಲು ಮತ್ತು ಶುಷ್ಕಗೊಳ್ಳದಿರಲು ನೈಸರ್ಗಿಕ ವಿಧಾನವಾಗಿದೆ. ನಾವು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಸಾಮಾನ್ಯಕ್ಕಿಂತ ಕಡಿಮೆ ಸಲ ಕಣ್ಣುಗಳನ್ನು ಮಿಟುಕಿಸುತ್ತೇವೆ. ಅಂದರೆ ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ ನಾವು 16-20 ಸಲ ಕಣ್ಣುಗಳನ್ನು ಮಿಟುಕಿಸಿದರೆ ಕಂಪ್ಯೂಟರ್‌ನ ಮುಂದಿದ್ದಾಗ 6-8 ಸಲವಷ್ಟೇ ಈ ಕೆಲಸವನ್ನು ಮಾಡುತ್ತೇವೆ. ಇದು ಕಣ್ಣುಗಳ ಮೇಲೆ ಒತ್ತಡಕ್ಕೆ ಕಾರಣವಾಗುವ ಜೊತೆಗೆ ಅವುಗಳನ್ನು ಒಣಗಿಸುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ನಾವು ಹೆಚ್ಚು ಸಮಯದವರೆಗೆ ಕಡಿಮೆ ಅಂತರಕ್ಕೆ ದೃಷ್ಟಿಯನ್ನು ಕೇಂದ್ರೀಕರಿಸುತ್ತೇವೆ. ಇದು ಕಣ್ಣುಗಳಲ್ಲಿಯ ಮಸೂರದ ಆಕಾರವನ್ನು ಬದಲಿಸಲು ನೆರವಾಗುವ ಸಿಲಿಯರಿ ಮಸಲ್‌ಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ದೃಷ್ಟಿಯನ್ನು ಹತ್ತಿರದ ಮತ್ತು ದೂರದ ವಸ್ತುಗಳ ಮೇಲೆ ಕೇಂದ್ರೀಕರಿಸಲು ನೆರವಾಗುವುದು ಈ ಸ್ನಾಯುಗಳ ಮುಖ್ಯ ಕೆಲಸವಾಗಿದೆ. ಹೀಗಾಗಿ ಸಮೀಪದ ವಸ್ತುವಿನ ಮೇಲೆ ತುಂಬ ಹೊತ್ತು ದೃಷ್ಟಿಯನ್ನು ಕೇಂದ್ರೀಕರಿಸುವುದರಿಂದ ಸ್ನಾಯುಗಳಿಗೆ ಆಯಾಸವಾಗುತ್ತದೆ ಮತ್ತು ಕಣ್ಣುಗಳ ಸಮಸ್ಯೆಗೆ ಕಾರಣವಾಗುತ್ತದೆ.
ಸಾಧ್ಯವಿದ್ದರೆ ನೀವು ಡಿಜಿಟಲ್ ಪರದೆಗಳ ಮುಂದೆ ಕಳೆಯುವ ಸಮಯ ದಿನಕ್ಕೆ ಒಂದು ಗಂಟೆ ಮೀರದಿರಲಿ. ಆದರೆ ನಿಮ್ಮ ಉದ್ಯೋಗದಲ್ಲಿ ದಿನವಿಡೀ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುತ್ತಿರುವುದು ಅನಿವಾರ್ಯವಾಗಿದ್ದರೆ ಕಣ್ಣುಗಳ ಆಯಾಸವನ್ನು ಮತ್ತು ಸಿವಿಎಸ್‌ನ ಅಪಾಯವನ್ನು ತಗ್ಗಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
1) 20-20-20 ನಿಯಮ ಅನುಸರಿಸಿ: ಇದು ಕಣ್ಣುಗಳ ಆಯಾಸವನ್ನು ಕಡಿಮೆ ಮಾಡಲು ಮತ್ತು ಸಿವಿಎಸ್‌ನ್ನು ತಡೆಯಲು ನೇತ್ರವೈದ್ಯರು ಸಾಮಾನ್ಯವಾಗಿ ನೀಡುವ ಸಲಹೆಯಾಗಿದೆ. ಈ ನಿಯಮದಂತೆ ನೀವು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ಗಳ ಕಾಲ ಕಂಪ್ಯೂಟರ್ ಪರದೆಯಿಂದ ವಿಮುಖಗೊಳ್ಳಬೇಕು ಮತ್ತು ನಿಮ್ಮ ಕಂಪ್ಯೂಟರ್‌ನಿಂದ 20 ಅಡಿ ದೂರದಲ್ಲಿರುವ ವಸ್ತುವನ್ನು ವೀಕ್ಷಿಸಬೇಕು.
2) ಆಗಾಗ್ಗೆ ವಿರಾಮ ಪಡೆಯಿರಿ: ಕಂಪ್ಯೂಟರ್ ಪರದೆಯ ಮುಂದೆ ಹೆಚ್ಚಿನ ಸಮಯ ಕಳೆಯುವುದನ್ನು ತಡೆಯುವುದು ಮುಂದಿನ ಕ್ರಮವಾಗಿದೆ. ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ನಿಮ್ಮ ಕಣ್ಣುಗಳನ್ನು 20 ಸೆಕೆಂಡ್ ಕಾಲ ಮುಚ್ಚಿರಿ. ಇದು ಕಣ್ಣುಗಳ ಆಯಾಸವನ್ನು ತಗ್ಗಿಸುತ್ತದೆ.
3) ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಬಳಸಿ: ನೀವು ಕಂಪ್ಯೂಟರ್‌ನ ಮುಂದೆ ಕೆಲಸ ಮಾಡುತ್ತಿರುವಾಗ ಹೊರಗಿನಿಂದ ಉಜ್ವಲ ಬೆಳಕು ಒಳಪ್ರವೇಶಿಸುವುದನ್ನು ತಡೆಯಲು ಕಿಟಕಿಗಳಿಗೆ ಪರದೆಗಳನ್ನು ಬಳಸಿ. ಇದರ ಜೊತೆ ನಿಮ್ಮ ಕಂಪ್ಯೂಟರ್ ಪರದೆಯ ಬೆಳಕನ್ನು ಸೂಕ್ತವಾಗಿ ಹೊಂದಿಸಿಕೊಳ್ಳಿ. ನಿಮ್ಮ ಸುತ್ತಲಿನ ಬೆಳಕು ಮತ್ತು ಕಂಪ್ಯೂಟರ್ ಪರದೆಯ ಬೆಳಕು ಪರಸ್ಪರ ತಾಳೆಯಾಗುವಂತೆ ಮಾಡುವುದು ಅತ್ಯುತ್ತಮ ಕ್ರಮವಾಗಿದೆ.
4) ಹೊಳಪನ್ನು ಕನಿಷ್ಠಗೊಳಿಸಿ: ನೀವು ಕನ್ನಡಕವನ್ನು ಬಳಸುತ್ತೀರಾದರೆ ಆಯಂಟಿ ರಿಫ್ಲೆಕ್ಟಿವ್ ಮಸೂರಗಳು ಉತ್ತಮವಾಗುತ್ತವೆ. ಪರ್ಯಾಯವಾಗಿ ಕಚೇರಿಯ ಗೋಡೆಗಳ ಮತ್ತು ಹೊಳಪಿನ ಮೇಲ್ಮೈಗಳ ಪ್ರತಿಬಿಂಬವನ್ನು ತಡೆಯಲು ನಿಮ್ಮ ಕಂಪ್ಯೂಟರ್ ಪರದೆಗೆ ಆಯಂಟಿ ರಿಫ್ಲೆಕ್ಷನ್ ಕೋಟಿಂಗ್‌ನ್ನು ಅಳವಡಿಸಬಹುದು.
5) ಕಣ್ಣಿಗೆ ನಿರಾಳತೆಯನ್ನು ನೀಡುವ ವ್ಯಾಯಾಮ: ಕಣ್ಣಿನ ಕೆಲವು ವ್ಯಾಯಾಮಗಳು ಕಣ್ಣುಗಳ ಮೇಲಿನ ಒತ್ತಡವನ್ನು ಶಮನಿಸಲು ನೆರವಾಗುತ್ತವೆ ಮತ್ತು ಕಂಪ್ಯೂಟರ್ ಸಂಬಂಧಿತ ದೃಷ್ಟಿ ಸಮಸ್ಯೆಗಳನ್ನು ದೂರವಿಡುತ್ತವೆ. ಪ್ರತಿ ದಿನ ಕಣ್ಣುಗುಡ್ಡೆಗಳಿಗೆ ಸೌಮ್ಯ ಮಸಾಜ್ ಮಾಡುವುದರಿಂದ ಅದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ,ಕಣ್ಣುಗಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಣ್ಣೀರಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ಇದು ಕಣ್ಣುಗಳು ಒಣಗುವುದನ್ನು ತಡೆಯುತ್ತದೆ.
ಪ್ರತಿ ಎರಡು ಗಂಟೆಗಳಿಗೊಮ್ಮೆ ಕಣ್ಣುಗಳನ್ನು ಮುಚ್ಚಿ ಕಣ್ಣುಗುಡ್ಡೆಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮತ್ತು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ, ಕೆಲಸವನ್ನು ಪುನರಾರಂಭಿಸುವ ಮುನ್ನ ಮೂರು ಬಾರಿ ಈ ಕೆಲಸವನ್ನು ಮಾಡಿ.
ನಿಮ್ಮ ಅಂಗೈಗಳನ್ನು ಕೆಲವು ಸೆಕೆಂಡ್‌ಗಳ ಕಾಲ ಪರಸ್ಪರ ತಿಕ್ಕಿ. ಕಣ್ಣುಗಳನ್ನು ಬೆಚ್ಚಗಿನ ಅಗೈಯಿಂದ ಒಂದು ನಿಮಿಷ ಕಾಲ ಮುಚ್ಚಿಕೊಳ್ಳಿ. ಇದು ಕಣ್ಣುಗಳ ಆಯಾಸದಿಂದ ಮುಕ್ತಿ ನೀಡುತ್ತದೆ.
ವಸ್ತುವೊಂದನ್ನು ನಿಮ್ಮ ಕಣ್ಣುಗಳ ಸಮೀಪಕ್ಕೆ ತಂದು ನಿಮಗೆ ಸಾಧ್ಯವಿರುವಷ್ಟು ಹೊತ್ತು ಅದರ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ ನಂತರ ವಸ್ತುವನ್ನು ನಿಮ್ಮ ದೃಷ್ಟಿಯಿಂದ ದೂರಕ್ಕೊಯ್ಯಿರಿ. ಇದನ್ನು 10-15 ಸಲ ಪುನರಾವರ್ತಿಸಿ. ಇದು ಕಣ್ಣುಗಳಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ,ಕಣ್ಣಿನ ಸ್ನಾಯುಗಳು ಹೆಚ್ಚು ನಮ್ಯವಾಗುವಂತೆ ಮಾಡುತ್ತದೆ ಮತ್ತು ದೃಷ್ಟಿ ಕೇಂದ್ರೀಕರಣ ಮತ್ತು ಏಕಾಗ್ರತೆಯನು ಉತ್ತಮಗೊಳಿಸುತ್ತದೆ.
Comments are closed.