ಆರೋಗ್ಯ

ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ, ಮೊಬೈಲ್ ನಂಬರ್ ನೀಡಿದರೆ ಕ್ರಮ : ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC – BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRC – DISTRICT RECEIVE CENTER) ಗೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್ ಗೆ ಒಳಪಡಬೇಕು, ಮಹಾರಾಷ್ಟ್ರದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು, ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ ರೈಲ್ವೆ ನಿಲ್ದಾಣದಲ್ಲಿನ, ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೊಂದಾಯಿಸಬೇಕು. ನೊಂದಾಯಿಸಿದ ಸ್ಥಳಕ್ಕೆ ತೆರಳದೇ ಮಾರ್ಗಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ದ ಕೂಡಲೇ ಎಫ್.ಐ.ಆರ್ ದಾಖಲಿಸಿ , ಕ್ರ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಿದ ಜಿಲ್ಲಾಧಿಕಾರಿಗಳು, ಕ್ವಾರಂಟೈನ್ ಕೇಂದ್ರಗಳಿಗೆ ತಮ್ಮದೇ ವೆಚ್ಚದಲ್ಲಿ ತೆರಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ನೊಂದಣಿಯಾದ ಎಲ್ಲರಿಗೂ ಸೀಲ್ ಹಾಕಿ, ಸಂಬಂದಪಟ್ಟ ತಾಲೂಕಿನ ಗ್ರಾಮಗಳಿಗೆ ಕಳುಹಿಸಬೇಕು, ಗ್ರಾಮಗಳಿಗೆ ಆಗಮಿಸುವ ಹೊರರಾಜ್ಯದ ಜನತೆಗೆ ಗ್ರಾಮದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು , ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ತೆರಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತ್ ಗಳಲ್ಲಿನ ಕ್ವಾರಂಟೈನ್ ಕೇಂಧ್ರಗಳಿಗೆ ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಹೊರರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

Comments are closed.