ಆರೋಗ್ಯ

ರಭಸದಿಂದ ಸೀನುವಾಗ ಹೃದಯ ಬಡಿತ ನಿಲ್ಲುತ್ತದೆ ಎನ್ನುವುದು ನಿಜವೇ?

Pinterest LinkedIn Tumblr

ಸೀನು ನಮ್ಮ ಶರೀರವನ್ನು ಪ್ರವೇಶಿಸುವ ಸೋಂಕುಗಳ ವಿರುದ್ಧ ನೈಸರ್ಗಿಕ ರಕ್ಷಣೆಯಾಗಿದೆ. ಅನಪೇಕ್ಷಿತವಾದ ಯಾವುದೋ ವಸ್ತು ನಮ್ಮ ಮೂಗನ್ನು ಪ್ರವೇಶಿಸಿದೆ ಎನ್ನುವುದು ನಮ್ಮ ಶರೀರಕ್ಕೆ ಅರಿವಾದಾಗ ಸೀನು ಬರತೊಡಗುತ್ತದೆ. ಧೂಳು, ಕೊಳೆ, ಬ್ಯಾಕ್ಟೀರಿಯ, ಪರಾಗ, ಹೊಗೆ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ನಾವು ಸೀನಿದಾಗ ನಮ್ಮ ಶರೀರವನ್ನು ಪ್ರವೇಶಿಸಲು ಯತ್ನಿಸುತ್ತಿರುವ ಬ್ಯಾಕ್ಟೀರಿಯ ಅಥವಾ ಇತರ ಯಾವುದೇ ಹಾನಿಕಾರಕ ಕಣಗಳು ಪ್ರತಿ ಗಂಟೆಗೆ 160 ಕಿ.ಮೀ. ವೇಗದೊಡನೆ ಹೊರಕ್ಕೆ ತಳ್ಳಲ್ಪಡುತ್ತವೆ. ಈ ರೀತಿಯಲ್ಲಿ ಸೀನು ನಮಗೆ ಯಾವುದೇ ಗಂಭೀರ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಸೀನು ಬರುವುದನ್ನು ತಡೆಯಲು ನಾವು ಪ್ರಯತ್ನಿಸಿದರೆ ಅದು ನಮ್ಮನ್ನು ಅಪಾಯಕ್ಕೆ ಗುರಿ ಮಾಡಬಲ್ಲದು.

ಸೀನುವಾಗ ಹೃದಯ ಬಡಿತ ನಿಲ್ಲುತ್ತದೆ ಎನ್ನುವುದು ನಿಜವೇ?
ನಾವು ಸೀನುವಾಗ ವಾಸ್ತವದಲ್ಲಿ ಹೃದಯವು ಸ್ಥಗಿತಗೊಳ್ಳುವುದಿಲ್ಲ. ಧೂಳು ಅಥವಾ ಪರಾಗದಂತಹ ಬಾಹ್ಯವಸ್ತುಗಳನ್ನು ಶ್ವಾಸನಾಳದಿಂದ ಹೊರಕ್ಕೆ ಹಾಕುವಾಗ ನಮ್ಮ ಬಾಯಿಯಲ್ಲಿಯ ಹೆಚ್ಚಿನ ಒತ್ತಡವು ಮಿದುಳು ಮೂಗಿನಲ್ಲಿ ಲೋಳೆಯನ್ನು ಹೆಚ್ಚುವರಿಯಾಗಿ ಉತ್ಪಾದಿಸುವಂತೆ ಸಂಬಂಧಿಸಿದ ನರಗಳಿಗೆ ಸಂಕೇತ ರವಾನಿಸುವಂತೆ ಮಾಡುತ್ತದೆ ಮತ್ತು ಈ ಲೋಳೆಯು ಬಾಹ್ಯವಸ್ತುಗಳು ಶ್ವಾಸಕೋಶಗಳನ್ನು ಪ್ರವೇಶಿಸುವುದನ್ನು ತಡೆಯಲು ನೆರವಾಗುತ್ತದೆ. ಅಲ್ಲದೆ ನಾವು ಸೀನಿದಾಗ ಪ್ಲೆರಲ್ ಕ್ಯಾವಿಟಿ ಅಂದರೆ ಎದೆಯ ಭಿತ್ತಿ ಮತ್ತು ಶ್ವಾಸಕೋಶಗಳ ನಡುವಿನ ತೆಳುವಾದ,ದ್ರವದಿಂದ ಕೂಡಿದ ಕುಹರದಲ್ಲಿನ ಒತ್ತಡವು ಆ ಗಳಿಗೆಯಲ್ಲಿ ಹೆಚ್ಚಾಗುತ್ತದೆ ಮತ್ತು ಹೃದಯಕ್ಕೆ ರಕ್ತ ಪೂರೈಕೆ ಕಡಿಮೆಯಾಗುವಂತೆ ಮಾಡುತ್ತದೆ. ಹೀಗೆ ಆಗುವಾಗ ಹೃದಯದ ವಿದ್ಯುತ್ ಚಟುವಟಿಕೆಗಳು ನಿಲ್ಲುವುದಿಲ್ಲ. ಮೂಲತಃ ನಾವು ಸೀನಿದಾಗ ಹೃದಯ ಬಡಿತದ ಗತಿಯ ಮೇಲೆ ಪರಿಣಾಮವುಂಟಾಗುತ್ತದೆ. ಮುಂದಿನ ಬಾರಿಯ ಹೃದಯ ಬಡಿತ ಕೆಲ ಕ್ಷಣಗಳ ಕಾಲ ವಿಳಂಬಿಸಲ್ಪಡುತ್ತದೆ, ನಮ್ಮ ಹೃದಯವು ಬಡಿದುಕೊಳ್ಳುವುದನ್ನು ನಿಲ್ಲಿಸಿದೆ ಎಂದರ್ಥವಲ್ಲ.

