ಶರೀರದಾದ್ಯಂತ ಮಾಂಸಖಂಡಗಳು ನೋಯುತ್ತಿರುವ ಸ್ಥಿತಿಯನ್ನು ‘ಫೈಬ್ರೊಮ್ಯಾಲ್ಗಿಯಾ’ ಎಂದು ಕರೆಯಲಾಗುತ್ತದೆ. ವ್ಯಾಪಕ ನೋವಿನೊಂದಿಗೆ ನಿದ್ರಾ ವ್ಯತ್ಯಯ,ದೈಹಿಕ ಬಳಲಿಕೆ ಮತ್ತು ಜ್ಞಾಪಕ ಶಕ್ತಿ ಸಮಸ್ಯೆ ಇವುಗಳೂ ಈ ರೋಗದೊಂದಿಗೆ ಗುರುತಿಸಿಕೊಂಡಿವೆ. ಸಾಮಾನ್ಯವಾಗಿ 40 ರಿಂದ 60 ವರ್ಷ ಪ್ರಾಯದ ವ್ಯಕ್ತಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿಗೆ ಮಕ್ಕಳು ಮತ್ತು ಹದಿಹರೆಯದವರೂ ಈ ರೋಗದಿಂದ ಬಳಲುತ್ತಿದ್ದು,ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.
ಫೈಬ್ರೊಮ್ಯಾಲ್ಗಿಯಾದ ಕಾರಣಗಳು:
ಫೈಬ್ರೊಮ್ಯಾಲ್ಗಿಯಾಕ್ಕೆ ನಿಖರವಾದ ಕಾರಣವು ಇನ್ನೂ ವೈದ್ಯಲೋಕಕ್ಕೆ ಗೊತ್ತಾಗಿಲ್ಲ. ಆದರೆ ಕೆಲವು ಅಂಶಗಳು ಒಟ್ಟಾಗಿ ಸೇರಿಕೊಂಡು ಫೈಬ್ರೊಮ್ಯಾಲ್ಗಿಯಾಕ್ಕೆ ಕಾರಣವಾಗುತ್ತವೆ ಎನ್ನುವುದನ್ನು ಕೆಲವು ಅಧ್ಯಯನ ವರದಿಗಳು ತಿಳಿಸಿವೆ.
ವಂಶವಾಹಿ: ಕೆಲವು ವಂಶವಾಹಿ ರೂಪಾಂತರಗಳು ಫೈಬ್ರೊಮ್ಯಾಲ್ಗಿಯಾದ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಆದರೆ ಅಂತಹ ನಿರ್ದಿಷ್ಟ ವಂಶವಾಹಿಗಳನ್ನು ಗುರುತಿಸಲು ಈವರೆಗೆ ಸಾಧ್ಯವಾಗಿಲ್ಲ. ವ್ಯಕ್ತಿಯ ಕುಟುಂಬದ ಇತಿಹಾಸದಲ್ಲಿ ಯಾರಾದರೂ ಫೈಬ್ರೊಮ್ಯಾಲ್ಗಿಯಾಕ್ಕೆ ಗುರಿಯಾಗಿದ್ದರೆ ಈ ರೋಗದಿಂದ ನರಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವಿಜ್ಞಾನಿಗಳು.
ಸೋಂಕುಗಳು ಮತ್ತು ಕಾಯಿಲೆಗಳು: ಸೋಂಕುಗಳು ಮತ್ತು ಫೈಬ್ರೊಮ್ಯಾಲ್ಗಿಯಾದ ನಡುವೆ ಯಾವುದೇ ನೇರವಾದ ಸಂಬಂಧ ವರದಿಯಾಗಿಲ್ಲವಾದರೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ಎಚ್‌ಸಿವಿ ಮತ್ತು ಎಚ್‌ಐವಿಯಂತಹ ಕೆಲವು ಸೋಂಕುಗಳು ಇದಕ್ಕೆ ಕಾರಣವಾಗಬಹುದು. ಲುಪಸ್ ಮತ್ತು ರ್ಯುಮಾಟಾಯ್ಡೆ ಸಂಧಿವಾತದಂತಹ ಸ್ವರಕ್ಷಿತ ರೋಗಗಳಿಂದ ನರಳುತ್ತಿರುವವರಲ್ಲಿ ಫೈಬ್ರೊಮ್ಯಾಲ್ಗಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ.
ಆತಂಕ/ಒತ್ತಡ: ದೈಹಿಕ ಅಥವಾ ಭಾವನಾತ್ಮಕ ಆತಂಕದಿಂದ ಬಲುತ್ತಿರುವವರಲ್ಲಿ ಫೈಬ್ರೊಮ್ಯಾಲ್ಗಿಯಾ ಕಾಣಿಸಿಕೊಳ್ಳಬಹುದು. ಶರೀರದಲ್ಲಿಯ ಹಾರ್ಮೋನ್‌ಗಳಲ್ಲಿ ಬದಲಾವಣೆಗಳನ್ನುಂಟು ಮಾಡುವ ಒತ್ತಡವೂ ಫೈಬ್ರೊಮ್ಯಾಲ್ಗಿಯಾಕ್ಕೆ ಕಾರಣವಾಗಬಹುದು.
