ಆರೋಗ್ಯ

ರಕ್ತಸ್ರಾವ, ಚಿಂತೆ, ಪಿತ್ತ, ಕಫ ದೋಷಗಳತಂಹ ವ್ಯಾಧಿಗಳಿಗೆ ಕಾರಣ ಯಾವುದು ಗೊತ್ತೇ?

Pinterest LinkedIn Tumblr

ರೋಗಗಳು ಯಾರಿಗೆ ಬೇಕು ಹೇಳಿ? ಹಾಗೆಂದು ರೋಗದ ಬಗ್ಗೆ ಭಯದಿಂದ ಬದುಕಿದರೆ ರೋಗಗಳು ಓಡಿಹೋಗುವುದಿಲ್ಲ. ಪ್ರತಿ ರೋಗಕ್ಕೂ ಬೇರೆಬೇರೆ ಕಾರಣಗಳನ್ನು ಹೇಳಿದ ಆಯುರ್ವೆದ ಮೂರು ವಿಭಾಗಗಳಲ್ಲಿ ವಾತ, ಪಿತ್ತ, ಕಫ ದೋಷಗಳ ವ್ಯಾಧಿ ಉತ್ಪನ್ನಕ್ಕೆ ಕಾರಣವಾಗುವ ಅಂಶಗಳನ್ನು ವಿವರಿಸುವ ಮೂಲಕ ಸಂಕೀರ್ಣ ವಿಚಾರವನ್ನು ಸರಳಗೊಳಿಸಿದೆ. ಈ ದೋಷಪ್ರಕೋಪದ ಕಾರಣಗಳನ್ನು ತ್ಯಜಿಸಿದರೆ ವ್ಯಾಧಿಗಳ ಉತ್ಪತ್ತಿ ಸುಲಭಸಾಧ್ಯವಿಲ್ಲ.

ಹೊತ್ತಲ್ಲದ ಹೊತ್ತಿನಲ್ಲಿ ಆಹಾರಸೇವನೆ, ಅತಿಯಾದ ಮಲಸ್ರವಣ, ರಕ್ತಸ್ರಾವ, ಚಿಂತೆ, ಶೋಕ, ಕಾಯಿಲೆಯಿಂದಾಗಿ ಉಂಟಾದ ಕೃಶಶರೀರ, ಆಹಾರ ಸೇವಿಸದೆ ಮಾಡುವ ಲಘನ, ಕೋಪ, ದುಃಖದಿಂದ ಮಲಗುವುದು, ಬೇಸತ್ತು ಒಂದೆಡೆ ಕುಳಿತುಕೊಳ್ಳುವುದು, ಭಯ, ಆಹಾರ ಜೀರ್ಣಪ್ರಕ್ರಿಯೆ ಸರಿಯಾಗಿ ನಡೆಯದೆ ಹೊಟ್ಟೆಯಲ್ಲಿ ಹುಟ್ಟುವ ಆಮವೆಂಬ ವಿಷ, ದೇಹದಲ್ಲಿರುವ ಮರ್ಮಸ್ಥಳಗಳಿಗೆ ಪೆಟ್ಟಾಗುವುದರಿಂದ, ಅತಿವೇಗವಾಗಿ ಪಯಣಿಸುವಾಗ ಅಪಘಾತಕ್ಕೀಡಾಗುವುದರಿಂದ, ಶರೀರದಲ್ಲಿರುವ ಧಾತುಗಳು ಕ್ಷೀಣಗೊಳ್ಳುವುದರಿಂದ, ವಾತದೋಷವು ಉಲ್ಬಣಗೊಂಡು ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಆಯುರ್ವೆದದ ಆದಿಗ್ರಂಥ ಚರಕಸಂಹಿತೆಯಲ್ಲಿದೆ.

