ಸ್ನಾನ ಮಾಡುವುದರ ಮೂಲ ಉದ್ದೇಶ ದೇಹವನ್ನು ಸ್ವಚ್ಛವಾಗಿಡುವುದು. ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ಹೊರಹಾಕಿ, ದುರ್ವಾಸನೆ ತಗ್ಗಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು. ದೇಹ ಸ್ವಚ್ಛವಾಗುವುದು ಸರಿ, ಅದರೊಂದಿಗೆ ಸ್ನಾನದಿಂದ ಇನ್ನಷ್ಟು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ.
ಸ್ನಾನ ಆರೋಗ್ಯಕ್ಕೆ ಸೋಪಾನ
ಪ್ರಾಚೀನ ಕಾಲದಿಂದಲೂ ಸ್ನಾನ ಎಂಬುದು ನಮ್ಮ ದಿನಚರಿಯ ಪ್ರಮುಖ ಅಂಗವಾಗಿದೆ. ವಿವಿಧ ನಾಗರಿಕತೆಗಳಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಮನೋರಂಜನೆಯ ಉದ್ದೇಶಕ್ಕಾಗಿಯೂ ಸ್ನಾನ ಬಳಕೆಯಾಗುತ್ತಿತ್ತು. ವೈಭವೋಪೇತ ಸ್ನಾನಗೃಹಗಳನ್ನು ಕಟ್ಟಿಸಿ ತೊಟ್ಟಿಗಳಲ್ಲಿ ಒಟ್ಟಾಗಿ ಬಿಸಿನೀರಿನಲ್ಲಿ ಮುಳುಗಿ ಕುಳಿತು ವ್ಯವಹಾರ, ಗಾಸಿಪ್, ಕುಡಿತ ಹೀಗೆ ಎಲ್ಲವನ್ನೂ ನಡೆಸುವುದು ಗ್ರೀಕ್ ಮತ್ತು ರೋಮನ್‌ರಲ್ಲಿ ಸಾಮಾನ್ಯವಾಗಿತ್ತು.
ಕಾಲ ಬದಲಾದಂತೆ ಸ್ನಾನಗೃಹ ಮತ್ತು ಸ್ನಾನದ ವಿಧಾನಗಳಲ್ಲೂ ಹೊಸ ಹೊಸ ಆವಿಷ್ಕಾರಗಳಾಗಿವೆ. ರಾತ್ರಿ ನಿದ್ದೆಯಿಂದ ಎದ್ದೊಡನೆ ಜಡತ್ವ ಕಳೆದು ಹೊಸ ಹುರುಪು ತುಂಬುವ ಬೆಳಗಿನ ಸ್ನಾನ, ದಿನದ ಕೆಲಸ ಮುಗಿಸಿ ಸುಸ್ತಾಗಿ ಮಲಗುವ ಮುನ್ನ ಆಯಾಸ ಕಳೆವ ರಾತ್ರಿ ಸ್ನಾನ, ಬಿಸಿಲ ಬೇಗೆ ತಡೆಯಲಾರದೆ ಸಂಜೆ ಪುಟ್ಟದಾದ ತಣ್ಣೀರ ಸ್ನಾನ, ಚುಮುಚುಮು ಚಳಿಗೆ ಹಿತವಾದ ಬಿಸಿನೀರಿನ ಸ್ನಾನ ಹೀಗೆ ಸ್ನಾನ ಅವರವರ ಅಗತ್ಯ – ಅಭಿರುಚಿಗೆ ತಕ್ಕಂತೆ!
ಸ್ನಾನದಿಂದ ದೈಹಿಕ ಮತ್ತು ಮಾನಸಿಕ ಲಾಭಗಳು:
* ಸುರಕ್ಷಿತ ಭಾವ
ಉಗುರು ಬೆಚ್ಚಗಿನ ನೀರು ತುಂಬಿದ ಸ್ನಾನದ ತೊಟ್ಟಿಯಲ್ಲಿ ಅಡ್ಡಲಾಗಿ ಮಲಗಿದಾಗ ಅದು ತಾಯಿಯ ಗರ್ಭದೊಳಗಿನ ವಾತಾವರಣದಂತಿರುತ್ತದೆ. ನಮಗರಿವಿಲ್ಲದೇ ಮನಸ್ಸಿಗೆ ಹಿತವೆನಿಸಿ ಸುರಕ್ಷಿತ ಭಾವ ಮೂಡುತ್ತದೆ.
