ಕುಂದಾಪುರ: ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಮನೆಯಿಂದ ಹೊರ ಬರುವ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಘೋಷಿಸಿದ್ದು, ಇದರಿಂದ ಮಾಸ್ಕ್‌ಗೆ ಮತ್ತಷ್ಟು ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಕೆಲವೆಡೆ ಮಾಸ್ಕ್ ಕೊರತೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಂಡ್ಸೆ ಗ್ರಾ.ಪಂ. ಅಧೀನದ ‘ಮಹಿಳಾ ಸ್ವಾವಲಂಬನಾ’ ಕೇಂದ್ರದ ವನಿತೆಯರು ಬಟ್ಟೆಯ ಮಾಸ್ಕ್ ಅನ್ನು ತಯಾರಿಸುತ್ತಿದ್ದಾರೆ.
ಇಲ್ಲಿನ ‘ಸ್ವಾವಲಂಬನಾ’ ಎನ್ನುವ ಮಹಿಳೆಯರ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರ ಹಾಗೂ ಪರಿಸರ ಸ್ನೇಹಿ ಬ್ಯಾಗ್ ತಯಾರಿಕಾ ಕೇಂದ್ರದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯೇ ಮಾಸ್ಕ್ ತಯಾರಿಸಲು ನಿರ್ದೇಶನ ನೀಡಿದೆ.ಇಲ್ಲಿ ಸದ್ಯ 30 ಮಂದಿ ಸದಸ್ಯರಿದ್ದು, ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದಲ್ಲಿ 5-6 ಮಂದಿ ಮಾತ್ರ ಬಟ್ಟೆಯ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದ್ದು, ಬಾಕಿ ಉಳಿದ ಸದಸ್ಯರು ತಮ್ಮ ಮನೆಯಿಂದಲೇ ತಯಾರಿಸಿಕೊಡುತ್ತಿದ್ದಾರೆ.
ಕೇಂದ್ರದ ಮೇಲ್ವಿಚಾರಕಿ ಮಹಾಲಕ್ಷ್ಮಿ ಅವರು ಹೇಳುವಂತೆ ದಿನವೊಂದಕ್ಕೆ ಒಬ್ಬರು 60-70 ಮಾಸ್ಕ್‌ಗಳನ್ನು ತಯಾರಿಸುತ್ತಾರೆ. ಈಗಾಗಲೇ ಸಾವಿರಗಟ್ಟಲೇ ಮಾಸ್ಕ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಖಾಸಗಿಯಿಂದಲೂ ಬೇಡಿಕೆ ಬರುತ್ತಿದ್ದು, ಒಂದಕ್ಕೆ 15 ರೂ. ದರದಲ್ಲಿ ಕೊಡಲಾಗುತ್ತಿದೆ ಎನ್ನುತ್ತಾರೆ.
ಎಲ್ಲೆಡೆ ಮಾಸ್ಕ್ ಅವಶ್ಯಕತೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಕೊರತೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಗ್ರಾ.ಪಂ. ಸಹಕಾರದೊಂದಿಗೆ ಸ್ವಾವಲಂಬನಾ ಕೇಂದ್ರದ ಸದಸ್ಯರು ಒಮ್ಮೆ ಬಳಸಿ, ಒಗೆದು ಮತ್ತೊಮ್ಮೆ ಬಳಸುವಂತಹ ಬಟ್ಟೆಯ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ ಎನ್ನುವುದಾಗಿ ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.