ನಮಗಿಂತ ಹೆಚ್ಚು ಬಲಶಾಲಿಗಳೊಡನೆ ಮಲ್ಲಯುದ್ಧ ಮಾಡುವ ದುಸ್ಸಾಹಸ, ವ್ಯಾಯಾಮ ಒಳ್ಳೆಯದೆಂದು ಗಂಟೆಗಟ್ಟಲೆ ಅತಿಯಾಗಿ ದೇಹದಂಡನೆ ಮಾಡುವುದು, ಮಿತಿಮೀರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಅತಿಯಾಗಿ ಅಧ್ಯಯನ ಮಾಡುವುದು, ಎತ್ತರದಿಂದ ಧುಮುಕುವುದು, ಯಾವುದೇ ಕೆಲಸಕ್ಕಾದರೂ ಅಗತ್ಯಕ್ಕಿಂತ ಹೆಚ್ಚು ವೇಗವಾಗಿ ದೌಡಾಯಿಸುವುದು, ಖುಷಿ ಸಿಗುತ್ತದೆಂದು ಮಾಂಸಖಂಡಗಳನ್ನು ಅತಿಯಾಗಿ ಒತ್ತುವುದು ಅಥವಾ ಒತ್ತಿಸಿಕೊಳ್ಳುವುದು, ಕ್ರೀಡೆಯಿಂದಲೋ ಅಥವಾ ಏನೂ ಕೆಲಸ ಮಾಡದೆಯೂ ದೇಹಕ್ಕೆ ಗಾಯಗಳಾಗುವುದು, ರಾತ್ರಿ ನಿದ್ರೆಗೆಡುವುದು, ಈಜಾಡುವುದು, ಬೆಟ್ಟ, ಕಡಿದಾದ ಪರ್ವತಗಳನ್ನು ಏರುವುದು, ಭಾರ ಎತ್ತುವುದು, ವಾಹನದಲ್ಲಿ ಅತಿಯಾಗಿ ಸಂಚರಿಸುವುದು, ಕುದುರೆ ಆನೆಗಳ ಮೇಲೇರಿ ಅತಿ ಸವಾರಿಮಾಡುವುದು, ಆರೋಗ್ಯಕ್ಕೆ ಒಳ್ಳೆಯದೆಂಬುದನ್ನು ಮನದಲ್ಲಿಟ್ಟುಕೊಂಡು ಅವಶ್ಯಕ್ಕಿಂತ ಹೆಚ್ಚು ಕಾಲ್ನಡಿಗೆ ಓಡಾಟಗಳು, ಖಾರ, ಕಹಿ, ಒಗರು ರುಚಿಯ ಒಣ, ಶೀತಲ ಪಚನಕ್ಕೆ ಸುಲಭವಾದ ಆಹಾರಗಳನ್ನಷ್ಟೇ ಸೇವಿಸುವುದು.

ಆಹಾರ ಸೇವಿಸದೆ ಉಪವಾಸದಿಂದಿರುವುದು, ಆಗಾಗ ತಿನ್ನುತ್ತಲೇ ಇರುವುದು, ಹೊತ್ತು ತಪ್ಪಿಸಿ ಊಟ ಮಾಡುವುದು, ಮಲಮೂತ್ರಾದಿ 14 ವೇಗಗಳನ್ನು ತಡೆಯುವುದನ್ನು ಸುಶ್ರುತಸಂಹಿತೆಯಲ್ಲಿ ಪಟ್ಟಿ ಮಾಡಲಾಗಿದೆ.

ಬಾಯಾರಿಕೆ ಆಗಿದ್ದಾಗ ಊಟಮಾಡುವುದು, ಚೆನ್ನಾಗಿ ಹಸಿದಿದ್ದಾಗ ಊಟ ಮಾಡದೆ ಬರಿಯ ನೀರು ಕುಡಿದು ಹೊಟ್ಟೆ ತುಂಬಿಸಿ ಕೊಳ್ಳು ವುದು, ಒಣ ಆಹಾರಗಳಾದ ಜಂಕ್​ಫುಡ್ ಸೇವನೆ, ಸಾಹಸಕಾರ್ಯಗಳು, ಏರುಸ್ವರದಲ್ಲಿ ಮಾತನಾಡುವುದು, ಶ್ರಮದಾಯಕ ಕೆಲಸ ಗಳನ್ನು ಅತಿಯಾಗಿ ಮಾಡುವುದು, ಕಾಲಿಗೆ ಚಕ್ರ ಕಟ್ಟಿದವರಂತೆ ಅತ್ತಿಂದಿತ್ತ ಓಡಾಡುವುದು, ಉದರದಲ್ಲಿ ವಾಯು ಉಂಟುಮಾಡುವ ಆಹಾರ, ವಾತ ಹೆಚ್ಚಿಸುವ ಆಹಾರಸೇವನೆಗಳನ್ನು ವಾಗ್ಭಟ ಆಚಾರ್ಯರು ಸೇರಿಸಿರುವುದು ವಿಶೇಷ. ಮಾನಸಿಕ ಕ್ಷೋಭೆ, ಮಳೆಗಾಲ, ಸಾಯಂಕಾಲದ ಹೊತ್ತು, ಭೋಜನ ಪಚನಗೊಂಡ ಕ್ಷಣಗಳೂ ವಾತರೋಗಗಳ ಉತ್ಪತ್ತಿಗೆ ಪೂರಕವಾಗಿವೆ. ಕಾಯಿಲೆ ಬಂದ ಮೇಲೆ ಗೊಣಗುವುದಕ್ಕಿಂತ ಬರದಂತೆ ಎಚ್ಚರ ವಹಿಸಲು ತುಸು ಪ್ರಯತ್ನಶೀಲರಾಗುವುದೇ ಲೇಸು.

Comments are closed.