* ಮಾನಸಿಕ ಒತ್ತಡ ಕಡಿಮೆ
ಯಾವುದೇ ರೀತಿ ಅಡ್ಡಿ ಆತಂಕಗಳಿಲ್ಲದೆ ಸಂಪೂರ್ಣವಾಗಿ ನಮಗಾಗೇ ಇರುವ ಖಾಸಗಿ ಕ್ಷಣವಿದು. ಆಗುತ್ತಿರುವುದರ ನಿಯಂತ್ರಣ ನಮ್ಮ ಕೈಯಲ್ಲೇ ಇರುವುದರಿಂದ ನೆಮ್ಮದಿಯಾಗುತ್ತದೆ. ಹಾಗೆಯೇ ಬಿಸಿನೀರಿನಿಂದ ರಕ್ತಸಂಚಲನೆ ಹೆಚ್ಚಿ ನರವ್ಯೂಹ ಶಾಂತವಾಗುತ್ತದೆ. ಇವೆಲ್ಲದರ ಒಟ್ಟು ಪರಿಣಾಮವಾಗಿ ಒತ್ತಡದಲ್ಲಿ ಇಳಿಕೆ.
* ಸ್ವಚ್ಛ, ತೇವಮುಕ್ತ ಚರ್ಮ
ಬೆಚ್ಚಗಿನ ನೀರು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆಗ ನಾವು ಬೆವರುತ್ತೇವೆ. ಬೆವರಿದಾಗ ದೇಹದ ಒಳಗಿನ ವಿಷಯುಕ್ತ ಪದಾರ್ಥಗಳು – ಕಲ್ಮಶಗಳು ದೇಹದ ಅತಿ ದೊಡ್ಡ ಅಂಗವಾದ ಚರ್ಮದ ಮೂಲಕ ಹೊರಹೋಗುತ್ತವೆ. ಇದರೊಂದಿಗೆ ಬೆಚ್ಚಗಿನ ನೀರು ಚರ್ಮವನ್ನು ಹೆಚ್ಚು ಹೊತ್ತು ತೇವವಾಗಿಟ್ಟು ಒಣಗುವುದನ್ನು ತಡೆಯುತ್ತದೆ. ಹೀಗಾಗಿ ಸ್ನಾನದಿಂದ ಚರ್ಮ ಸ್ವಚ್ಛ ಮತ್ತು ಸುಂದರವಾಗುತ್ತದೆ.
* ಮಾಂಸಖಂಡಗಳ ನೋವು ಕಡಿಮೆ
ದಿನವಿಡೀ ಕೆಲಸ ಮಾಡಿ, ಗಂಟೆಗಟ್ಟಲೇ ನಿಂತು, ನಡೆದಾಡಿ, ಮೈ-ಕೈ ದಣಿಯುವುದು- ನೋವಾಗುವುದು ಸಹಜ. ಬಿಸಿನೀರ ಸ್ನಾನ ಬಿಸಿಲೇಪದ ರೀತಿ ಕೆಲಸ ಮಾಡುತ್ತದೆ. ದಣಿದ ಮಾಂಸಖಂಡಗಳ ಉಷ್ಣತೆ ಹೆಚ್ಚಿಸಿ ನೋವಿನ ಸಂವೇದಕಗಳನ್ನು ತಡೆಯುತ್ತದೆ. ಹೀಗಾಗಿ ನೋವು ಕಡಿಮೆಯಾಗುತ್ತದೆ.
* ನಿದ್ದೆಗೆ ಸಹಕಾರಿ
ಸ್ನಾನದಿಂದ ಏರಿದ ದೇಹದ ಉಷ್ಣತೆ ಅದರ ನಂತರ ನಿಧಾನವಾಗಿ ಕಡಿಮೆಯಾಗಲು ಶುರುವಾಗುತ್ತದೆ. ಉಷ್ಣತೆಯಲ್ಲಿ ಇಳಿಕೆ ದೇಹಕ್ಕೆ ಮೆಲಟೋನಿನ್ ಎಂಬ ನಿದ್ರಾ ಪ್ರಚೋದಕ ಹಾರ್ಮೋನಿನ ಉತ್ಪಾದನೆಗೆ ಸಂಕೇತ. ಆದ್ದರಿಂದಲೇ ಸ್ನಾನದ ನಂತರ ನಿದ್ದೆ ಬರುವುದು ಸಹಜ.
