ಉಡುಪಿ: ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ ಗರ್ಭಿಣಿ ಮಹಿಳೆ , ಕೋವಿಡ್ ನಿಂದ ಗುಣಮುಖರಾಗಿ ಶುಕ್ರವಾರ ತಮ್ಮ ಮನೆಗೆ ತೆರಳಿದರು. ಗರ್ಭಿಣಿ ಮಹಿಳೆಗೆ ಜಿಲ್ಲಾಡಳಿತದ ಮೂಲಕ ಸಾಂಪ್ರದಾಯಿಕವಾಗಿ, ಮಲ್ಲಿಗೆ ಹೂ, ಹಣ್ಣುಗಳು ಮತ್ತು ಸಿಹಿತಿಂಡಿಯನ್ನು ನೀಡುವುದರ ಮೂಲಕ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತು ಎಸ್ಪಿ ವಿಷ್ಣುವರ್ಧನ್ ಮಹಿಳೆಗೆ ಸಿಹಿತಿಂಡಿ ನೀಡಿದರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಮಲ್ಲಿಗೆ ಹೂ ಮತ್ತು ಹಣ್ಣು ನೀಡಿ ಹಾರೈಸಿದರು.
ನಂತರ ಮಾನತಾಡಿದ, ಗರ್ಭಿಣಿ ಮಹಿಳೆ, ಜಿಲ್ಲಾ ತಮಗೆ ಇಲ್ಲಿಗೆ ಬರುವ ಮುಂಚೆ ತುಂಬಾ ಭಯ ಇತ್ತು, ಇಲ್ಲಿಗೆ ಬಂದ ನಂತರ ಇಲ್ಲಿನ ವೈದ್ಯರು ಮತ್ತು ನರ್ಸ್ ಗಳು ನನ್ನಲ್ಲಿದ್ದ ಭಯ ದೂರ ಮಾಡಿ, ತನಗೆ ಧೈರ್ಯ ತುಂಬಿದರು, ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದು, ಇಲ್ಲಿ ಅತ್ಯುತ್ತಮ ರೀತಿಯ ಚಿಕಿತ್ಸೆ ದೊರೆತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದಂತೆ ಅನಿಸಿದೆ, ಪ್ರಸ್ತುತ ನಾನು ಸಂಪೂರ್ಣ ಗುಣಮುಖಳಾಗಿದ್ದು, ದೇವರಿಚ್ಚೆಯಿದ್ದರೆ ಮುಂದೆ ನನ್ನ ಹೆರಿಗೆಗೆ ಸಹ ಉಡುಪಿಗೆ ಆಗಮಿಸುತ್ತೇನೆ ಎಂದರು. ತನಗೆ ಚಿಕಿತ್ಸೆ ನೀಡಿದ ಜಿಲ್ಲಾಡಳಿತ ಮತ್ತು ಕೋವಿಡ್ ಆಸ್ಪತ್ರೆಯ ಎಲ್ಲಾ ವೈದ್ಯರು, ನರ್ಸ್ ಗಳು ಮತ್ತು ಇತರೆ ಎಲ್ಲಾ ಸಿಬ್ಬಂದಿಗೆ ಮಹಿಳೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಡಿಹೆಚ್‌ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರೇಮಾನಂದ್ , ಕೆಎಂಸಿ ಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಡಾ. ಶಶಿ ಕಿರಣ್ ಹಾಗೂ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಮಹಿಳೆಯು ಏಪ್ರಿಲ್ 9 ರಂದು ಉಡುಪಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಏಪ್ರಿಲ್ 21 ರಂದು ಆಕೆಯ ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಏಪ್ರಿಲ್ 23 ರಂದು ಎರಡನೇ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಏಪ್ರಿಲ್ 24 (ಇಂದು ) ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
Comments are closed.