ಹೆಚ್ಚಿನ ಜನರು ಹೃದಯಾಘಾತ ಮತ್ತು ಹೃದಯ ಸ್ತಂಭನ ಒಂದೇ ಎಂದು ಭಾವಿಸಿರುತ್ತಾರೆ. ವಾಸ್ತವದಲ್ಲಿ ಇವೆರಡೂ ತೀರ ವಿಭಿನ್ನ ಹೃದಯ ಸಮಸ್ಯೆಗಳಾಗಿವೆ. ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳದಲ್ಲಿ ತಡೆಯುಂಟಾದರೆ ಸಕಾಲದಲ್ಲಿ ಹೃದಯಕ್ಕೆ ರಕ್ತ ಪೂರೈಕೆಯಾಗದೆ ಕೆಲವು ಪ್ರಮುಖ ಅಂಗಾಂಗಗಳಲ್ಲಿಯ ಅಂಗಾಂಶಗಳು ಸಾಯುತ್ತವೆ ಮತ್ತು ಹೃದಯಾಘಾತ ಉಂಟಾಗುತ್ತದೆ. ಹೃದಯ ಸ್ತಂಭನದಲ್ಲಿ ಶರೀರದಲ್ಲಿಯ ವಿದ್ಯುತ್ ಅಸಮರ್ಪಕ ಕಾರ್ಯ ನಿರ್ವಹಣೆ ಯಿಂದಾಗಿ ಹೃದಯದ ಬಡಿತವು ಅನಿರೀಕ್ಷಿತವಾಗಿ ಮತ್ತು ಏಕಾಏಕಿಯಾಗಿ ನಿಂತುಬಿಡುತ್ತದೆ. ಹೃದಯಾಘಾತ ಮತ್ತು ಹೃದಯ ಸ್ತಂಭನ ಕುರಿತು ನಿಮಗೆ ಗೊತ್ತಿರಬೇಕಾದ ಮಾಹಿತಿಯಿಲ್ಲಿದೆ…
*ಹೃದಯಾಘಾತ ಏಕೆ ಆಗುತ್ತದೆ?
ಪರಿಧಮನಿ ರಕ್ತನಾಳದ ರೋಗವು ಎಲ್ಲ ಹೃದಯಾಘಾತ ಗಳಿಗೆ ಮೂಲ ಕಾರಣವಾಗಿದೆ. ಈ ರೋಗವುಂಟಾದಾಗ ಹೃದಯದ ಸ್ನಾಯುಗಳಿಗೆ ರಕ್ತದ ಮೂಲಕ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ಹೃದಯದ ಪರಿಧಮನಿಗಳು ಕಾಲಕ್ರಮೇಣ ಕೊಲೆಸ್ಟ್ರಾಲ್ ಸಂಗ್ರಹಗೊಂಡು ಸಂಕುಚಿತ ಗೊಳ್ಳುತ್ತವೆ. ಈ ಕೊಲೆಸ್ಟ್ರಾಲ್ ಪದರದ ಮೇಲೆ ನಾರಿನಿಂದ ಕೂಡಿದ ಹೊದಿಕೆಯಿದ್ದು, ರಕ್ತದೊತ್ತಡದ ಬಲವು ಅದರ ಮೇಲ್ಮೈಯಲ್ಲಿ ಸುಲಭವಾಗಿ ರಂಧ್ರವನ್ನುಂಟು ಮಾಡಬ ಲ್ಲುದು. ಈ ರಂಧ್ರದ ಮೂಲಕ ಪ್ಲೇಟ್‌ಲೆಟ್‌ಗಳು ಮತ್ತು ಹೆಪ್ಪುಕಾರಕಗಳು ಅಲ್ಲಿ ಸೇರಿಕೊಂಡು ರಕ್ತವು ತ್ವರಿತವಾಗಿ ಹೆಪ್ಪುಗಟ್ಟಲು ಕಾರಣವಾಗುತ್ತವೆ ಮತ್ತು ರಕ್ತನಾಳವು ಇನ್ನಷ್ಟು ಸಂಕುಚಿತಗೊಳ್ಳುತ್ತದೆ. ಈ ಹೆಪ್ಪಗಟ್ಟುವಿಕೆಯು ಸಾಕಷ್ಟು ದೊಡ್ಡದಾಗಿದ್ದರೆ ಅದು ರಕ್ತನಾಳದಲ್ಲಿ ಸಂಪೂರ್ಣ ತಡೆಯನ್ನು ನಿರ್ಮಿಸುತ್ತದೆ ಮತ್ತು ಹೃದಯದ ಭಾಗಗಳಿಗೆ ರಕ್ತ ಪೂರೈಕೆ ಯನ್ನು ಸ್ಥಗಿತಗೊಳಿಸುತ್ತದೆ. ಇದರಿಂದಾಗಿ ಆ ಭಾಗಗಳು ಸಾಯಲು ಆರಂಭಿಸುತ್ತವೆ. ನಿಮ್ಮ ಹೃದಯದ ಸ್ನಾಯುವಿಗೆ ತೀವ್ರ ಹಾನಿಯುಂಟಾಗಿ ಹೃದಯವು ರಕ್ತವನ್ನು ಪಂಪ್ ಮಾಡುವ ಕಾರ್ಯವು ನಿಂತರೆ ಹೃದಯಾಘಾತ ಸಂಭವಿಸುತ್ತದೆ.
ವೈದ್ಯಕೀಯ ಜಗತ್ತಿನಲ್ಲಿ ಇದನ್ನು ಮಯೊಕಾರ್ಡಿಯಲ್ ಇನ್ಫಾ ರ್ಕ್ಷನ್‌ಎಂದು ಕರೆಯಲಾಗುತ್ತದೆ.
*ಹೃದಯ ಸ್ತಂಭನ ಏಕೆ ಆಗುತ್ತದೆ?
ಅಸಮರ್ಪಕ ವಿದ್ಯುತ್ ಕಾರ್ಯ ನಿರ್ವಹಣೆಯಿಂದಾಗಿ ಹೃದಯವು ಬಡಿದುಕೊಳ್ಳುವುದು ದಿಢೀರಾಗಿ ನಿಂತರೆ ಹೃದಯ ಸ್ತಂಭನವು ಉಂಟಾಗುತ್ತದೆ. ಇದು ಮಿದುಳು ಸೇರಿದಂತೆ ಶರೀರದ ಎಲ್ಲ ಪ್ರಮುಖ ಅಂಗಗಳಿಗೆ ರಕ್ತಪೂರೈಕೆಯನ್ನು ಕಡಿತಗೊಳಿಸುವುದರಿಂದ ಏಕಾಏಕಿ ಪ್ರಜ್ಞೆ ತಪ್ಪುತ್ತದೆ ಮತ್ತು ನಾಡಿಮಿಡಿತವು ಕ್ಷೀಣಗೊಳ್ಳುತ್ತದೆ. ವೆಂಟ್ರಿಕ್ಯುಲರ್ ಫೈಬ್ರಿಲೇಷನ್, ಕಾರ್ಡಿಯಾಕ್ ಮಯೊಪತಿ, ಜನ್ಮಜಾತ ಹೃದಯ ರೋಗಗಳು ಮತ್ತು ಹೃದಯಾಘಾತದಂತಹ ಹೃದಯ ಸಹಜತೆಗಳು ಇದಕ್ಕೆ ಕಾರಣವಾಗಿವೆ. ಹೃದಯ ಸ್ತಂಭನವು ತುರ್ತು ವೈದ್ಯಕೀಯ ಸ್ಥಿತಿಯಾಗಿದ್ದು, ಸಿಪಿಆರ್ ಅಥವಾ ಇಲೆಕ್ಟ್ರಿಕಲ್ ಡಿಫೈಬ್ರಿಲೇಷನ್ ಚಿಕಿತ್ಸೆಯನ್ನು ತಕ್ಷಣ ನೀಡಬೇಕಾಗುತ್ತದೆ.
*ಈ ಚಿಕಿತ್ಸೆ ದೊರೆಯದಿದ್ದರೆ ಹೃದಯ ಸ್ತಂಭನವು ಮಾರಣಾಂತಿಕವಾಗುತ್ತದೆ.
