ಖಾರವಾದ ಮತ್ತು ಮಸಾಲೆಯಿಂದ ಕೂಡಿದ ಆಹಾರವನ್ನು ಇಷ್ಟಪಡುವವರಿಗೆ ಮೆಣಸಿನ ರುಚಿಯು ಮುಖ್ಯವಾಗುತ್ತದೆ. ಕೆಲವರಿಗೆ ಕೆಂಪು ಮೆಣಸು ಇಷ್ಟವಾದರೆ ಇನ್ನು ಕೆಲವರು ಹಸಿರು ಮೆಣಸನ್ನು ಬಯಸುತ್ತಾರೆ. ಎ,ಬಿ6,ಸಿ ವಿಟಾಮಿನ್‌ಗಳು,ಕಬ್ಬಿಣ, ತಾಮ್ರ,ಪೊಟ್ಯಾಷಿಯಂ,ಪ್ರೋಟಿನ್ ಮತ್ತು ಕಾರ್ಬೊಹೈಡ್ರೇಟ್‌ಗಳಂತಹ ಹಲವಾರು ಪೋಷಕಾಂಶಗಳು ಮೆಣಸಿನಲ್ಲಿ ಸಮೃದ್ಧವಾಗಿವೆ. ಇವು ಮಾತ್ರವಲ್ಲ,ಬೀಟಾ ಕ್ಯಾರೊಟಿನ್,ಕ್ರಿಪ್ಟೊಕ್ಷಾಂತಿನ್,ಲುಟೆನ್‌ಕ್ಷಾಂತಿನ್‌ನಂತಹ ಒಳ್ಳೆಯ ರಾಸಾಯನಿಕಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಸಾಮಾನ್ಯವಾಗಿ ಅಡಿಗೆಯ ರುಚಿಯನ್ನು ಹೆಚ್ಚಿಸಲು ಮೆಣಸನ್ನು ಬಳಸಲಾಗುತ್ತದೆಯಾದರೂ ಮೆಣಸನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಬಹುದು ಎಂದು ಇತ್ತೀಚಿನ ಹಲವಾರು ಸಂಶೋಧನೆಗಳು ಹೇಳಿವೆ. ಆದರೆ ಯಾವ ವಿಧದ ಮೆಣಸು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ನಿಮಗೆ ಗೊತ್ತೇ? ಇಲ್ಲಿವೆ ಈ ಕುರಿತು ಮಾಹಿತಿಗಳು……
ಹಸಿರು ಮೆಣಸಿನ ಆರೋಗ್ಯಲಾಭಗಳು
ಸಲಾಡ್,ಚಾಟ್ ಇತ್ಯಾದಿಗಳಲ್ಲಿ ಹಸಿರು ಮೆಣಸಿನ ಬಳಕೆ ಖಾದ್ಯದ ತಾಜಾತನವನ್ನು ಹೆಚ್ಚಿಸುತ್ತದೆ. ಹಸಿರು ಮೆಣಸು ನಾರನ್ನು ಒಳಗೊಂಡಿರುವುದರಿಂದ ಅದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳು ಆರೋಗ್ಯಯುತವಾಗಿರುತ್ತದೆ.
1. ತೂಕ ಇಳಿಕೆ:
ಹಸಿರು ಮೆಣಸಿನಲ್ಲಿ ಕ್ಯಾಲರಿಗಳಿಲ್ಲ,ಹೀಗಾಗಿ ತೂಕ ಇಳಿಕೆಯಲ್ಲಿ ಅದು ತುಂಬ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆಯು ಶರೀರದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೆ ನೆರವಾಗುತ್ತದೆ. ವಿಟಾಮಿನ್ ಎ ಅನ್ನು ಸಮೃದ್ಧವಾಗಿ ಹೊಂದಿರುವ ಹಸಿರು ಮೆಣಸು ಕಣ್ಣುಗಳು ಮತ್ತು ಚರ್ಮದ ಆರೋಗ್ಯಕ್ಕೂ ಲಾಭದಾಯಕವಾಗಿದೆ.
2.ಆರೋಗ್ಯಕರ ಹೃದಯ
ತಾಜಾ ಹಸಿರು ಮೆಣಸಿನಲ್ಲಿರುವ ಬೀಟಾ ಕ್ಯಾರೊಟಿನ್ ಹೃದಯನಾಳೀಯ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಹಸಿರು ಮೆಣಸು ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿದೆ.
3.ಕ್ಯಾನ್ಸರ್‌ನಿಂದ ರಕ್ಷಣೆ
ಸಿ ವಿಟಾಮಿನ್‌ನಂತಹ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಹಸಿರು ಮೆಣಸು ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಉತ್ಕರ್ಷಣ ನಿರೋಧಕಗಳ ಅಸ್ತಿತ್ವದಿಂದಾಗಿ ಶ್ವಾಸಕೋಶ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಮತ್ತು ದೊಡ್ಡಕರುಳಿನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ.
