ಕುಂದಾಪುರ: ಕುಂದಾಪುರ ಪೊಲೀಸ್ ಉಪ ವಿಭಾಗದ ವ್ಯಾಪ್ತಿಗೊಳಪಡುವ 8 ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಎ. 13 ರಿಂದ ಮನೆ ಮನೆಗೆ ನಿತ್ಯ ಬಳಕೆಯ ಅಗತ್ಯ ವಸ್ತು, ತರಕಾರಿ ಮೊದಲಾದವುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಟಾಸ್ಕ್ ಫೋರ್ಸ್ ಹೆಸರಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಉಪ ವಿಭಾಗದ ಎಎಸ್ಪಿ ಹರಿರಾಂ ಶಂಕರ ತಿಳಿಸಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯನ್ನು ಹೊರತು ಪಡಿಸಿ ಕುಂದಾಪುರ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಪ್ರತಿ ವಾರ್ಡ್ ಗಳಿಗೂ ವಸ್ತುಗಳ ಸರಬರಾಜಿಗೆ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ. ಪ್ರಾರಂಭದ 3 ದಿನಗಳಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬರುವವರಿಗೆ ಪೊಲೀಸರು ಮಾಹಿತಿ ನೀಡಿ ಜವಾಬ್ದಾರಿ ಇರುವ ವ್ಯಕ್ತಿಗಳ ದೂರವಾಣಿ ಸಂಖ್ಯೆ ನೀಡುತ್ತಾರೆ. ಬಳಿಕ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಕ್ಕೆ ಮುಂದಾಗಲಿದ್ದಾರೆ. ಉಡುಪಿ ಸಿಇಓ ನೇತೃತ್ವದಲ್ಲಿ ಈ ಕಾರ್ಯಪಡೆ ಸಿದ್ದವಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಅನಗತ್ಯ ತಿರುಗಾಟಕ್ಕೆ ಬ್ರೇಕ್ ಹಾಕುವ ಯೋಚನೆ…
ಹೋಂ ಡೆಲಿವರಿ ಮಾಡುವ ವಸ್ತುಗಳನ್ನು ಸಾಗಿಸುವ ಇಬ್ಬರಿಗೆ ಒಂದು ವಾಹನ ವ್ಯವಸ್ಥೆ ಮಾಡಲಾಗುವುದು. ವೈದ್ಯಕೀಯ ಹಾಗೂ ಅಗತ್ಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಜನರ ಅನಗತ್ಯ ತಿರುಗಾಟವನ್ನು ನಿಯಂತ್ರಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಪ್ರಸ್ತುತ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರ ಸೂಚಿಸಿರುವ ಎಲ್ಲಾ ಆದೇಶಗಳನ್ನು ಪಾಲಿಸಲಾಗುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಗೋಕಳವು, ಸಾಮಾಜಿಕ ಜಾಲತಾಣ ದುರ್ಬಳಕೆ ವಿರುದ್ಧ ಕ್ರಮ..
ಕುಂದಾಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ವಿವಿಧ ಠಾಣೆಯಲ್ಲಿ ಈಗಾಗಲೇ ಗೋ ಕಳ್ಳತನ, ಸಾಮಾಜಿಕ ಜಾಲತಾಣ ದುರ್ಬಳಕೆ, ಲಾಕ್ ಡೌನ್ ಆದೇಶ ಮೀರಿ ಓಡಾಡುವ ಪ್ರಕರಣಗಳು ದಾಖಲಾಗಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಧಾರ್ಮಿಕ ವಿಚಾರದಲ್ಲೂ ಕೂಡ ಸರಕಾರ ಆದೇಶಿಸಿದ ಮಾರ್ಗಸೂಚಿ ಅನುಸರಿಸಲು ಪೊಲೀಸ್ ಇಲಾಖೆ ಕಠಿಬದ್ಧವಾಗಿದೆ ಎಂದು ಎಎಸ್ಪಿ ಹೇಳಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.