ಹೃದಯಾಘಾತಕ್ಕೂ ಹೃದಯಸ್ತಂಭನಕ್ಕೂ ಸಂಬಂಧವಿ ದೆಯೇ? ಹೃದಯದ ಪ್ರಮುಖ ಭಾಗದಲ್ಲಿಯ ಸ್ನಾಯುವು ಸಾಯಲು ಕಾರಣವಾಗುವ ಸುದೀರ್ಘಾವಧಿಯ ಹೃದಯಾಘಾತವು ದಿಢೀರ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಇದು ಇವೆರಡೂ ಸ್ಥಿತಿಗಳ ನಡುವಿನ ಏಕೈಕ ಸಂಬಂಧವಾಗಿದೆ. ಇದೇ ಕಾರಣದಿಂದ ಹೃದಯ ಸ್ತಂಭನವು ಹೃದಯಾಘಾತದಿಂದ ಬೇರೆಯಾಗಿದ್ದರೂ ಹೃದಯಾಘಾತದ ಅಪಾಯವು ಹೃದಯ ಸ್ತಂಭನದ ಅಪಾಯವನ್ನೂ ಹೆಚ್ಚಿಸುತ್ತದೆ.
*ಇವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ
ಮಧುಮೇಹ, ಧೂಮ್ರಪಾನ, ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್, ಬೊಜ್ಜು, ಜಡತೆಯಿಂದ ಕೂಡಿದ ಜೀವನಶೈಲಿ ಮತ್ತು ಅತಿಯಾದ ಮದ್ಯಪಾನ ಪರಿಧಮನಿ ರೋಗ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅಗತ್ಯವಾಗುತ್ತದೆ.
*ಹೃದಯಾಘಾತ ಅಥವಾ ಹೃದಯ ಸ್ತಂಭನವನ್ನು ನಿಭಾಯಿಸುವುದು ಹೇಗೆ?
ಎದೆಯಲ್ಲಿ ಆರಂಭಗೊಂಡು ಎಡತೋಳು, ಭುಜಗಳು ಮತ್ತು ಕುತ್ತಿಗೆಗೆ ವ್ಯಾಪಿಸುವ ತೀವ್ರವಾದ ನೋವು ಹೃದಯಾಘಾತದ ಪ್ರಾಥಮಿಕ ಲಕ್ಷಣವಾಗಿದೆ. ವಾಕರಿಕೆ, ತಣ್ಣಗೆ ಬೆವರುವಿಕೆ ಮತ್ತು ದಿಢೀರ್ ಭೀತಿಯ ಭಾವನೆ ಇವು ಇತರ ಲಕ್ಷಣಗಳಲ್ಲಿ ಸೇರಿವೆ. ಹೀಗಾಗಿ ಈ ಲಕ್ಷಣಗಳು ನಿಮ್ಮಲ್ಲಿ ಅಥವಾ ನಿಮ್ಮ ಸಮೀಪದ ಲ್ಲಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಂಡರೆ ತಕ್ಷಣ ಆಯಂಬುಲನ್ಸ್ ಕರೆಸಿ ಅಥವಾ ನೆರವಿಗಾಗಿ ಕೂಗಿ.
ಹೃದಯ ಸ್ತಂಭನದ ಸಂದರ್ಭದಲ್ಲಿ ವೈದ್ಯರಿಗೆ ತುರ್ತು ಸಂದೇಶವನ್ನು ರವಾನಿಸಿ ವೈದ್ಯಕೀಯ ನೆರವು ದೊರೆಯುವ ವರೆಗೆ ರೋಗಿಯ ಬಾಯಿಗೆ ಬಾಯಿ ಹಚ್ಚಿ ಉಸಿರನ್ನು ಒಳಗೆ ತಳ್ಳುತ್ತಿರಿ(ಸಿಪಿಆರ್). ಹೃದಯಾಘಾತ ಅಥವಾ ಹೃದಯ ಸ್ತಂಭನದ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿರುತ್ತದೆ ಎನ್ನುವುದು ನೆನಪಿರಲಿ.
Comments are closed.