ನಮಗೆ ತಲೆನೋವು ಕಾಡುತ್ತಿದ್ದಾಗ ಕೆಲಸದ ಕಡೆಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ ಅಥವಾ ನಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಸಿಗೆಯಲ್ಲಿ ಬಿದ್ದುಕೊಂಡರೆ ಸಾಕು ಅನ್ನಿಸುತ್ತದೆ. ಕೆಲವು ಬಾರಿ ಮನೆಯಲ್ಲಿನ ಮಾಲಿನ್ಯಕಾರಕಗಳು, ಒತ್ತಡ ಅಥವಾ ನಿದ್ರೆಯ ಕೊರತೆಯೂ ತಲೆನೋವಿಗೆ ಕಾರಣವಾಗುತ್ತವೆ. ಈ ಕಾರಣಗಳನ್ನು ನಿವಾರಿಸಬಹುದು. ಆದರೆ ತಲೆನೋವು ಸುದೀರ್ಘವಾಗಿದ್ದರೆ ಅಥವಾ ತೀವ್ರವಾಗಿದ್ದರೆ ಅದು ಚಿಂತಿಸಬೇಕಾದ ವಿಷಯ. ತಲೆನೋವು ಮೈಗ್ರೇನ್ ನಿಂದ ಹಿಡಿದು ಮಿದುಳಿನ ಟ್ಯೂಮರ್‌ವರೆಗೆ ಯಾವುದಾದರೂ ಅನಾರೋಗ್ಯದ ಸಂಕೇತವಾಗಿರಬಹುದು. ಹೀಗಿದ್ದಾಗ ವೈದ್ಯರನ್ನು ಕೂಡಲೇ ಸಂಪರ್ಕಿಸುವುದು ಅಗತ್ಯವಾಗುತ್ತದೆ.
ಹವಾಮಾನ
ತಾಪಮಾನದಲ್ಲಿ ಬದಲಾವಣೆ ವ್ಯಕ್ತಿಯನ್ನು ತಲೆನೋವಿಗೆ ಗುರಿಯಾಗಿಸಬಹುದು. ವಾತಾವರಣದ ಒತ್ತಡದಲ್ಲಿಯ ಬದಲಾವಣೆಗಳು ಅಥವಾ ಉಷ್ಣ ಮಾರುತಗಳಿಗೆ ಒಡ್ಡಿಕೊಳ್ಳುವುದೂ ತಲೆನೋವನ್ನು ತರಬಹುದು. ಹವಾಮಾನವನ್ನು ನಮಗೆ ಬೇಕಾದಂತೆ ಬದಲಿಸಲು ಸಾಧ್ಯವಿಲ್ಲವಾದರೂ ತಂಪು ಕನ್ನಡಕಗಳು, ಸ್ಕಾರ್ಫ್ ಮತ್ತು ಟೊಪ್ಪಿಗೆಯನ್ನು ಧರಿಸುವ ಮೂಲಕ ನಮ್ಮನ್ನು ನಾವು ಸುಡುಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು.
ಕೇಶ ಪರಿಕರಗಳು
ಕೇಶಶೈಲಿಯ ಉತ್ಪನ್ನಗಳು ಮತ್ತು ಬಿಗಿಯಾದ ಕೇಶಶೈಲಿಗಳು ತಲೆಗೂದಲು ಉದುರುವುದಕ್ಕೆ ಕಾರಣವಾಗುತ್ತವೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಅದಕ್ಕಾಗಿ ನಮ್ಮ ತಲೆಯೂ ದಂಡ ತೆರುವಂತಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಹೌದು, ಮಹಿಳೆಯರಲ್ಲಿ ಬಿಗಿಯಾದ ಜಡೆಯು ನೆತ್ತಿಯ ಅಂಗಾಂಶಗಳ ಮೇಲೆ ಒತ್ತಡವನ್ನು ಹೇರುವ ಮೂಲಕ ತಲೆನೋವಿಗೆ ಕಾರಣವಾಗಬಲ್ಲದು. ಹೆಡ್ ಬ್ಯಾಂಡ್ ಗಳು ಅಥವಾ ಬಿಗಿಯಾದ ಹ್ಯಾಟ್ ಗಳನ್ನೂ ಧರಿಸುವುದರಿಂದಲೂ ತಲೆನೋವು ಬರುತ್ತದೆ.
