ಆರೋಗ್ಯ

ಮನೆಯವರಂತೆ ನೋಡಿಕೊಂಡಿದ್ದಾರೆ: ಕೊರೋನಾ ಗೆದ್ದವರಿಂದ ಕುಂದಾಪುರ ಕೋವಿಡ್ ಆಸ್ಪತ್ರೆ ಬಗ್ಗೆ ಮೆಚ್ಚುಗೆ (Video)

Pinterest LinkedIn Tumblr

ಕುಂದಾಪುರ: ‘ನಮ್ಮನ್ನು ಮನೆಯವರಂತೆ ನೋಡಿಕೊಂಡು ಚಿಕಿತ್ಸೆ ಕೊಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ-ಉಪಹಾರ ನೀಡಿ ಹಣ್ಣು ಹಂಪಲು ವ್ಯವಸ್ಥೆ ಮಾಡಿದ್ದಾರೆ. ವೈದ್ಯರು, ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆ ಪಡೆದು ನೆಗೆಟಿವ್ ವರದಿ ಬಂದ ಹಿನ್ನೆಲೆ ಮನೆಗೆ ತೆರಳುವ ವೇಳೆ ಕೊರೋನಾ ಗೆದ್ದ ಇಬ್ಬರು ಅಭಿಪ್ರಾಯ ಹಂಚಿಕೊಂಡರು.

ನಾವು ದೂರದೂರಿನಿಂದ ಬಂದವರು. ಮೊದಲಿಗೆ ಪಾಸಿಟಿವ್ ವರದಿ ಬಂತು. ಇದೀಗಾ ನೆಗೆಟಿವ್ ಬಂದ ಹಿನ್ನೆಲೆ ಮನೆಗೆ ಕಳಿಸುತ್ತಿದ್ದಾರೆ. ಮನೆಯವರಿಗಿಂತಲೂ ಜಾಸ್ಥಿಯಾಗಿಯೇ ನಮ್ಮನ್ನು ನೋಡಿಕೊಂಡರು. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತು ಎಂದು ಒಬ್ಬರು ಹೇಳಿದ್ದಾರೆ. ಎಲ್ಲರೂ ಒಳ್ಳೆ ರೀತಿ ನೋಡಿಕೊಂಡರು. ಕೊರೋನಾದ ಬಗ್ಗೆ ಭಯ ಬೇಡ. ಗಟ್ಟಿತನ ಬೇಕು ಎಂದು ಹಿರಿಯರೊಬ್ಬರು ಅಭಿಪ್ರಾಯ ಹಂಚಿಕೊಂಡರು.

(File Photo)

ಜಿಲ್ಲಾಡಳಿತದ ಉತ್ತಮ ಕಾರ್ಯ…
ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರೆಂಟೈನ್ ಆದವರಲ್ಲಿ ಕೊರೋನಾ ಸೋಂಕುಕಂಡು ಬಂದ ಹಿನ್ನೆಲೆ ಉಡುಪಿ ಡಿಸಿ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅವರಿಂದ ಕೊಡುಗೆಯಾಗಿ ಕೊಡಲ್ಪಟ್ಟ ಶ್ರೀಮತಿ ಲಕ್ಷ್ಮೀ ಸೋಮಬಂಗೇರ ಸ್ಮಾರಕ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದ್ದು ಇದರ ಉಸ್ತುವಾರಿಯನ್ನು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು ಮಾರ್ಗದರ್ಶನದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ ನೇತೃತ್ವದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾರ್ಬಟ್ ರೆಬೆಲ್ಲೊ, ಪಿಜಿಶಿಯನ್ ಡಾ. ನಾಗೇಶ್ ಹಾಗೂ ವೈದ್ಯರು, ಸಿಬ್ಬಂದಿಗಳ ತಂಡ ಉತ್ತಮ ಕಾರ್ಯ ಮಾಡಿತ್ತು.

ಇಂದು ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಸರಕಾರಿ ಕೋವಿಡ್ ಆಸ್ಪತ್ರೆಯಿಂದ ಹದಿನಾಲ್ಕು ಮಂದಿ ಬಿಡುಗಡೆಗೊಳ್ಳುವ ಮೂಲಕ ದಾಖಲೆಯೊಂದು ಸ್ರಷ್ಟಿಯಾಗಿದ್ದು ಉಡುಪಿ ಜಿಲ್ಲಾಡಳಿತ, ಕುಂದಾಪುರ ತಾಲೂಕು ಆಡಳಿತದ ಕಾರ್ಯವೈಖರಿ ಸೇವಾತತ್ಪರತೆ ಜನರ ಪ್ರಶಂಸೆಗೆ ಕಾರಣವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.