ಫೈಬ್ರೊಮ್ಯಾಲ್ಗಿಯಾ ರೋಗಿಗಳಲ್ಲಿ ವ್ಯಾಪಕ ನೋವನ್ನುಂಟು ಮಾಡುವ ನಿಖರವಾದ ಕಾರಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಳ್ಳಲು ವೈದ್ಯರಿಗೆ ಸಾಧ್ಯವಾಗಿಲ್ಲ. ಈ ರೋಗದಿಂದ ನರಳುತ್ತಿರುವ ವ್ಯಕ್ತಿಗಳಲ್ಲಿ ಮಾಂಸಖಂಡಗಳು ಮತ್ತು ಸ್ನಾಯುಗಳು ವಿವಿಧ ನೋವು ಪ್ರಚೋದಕಗಳಿಂದಾಗಿ ತೀವ್ರವಾಗಿ ಕೆರಳಿರುತ್ತವೆ ಮತ್ತು ಇದು ಮಿದುಳು ನೋವಿನ ಸಂಕೇತಗಳನ್ನು ಸಂಸ್ಕರಿಸುವ ಪ್ರಕ್ರಿಯೆಯ ಮೇಲೆ ಪರಿಣಾಮವನ್ನುಂಟು ಮಾಡುವುದರಿಂದ ನೋವು ತೀವ್ರವಾಗಿರುತ್ತದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ವ್ಯಕ್ತ ಪಡಿಸಿ ದ್ದಾರೆ.
ಫೈಬ್ರೊಮ್ಯಾಲ್ಗಿಯಾದ ಲಕ್ಷಣಗಳು:
ನೋವು,ನಿದ್ರಾ ವ್ಯತ್ಯಯ ಮತ್ತು ಬಳಲಿಕೆ ಇವು ಫೈಬ್ರೊಮ್ಯಾಲ್ಗಿಯಾದ ಮೂರು ಸಾಮಾನ್ಯ ಲಕ್ಷಣಗಳಾಗಿವೆ. ಫೈಬ್ರೊಮ್ಯಾಲ್ಗಿಯಾ ಶರೀರದಾದ್ಯಂತ ನೋವನ್ನುಂಟು ಮಾಡುವುದರಿಂದ ಈ ರೋಗದಿಂದ ಬಳುತ್ತಿರುವವರ ಶರೀರದಲ್ಲಿ ಅಲ್ಲಲ್ಲಿ ಮೃದು ಸ್ಥಾನಗಳಿರುತ್ತವೆ ಮತ್ತು ಇವುಗಳನ್ನು ಸ್ಪರ್ಶಿಸಿದಾಗ ಅಥವಾ ಸಾಮಾನ್ಯ ಒತ್ತಡ(ಸುಮಾರು ನಾಲ್ಕು ಕೆಜಿಗಳಷ್ಟು) ಬಿದ್ದಾಗ ತೀವ್ರ ನೋವಾಗುತ್ತದೆ. ಭುಜಗಳನ್ನು ತೋಳಿನೊಂದಿಗೆ ಸಂಪರ್ಕಿಸುವ ಮೂಳೆಗಳು,ಪ್ರಷ್ಠ,ದವಡೆ,ಬೆನ್ನಿನ ಮೇಲ್ಭಾಗ ಮತ್ತು ಕೆಳಭಾಗ,ತೋಳಿನ ಮೇಲ್ಭಾಗ,ಕಾಲುಗಳ ಮೇಲ್ಭಾಗ, ಎದೆ,ಕುತ್ತಿಗೆ,ಹೊಟ್ಟೆ,ಕೆಳತೋಳು ಮತ್ತು ಕೆಳಕಾಲುಗಳು ಇಂತಹ ಮೃದು ಸ್ಥಾನಗಳಾಗಿವೆ.