* ಶೀತದ ವಿರುದ್ಧ ಹೋರಾಟ
ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ಉಂಟಾದ ಆವಿ, ಕಟ್ಟಿಕೊಂಡ ಮೂಗನ್ನು ಸಡಿಲಗೊಳಿಸುತ್ತದೆ. ಶುಷ್ಕವಾಗಿ ನವೆಯುಂಟುಮಾಡುವ ಮೂಗಿನ ಒಳಪದರಗಳು ಆವಿಯಿಂದಾಗಿ ತೇವವಾಗಿ ಉಸಿರಾಟ ಸರಾಗವಾಗುತ್ತದೆ. ಸ್ನಾನದಿಂದ ಶೀತ-ನೆಗಡಿ ಬರದಂತೆ ಪ್ರತಿಬಂಧಿಸುವುದು ಸಾಧ್ಯವಿಲ್ಲವಾದರೂ ತೀವ್ರತೆಯ ಲಕ್ಷಣಗಳನ್ನು ಖಂಡಿತ ಕಡಿಮೆ ಮಾಡುತ್ತದೆ.
* ಎಣ್ಣೆ ಸ್ನಾನ :
ಕೇವಲ ಹಬ್ಬ ಹರಿದಿನಗಳಲ್ಲಿ ಎಣ್ಣೆ ಸ್ನಾನ ಮಾತ್ರ ಮಾಡಿದರೆ ಸಲ್ಲದು, ವಾರದಲ್ಲಿ ಮೂರು ದಿನ ಎಣ್ಣೆ ಸ್ನಾನದಿಂದ ಆರೋಗ್ಯದಲ್ಲಿ ಉಲ್ಲಾಸ ಹಾಗೂ ಚರ್ಮದಲ್ಲಿ ಒಳ್ಳೆಯ ಹೊಳಪು ಮೂಡುವುದು.ಶುಷ್ಕ ಚರ್ಮದವರಿಗೆ ಇದು ಉತ್ತಮ ಸಹಕಾರಿ.
ಬಿಸಿನೀರಿನಲ್ಲಿ ಸ್ನಾನವೇನೋ ಸರಿ. ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿದರೆ ಹೇಗೆ ಎಂಬ ಪ್ರಶ್ನೆಗೂ ಉತ್ತರವಿದೆ. ಅಧ್ಯಯನಗಳ ಪ್ರಕಾರ ತಣ್ಣಗಿನ ನೀರಿನ ಸ್ನಾನ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು. ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಣ್ಣಗಿನ ನೀರು ಮೈಮೇಲೆ ಬಿದ್ದೊಡನೆ ಉಸಿರಾಟದ ವೇಗ ಹೆಚ್ಚಾಗಿ ದೇಹಕ್ಕೆ ಹೆಚ್ಚು ಆಮ್ಲಜನಕ ಸಿಗುತ್ತದೆ. ಹೃದಯದ ಬಡಿತವೂ ತೀವ್ರವಾಗುತ್ತದೆ. ಆದ್ದರಿಂದ ಹೆಚ್ಚು ಶಕ್ತಿ ದೊರೆಯುತ್ತದೆ. ಕ್ರೀಡಾಪಟುಗಳು ಕಠಿಣ ಅಭ್ಯಾಸದ ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಮೈ-ಕೈ ನೋವು ಕಡಿಮೆಯಾಗುತ್ತದೆ.
ಸ್ನಾನದ ಸಮಯದಲ್ಲಿ ವಹಿಸಬೇಕಾದ ಎಚ್ಚರಿಕೆಗಳು…
* ಅತಿ ಬಿಸಿ / ಅತಿ ತಣ್ಣಗಿನ ನೀರು ಒಳ್ಳೆಯದಲ್ಲ.
* ಸ್ನಾನದ ಸಮಯ ಹದಿನೈದರಿಂದ ಇಪ್ಪತ್ತು ನಿಮಿಷ.
* ಹೃದಯ ಸಂಬಂಧಿ ಸಮಸ್ಯೆ ಇರುವವರು ಮತ್ತು ಗರ್ಭಿಣಿಯರಿಗೆ ಬಿಸಿ ನೀರಿನ ಸ್ನಾನ ಸಲ್ಲದು.
* ಸ್ನಾನದ ಸಮಯದಲ್ಲಿ ಸಾಕಷ್ಟು ಬೆವರುವುದರಿಂದ ಮೊದಲು ಹಾಗೂ ನಂತರ ಸಾಕಷ್ಟು ದ್ರವಾಹಾರ ಸೇವನೆ ಅಗತ್ಯ. ಹೀಗೆ ಸ್ನಾನ, ಉತ್ತಮ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸೋಪಾನ.
Comments are closed.