ಮಾಲಿನ್ಯ
ಮನೆಯ ಹೊರಗಿನ ಅಥವಾ ಒಳಗಿನ ವಾಯುಮಾಲಿನ್ಯ ತಲೆನೋವನ್ನುಂಟು ಮಾಡುತ್ತದೆ. ಧೂಳು, ಅಡುಗೆ ಮಾಡುವಾಗಿನ ಹೊಗೆಯಿಂದ ಹಿಡಿದು ಹಾಸಿಗೆಯವರೆಗೆ ಒಳಾಂಗಣ ಮಾಲಿನ್ಯಕ್ಕೆ ಕೊಡುಗೆ ಸಲ್ಲಿಸುವ ಹಲವಾರು ಅಂಶಗಳಿವೆ. ಈ ಮಾಲಿನ್ಯಗಳನ್ನು ನಾವು ಉಸಿರಾಡಿಸಿದಾಗ ಉಸಿರಾಟದ ಮತ್ತು ನರಶಾಸ್ತ್ರೀಯ ಸಮಸ್ಯೆಗಳನ್ನುಂಟು ಮಾಡುತ್ತವೆ. ಅತಿಯಾದ ಕಾರ್ಬನ್ ಮಾನೊಕ್ಸೈಡ್, ಪಾರ್ಟಿಕ್ಯುಲೇಟ್ ಮ್ಯಾಟರ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ತಲೆನೋವನ್ನುಂಟು ಮಾಡುತ್ತವೆ.
ಊಟ ತಪ್ಪಿಸುವುದು
ಖಾಲಿ ಹೊಟ್ಟೆಯು ತಲೆನೋವಿಗೆ ಕಾರಣವಾಗಬಲ್ಲದು. ಆದರೆ ಊಟವನ್ನು ತಪ್ಪಿಸುವುದೂ ತಲೆನೋವಿನ ಅಪಾಯವನ್ನುಂಟು ಮಾಡುತ್ತದೆ. ತುಂಬ ಸಮಯ ಹಸಿದುಕೊಂಡಿದ್ದರೆ ರಕ್ತದಲ್ಲಿಯ ಗ್ಲುಕೋಸ್ ಮಟ್ಟವು ಕುಸಿಯುತ್ತದೆ ಮತ್ತು ಇದು ತಲೆನೋವಿಗೆ ಕಾರಣವಾಗುತ್ತದೆ. ಹೀಗಾಗಿ ಊಟವನ್ನು, ವಿಶೇಷವಾಗಿ ದಿನದ ಮೊದಲ ಆಹಾರವಾದ ಬ್ರೇಕ್ ಫಾಸ್ಟ್ ನ್ನು ತಪ್ಪಿಸಬೇಡಿ. ಅಲ್ಲದೆ ಸಕ್ಕರೆ ಅತಿಯಾಗಿರುವ ಖಾದ್ಯಗಳನ್ನು ಸೇವಿಸುವುದರಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವು ದಿಢೀರ್ ಆಗಿ ಏರಿಕೆಯಾಗುತ್ತದೆ ಮತ್ತು ಬಳಿಕ ಇನ್ನಷ್ಟು ಕುಸಿಯುತ್ತದೆ, ಇದು ಸಮಸ್ಯೆಗಳನ್ನು ತೀವ್ರಗೊಳಿಸುತ್ತದೆ.
ಅಸಮರ್ಪಕ ಭಂಗಿ
ಹೆಚ್ಚಿನ ಅಥವಾ ಕಡಿಮೆ ಎತ್ತರದಲ್ಲಿರುವ ಕಂಪ್ಯೂಟರ್ ಪರದೆಯ ಎದುರು ಹೆಚ್ಚಿನ ಸಮಯ ಕಳೆಯುತ್ತೀರಾ?, ಮೊಬೈಲ್‌ನಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುವಾಗ ಖುರ್ಚಿಯಲ್ಲಿ ಕೆಳಬೆನ್ನಿಗೆ ಯಾವುದೇ ಆಧಾರವಿಲ್ಲದೆ ಬಗ್ಗಿ ಕುಳಿತುಕೊಳ್ಳುತ್ತೀರಾ?, ಇದಕ್ಕೆ ಉತ್ತರ ಹೌದು ಎಂದಾದರೆ ನಿಮ್ಮನ್ನು ಆಗಾಗ್ಗೆ ಕಾಡುವ ತಲೆನೋವಿಗೆ ನಿಮ್ಮ ಅಸಮರ್ಪಕ ಕುಳಿತುಕೊಳ್ಳುವ ಭಂಗಿಯನ್ನು ದೂರಬೇಕಾಗುತ್ತದೆ. ಬಗ್ಗಿ ಕುಳಿತುಕೊಳ್ಳುವುದರಿಂದ ಕುತ್ತಿಗೆ ಮತ್ತು ಭುಜಗಳ ಸ್ನಾಯುಗಳ ಮೇಲೆ ಒತ್ತಡವುಂಟಾಗುತ್ತದೆ ಮತ್ತು ಇದು ತಲೆಯ ಸ್ನಾಯುಗಳ ಮೇಲೆ ಪರಿಣಾಮವನ್ನು ಬೀರಿ ತಲೆನೋವಿಗೆ ಕಾರಣವಾಗುತ್ತದೆ. ಹೀಗಾಗಿ ಸೂಕ್ತವಾದ ಭಂಗಿಯನ್ನು ಅನುಸರಿಸಬೇಕಾಗುತ್ತದೆ. ಅಲ್ಲದೆ ದಿನದಲ್ಲಿ ಹೆಚ್ಚಿನ ಸಮಯ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವುದರಿಂದ ಕಣ್ಣುಗಳು ಆಯಾಸಗೊಳ್ಳುತ್ತವೆ ಮತ್ತು ಇದು ತಲೆನೋವಿಗೆ ಕಾರಣವಾಗುತ್ತದೆ.