ಮಾಂಸಖಂಡಗಳು ಮತ್ತು ಮೃದು ಅಂಗಾಂಶಗಳಲ್ಲಿ ದೀರ್ಘಕಾಲಿಕ,ವ್ಯಾಪಕ ಮತ್ತು ನಿರಂತರ ನೋವು ಫೈಬ್ರೊಮ್ಯಾಲ್ಗಿಯಾದ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ಆದರೆ ಈ ಮಾಂಸಖಂಡಗಳಲ್ಲಿ ಗೋಚರವಾಗುವಂತಹ ಉರಿಯೂತ ಅಥವಾ ಅಸಹಜತೆ ಇರುವುದಿಲ್ಲ. ರೋಗಿಗಳಲ್ಲಿ ಹಿಂಡಿದಂತಹ ನೋವು,ಮಾಂಸಖಂಡಗಳ ಸೆಟೆತ ಮತ್ತು ಉರಿಯುತ್ತಿರುವ ಅನುಭವದೊಂದಿಗೆ ಕೈಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮುಗುಡುವಿಕೆಯೂ ಕಾಣಿಸಿಕೊಳ್ಳಬಹುದು. ಒತ್ತಡ,ನಿದ್ರೆಯ ಕೊರತೆ,ಉದ್ವೇಗ ಮತ್ತು ಚಳಿ ನೋವನ್ನು ಇನ್ನಷ್ಟು ತೀವ್ರಗೊಳಿಸಬಹುದು.
ನಿರಂತರ ದಣಿವು,ನಿದ್ರೆಗೆ ತೊಂದರೆ,ರಾತ್ರಿಯ ನಿದ್ರೆಯ ಬಳಿಕವೂ ಆಯಾಸದ ಅನುಭವ,ಆಗಾಗ್ಗೆ ತಲೆನೋವು,ಜ್ಞಾಪಕ ಶಕ್ತಿ ಸಮಸ್ಯೆ,ಫ್ಲೂದಂತಹ ಲಕ್ಷಣಗಳು,ಆತಂಕ ಮತ್ತು ಖಿನ್ನತೆ ಇವೂ ಫೈಬ್ರೊಮ್ಯಾಲ್ಗಿಯಾದ ಲಕ್ಷಣಗಳಲ್ಲಿ ಸೇರಿವೆ.
ಫೈಬ್ರೊಮ್ಯಾಲ್ಗಿಯಾ ರೋಗನಿಶ್ಚಯ:
ಫೈಬ್ರೊಮ್ಯಾಲ್ಗಿಯಾವನ್ನು ಪತ್ತೆ ಹಚ್ಚುವ ಯಾವುದೇ ಲ್ಯಾಬೊರೇಟರಿ ಪರೀಕ್ಷೆಗಳಿಲ್ಲ. ಆದರೆ ಸಂಧಿವಾತದಂತಹ ದೀರ್ಘಕಾಲಿಕ ರೋಗ ಅಥವಾ ಹಾರ್ಮೋನ್‌ಗಳ ವ್ಯತ್ಯಯವಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವೈದ್ಯರು ಕೆಲವು ರಕ್ತಪರೀಕ್ಷೆಗಳನ್ನು ಸೂಚಿಸಬಹುದು.
ಯಾವುದೇ ನೋವು,ನಿದ್ರಿಸಲು ಕಷ್ಟ ಮತ್ತು ಅತಿಯಾದ ದಣಿವು ಇತ್ಯಾದಿ ಸಮಸ್ಯೆಗಳಿಂದ ಬಲುತ್ತಿರುವವರು ಶೀಘ್ರವೇ ವ್ಯೆದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಬೇಗನೇ ರೋಗ ನಿರ್ಧಾರವಾದರೆ ಅದರ ಲಕ್ಷಣಗಳ ಚಿಕಿತ್ಸೆಗೆ ನೆರವಾಗುತ್ತದೆ. ಫೈಬ್ರೊಮ್ಯಾಲ್ಗಿಯಾ ರೋಗವಿದ್ದಾಗ ನೋಯುತ್ತಿರುವ ಅಂಗಾಂಶಗಳು ಉರಿಯೂತದಿಂದ ಕೂಡಿರುವುದಿಲ್ಲ ಮತ್ತು ಇದೇ ಕಾರಣದಿಂದ ರೋಗಿಗಳಲ್ಲಿ ಅಂಗಾಂಶಗಳಿಗೆ ಹಾನಿ ಅಥವಾ ವಿರೂಪತೆಯುಂಟಾಗುವುದಿಲ್ಲ.
ಫೈಬ್ರೊಮ್ಯಾಲ್ಗಿಯಾ ಶರೀರದ ಯಾವುದೇ ಅಂಗಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ ಮತ್ತು ಮನುಷ್ಯನ ಆಯುಷ್ಯಕ್ಕೂ ಕುಂದುಂಟು ಮಾಡುವುದಿಲ್ಲ, ಹೀಗಾಗಿ ಇದೊಂದು ಮಾರಣಾಂತಿಕ ರೋಗವಲ್ಲ. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ,ಆದರೆ ನೋವಿನ ತೀವ್ರತೆಯನ್ನು ತಗ್ಗಿಸಲು ಮತ್ತು ಜೀವನ ಮಟ್ಟವನ್ನು ಉತ್ತಮಗೊಳಿಸಲು ಚಿಕಿತ್ಸೆಯನ್ನು ನೀಡಲಾಗುತ್ತದೆ.
Comments are closed.