ಕೆಂಪು ಮೆಣಸಿನ ಆರೋಗ್ಯಲಾಭಗಳು
ಕೆಂಪು ಮೆಣಸಿನ ರುಚಿಯನ್ನು ಇಷ್ಟಪಡುವವರಿಗೆ ಅದು ನೀಡುವ ಆರೋಗ್ಯಲಾಭಗಳ ಬಗ್ಗೆಯೂ ಗೊತ್ತಿರಬೇಕು. ಅದು ಆಹಾರದ ಸ್ವಾದ ಮತ್ತು ಬಣ್ಣವನ್ನು ಹೆಚ್ಚಿಸುತ್ತದೆ. ಅಂದ ಹಾಗೆ ಕೆಂಪು ಮತ್ತು ಹಸಿರು ಮೆಣಸುಗಳಲ್ಲಿರುವ ಪೋಷಕಾಂಶಗಳಲ್ಲಿ ಪ್ರಮುಖ ವ್ಯತ್ಯಾಸಗಳೇನೂ ಇಲ್ಲ. ಮೆಣಸು ಒಣಗುತ್ತಿದ್ದಂತೆ ಅದರಲ್ಲಿಯ ನೀರಿನ ಅಂಶವೂ ಕಡಿಮೆಯಾಗುತ್ತದೆ. ಕೆಂಪು ಮೆಣಸು ತನ್ನದೇ ಆದ ಆರೋಗ್ಯಲಾಭಗಳನ್ನು ಹೊಂದಿದೆ.
1.ಕೊಬ್ಬನ್ನು ಕರಗಿಸುತ್ತದೆ
ಕೆಂಪು ಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಕೊಬ್ಬನ್ನು ಕರಗಿಸುವ ಪ್ರಕ್ರಿಯೆಗೆ ವೇಗವನ್ನು ನೀಡುತ್ತದೆ. ಅಲ್ಲದೆ ಕೆಂಪು ಮೆಣಸಿನ ಸೇವನೆಯಿಂದ ಸಂತೋಷದ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ ಮತ್ತು ಇವು ಮನಸ್ಸನ್ನು ಹಗುರಗೊಳಿಸುತ್ತವೆ. ಈ ಮೆಣಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ವಿಟಾಮಿನ್ ಸಿ ಶರೀರವು ಇತರ ವಿಟಾಮಿನ್‌ಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.
2.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಪೊಟ್ಯಾಷಿಯಮ್‌ನಂತಹ ಖನಿಜಗಳನ್ನು ಸಮೃದ್ಧ ಪ್ರಮಾಣದಲ್ಲಿ ಒಳಗೊಂಡಿರುವ ಕೆಂಪು ಮೆಣಸು ರಕ್ತದೊತ್ತಡವನ್ನು ನಿಯಂತ್ರಿಸಲೂ ನೆರವಾಗುತ್ತದೆ. ಇತ್ತೀಚಿನ ಕೆಲವು ಅಧ್ಯಯನಗಳಂತೆ ಕೆಂಪು ಮೆಣಸು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
3.ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕೆಂಪು ಮೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಿ ವಿಟಾಮಿನ್‌ನಂತಹ ಕ್ರಿಯಾಶೀಲ ಮತ್ತು ಆರೋಗ್ಯಕರ ಉತ್ಕರ್ಷಣ ನಿರೋಧಕಗಳು ಶರೀರದ ರೋಗ ನಿರೋಧಕ ಶಕ್ತಿಯನ್ನು ಸದೃಢವಾಗಿರಿಸುತ್ತವೆ ಮತ್ತು ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಅದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಂದಾಗಿ ಶರೀರವು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರುತ್ತದೆ ಮತ್ತು ಇದು ಕೂಡ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಲು ನೆರವಾಗುತ್ತದೆ.
4.ಹೃದಯ ರಕ್ತನಾಳಗಳ ಆರೋಗ್ಯ
ಕೆಂಪು ಮೆಣಸಿನ ಸೇವನೆಯ ಪ್ರಮುಖ ಆರೋಗ್ಯಲಾಭವೆಂದರೆ ಅದು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತದೆ. ಅದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ಇದರಿಂದ ಶರೀರದಲ್ಲಿ ರಕ್ತ ಪರಿಚಲನೆಯು ಸುಗಮವಾಗಿ ನಡೆಯುತ್ತಿರುತ್ತದೆ. ಹೀಗಾಗಿ ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ.
ಕೆಂಪು ಮೆಣಸಾಗಲಿ ಅಥವಾ ಹಸಿರು ಮೆಣಸಾಗಲಿ,ಎರಡೂ ವಿಧಗಳು ತಮ್ಮದೇ ಆದ ಆರೋಗ್ಯ ಲಾಭಗಳನ್ನು ಹೊಂದಿವೆ. ಅವುಗಳನ್ನು ಸೂಕ್ತವಾಗಿ ಸೇವಿಸಬೇಕು ಎಂಬ ಅಂಶದತ್ತ ಗಮನ ನೀಡಿದರೆ ಸಾಕು. ಹಸಿ ಮೆಣಸನ್ನು ಕಚ್ಚಾ ರೂಪದಲ್ಲಿಯೇ ಸೇವಿಸುವುದು ಹೆಚ್ಚು. ಮಾರುಕಟ್ಟೆಯಲ್ಲಿ ದೊರೆಯುವ ಕೆಂಪು ಮೆಣಸಿನ ಹುಡಿಗಳಲ್ಲಿ ಕಲಬೆರಕೆಯಾಗಿರುವ ಸಾಧ್ಯತೆಯಿರುತ್ತದೆ ಮತ್ತು ಇದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ,ಹೀಗಾಗಿ ಕೆಂಪು ಮೆಣಸಿನ ಹುಡಿಯಿಂದ ದೂರವಿರುವುದು ಒಳ್ಳೆಯದು.
Comments are closed.