ಧೂಮ್ರಪಾನ
ನೇರ ಅಥವಾ ಪರೋಕ್ಷ ಧೂಮ್ರಪಾನ ತಲೆನೋವನ್ನು ತರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಂಬಾಕಿನ ಹೊಗೆಯು ನಿಕೋಟಿನ್ ಅನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ಉಸಿರಾಡಿದಾಗ ರಕ್ತನಾಳಗಳು ಸಂಕುಚನಗೊಳ್ಳುತ್ತವೆ. ಮನೆಯೊಳಗೆ ಧೂಮ್ರಪಾನ ಮಾಡಿದಾಗ ಅದು ವಾಯುಮಾಲಿನ್ಯವನ್ನುಂಟು ಮಾಡುವುದಷ್ಟೇ ಅಲ್ಲ,ಮಕ್ಕಳು,ಹಿರಿಯರು ಮತು ಗರ್ಭಿಣಿಯರು ಸೇರಿದಂತೆ ಕುಟುಂಬದ ಪ್ರತಿಯೊಬ್ಬರ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಮಿದುಳಿಗೆ ರಕ್ತಪೂರೈಕೆ ಕಡಿಮೆಯಾಗುವುದರಿಂದ ತೀವ್ರ ನೋವು ತಲೆಯ ಒಂದು ಪಾರ್ಶ್ವದಲ್ಲಿ ಕಾಣಿಸಿಕೊಳ್ಳುತ್ತದೆ. ಧೂಮ್ರಪಾನ ತಲೆನೋವು, ಉಸಿರಾಟದ ಸಮಸ್ಯೆಗಳು ಮತ್ತು ಹೃದಯರೋಗಗಳಿಗೆ ಮಾತ್ರವಲ್ಲ, ಕ್ಯಾನ್ಸರ್‌ಗೂ ಆಹ್ವಾನ ನೀಡುತ್ತದೆ.
ನಿರ್ಜಲೀಕರಣ
ಶರೀರದಲ್ಲಿ ನೀರಿನ ಕೊರತೆಯು ಉಂಟುಮಾಡುವ ನಿರ್ಜಲೀಕರಣವು ತಲೆನೋವಿಗೆ ಕಾರಣವಾಗಬಲ್ಲದು. ಅಲ್ಲದೆ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಜೊತೆಗೆ ಕೆರಳುವಿಕೆಯನ್ನೂ ಹೆಚ್ಚಿಸುತ್ತದೆ, ಮೈಗ್ರೇನ್ ಮತ್ತು ಸುದೀರ್ಘ ಮೈಗ್ರೇನ್ ಗೂ ಕಾರಣವಾಗುತ್ತದೆ.
ಅಲರ್ಜಿ
ನೀವು ಅಲರ್ಜಿಯಿಂದ ಬಳಲುತ್ತಿದ್ದರೆ ಅಥವಾ ಮನೆಯೊಳಗಿನ ವಾಯುಮಾಲಿನ್ಯ, ಸುಗಂಧಗಳು ಅಥವಾ ಆಹಾರಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಕೆಮ್ಮು ಮತ್ತು ಸೀನು ಸಾಮಾನ್ಯ ಲಕ್ಷಣಗಳಾಗಿರುತ್ತವೆ. ಆದರೆ ಅಲರ್ಜಿಗಳು ತಲೆನೋವನ್ನೂ ತರುತ್ತವೆ. ಅಲರ್ಜಿ ತಲೆನೋವುಗಳು ಮೂಗಿನ ದ್ವಾರಗಳ ಆರಂಭವಾಗಿರುವ ಸೈನಸ್‌ಗಳ ಊತದಿಂದ ಉಂಟಾಗುತ್ತವೆ. ಪರಿಣಾಮವಾಗಿ ಸೈನಸ್ ಗಳು ಕಟ್ಟಿಕೊಳ್ಳುತ್ತವೆ ಮತ್ತು ಸಮೀಪದ ಸ್ಥಳಗಳಲ್ಲಿ ಒತ್ತಡವನ್ನುಂಟು ಮಾಡುತ್ತವೆ. ಇದು ತಲೆಯ ಮೇಲೂ ಪರಿಣಾಮವನ್ನು ಬೀರಿ ತಲೆನೋವಿಗೆ ಕಾರಣವಾಗುತ್ತದೆ.
Comments are closed.