ಸೀನುವುದನ್ನೇಕೆ ನಿಯಂತ್ರಿಸಬಾರದು?
ನಾವು ಸೀನುವಾಗ ಮೂಗಿನ ಹೊಳ್ಳೆಗಳಿಂದ ಪ್ರತಿ ಗಂಟೆಗೆ ಸುಮಾರು 160 ಕಿ.ಮೀ. ವೇಗದಿಂದ ಗಾಳಿಯು ಹೊರತಳ್ಳಲ್ಪಡುತ್ತದೆ. ನಾವು ಸೀನುವುದನ್ನು ತಡೆದಾಗ ಈ ಒತ್ತಡವು ಕಿವಿಗಳಂತಹ ಶರೀರದ ಇನ್ನೊಂದು ಭಾಗದತ್ತ ಧಾವಿಸುತ್ತದೆ ಮತ್ತು ಕಿವಿಯ ತಮಟೆಯನ್ನು ಒಡೆಯುವ ಮೂಲಕ ಶ್ರವಣ ಶಕ್ತಿಯನ್ನು ನಷ್ಟಗೊಳಿಸಬಹುದು. ಅಲ್ಲದೆ ಸೀನುವಾಗ ಶ್ವಾಸನಾಳದಲ್ಲಿಯ ಒತ್ತಡವು ಹೆಚ್ಚುತ್ತದೆ ಮತ್ತು ಸೀನನ್ನು ತಡೆಹಿಡಿದಾಗ ಈ ಒತ್ತಡವು ಬಿಡುಗಡೆಗೊಳ್ಳುವುದಿಲ್ಲ. ಹೊರಕ್ಕೆ ಹೋಗಲು ದಾರಿಯಿಲ್ಲದಾಗ ಈ ಒತ್ತಡವು ನಮ್ಮ ಶರೀರದೊಳಗೇ ಹಂಚಿ ಹೋಗುತ್ತದೆ

ಸೀನುವುದನ್ನು ತಡೆದರೆ ಅದು ನಮ್ಮ ಉಸಿರಾಟ ವ್ಯವಸ್ಥೆಯಲ್ಲಿನ ಒತ್ತಡವು ಸೀನಿದಾಗ ಹೊರಹೊಮ್ಮುವ ಬಲದ 5ರಿಂದ 25 ಪಟ್ಟು ಅಧಿಕವಾಗಿರುತ್ತದೆ. ಹೀಗಾಗಿ ಇಂತಹ ಶಕ್ತಿಯನ್ನು ತಡೆಹಿಡಿದರೆ ಅದು ನಮ್ಮ ಶರೀರದಲ್ಲಿ ಗಂಭೀರ ಹಾನಿಗಳನ್ನು ಮತ್ತು ಸಮಸ್ಯೆಗಳನ್ನುಂಟು ಮಾಡುತ್ತದೆ.

ಸೀನು ತಡೆಹಿಡಿಯುವುದರ ಅಡ್ಡ ಪರಿಣಾಮಗಳು
ನಡುಗಿವಿ ಸೋಂಕು: ಸೀನಿದಾಗ ನಮ್ಮ ಮೂಗಿನಿಂದ ಬ್ಯಾಕ್ಟೀರಿಯಗಳು ಹೊರಗೆ ತಳ್ಳಲ್ಪಡುತ್ತವೆ. ಆದರೆ ಸೀನನ್ನು ತಡೆದಾಗ ಬ್ಯಾಕ್ಟೀರಿಯಯುಕ್ತ ದ್ರವವು ನಮ್ಮ ಕಿವಿಗಳಿಗೆ ನುಗ್ಗುತ್ತದೆ. ಈ ಸೋಂಕುಪೀಡಿತ ದ್ರವ ನಡುಗಿವಿಯನ್ನು ತಲುಪಿದಾಗ ಅದಕ್ಕೂ ಸೋಂಕು ತಗಲುತ್ತದೆ.

ಕಿವಿಯ ತಮಟೆ ಹರಿಯುವ ಸಾಧ್ಯತೆ:ಸೀನು ತಡೆದಾಗ ರಭಸದಿಂದ ಕಿವಿಗಳಿಗೆ ಹರಿಯುವ ವಾಯುವಿನ ಒತ್ತಡದಿಂದಾಗಿ ಕಿವಿಯ ತಮಟೆಯು ಹರಿಯುವ ಸಾಧ್ಯತೆಯಿರುತ್ತದೆ.

ಕಣ್ಣಿನ ರಕ್ತನಾಳಗಳಿಗೆ ಹಾನಿ: ನಾವು ಸೀನುವುದನ್ನು ತಡೆಹಿಡಿದಾಗ ಗಾಳಿಯ ಒತ್ತಡವು ಒಳಗೇ ಉಳಿದುಕೊಳ್ಳುತ್ತದೆ ಮತ್ತು ಇದು ಕಣ್ಣಿನತ್ತಲೂ ನುಗ್ಗುವುದರಿಂದ ಕಣ್ಣುಗಳಲ್ಲಿ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ

ಅನ್ಯೂರಿಸಂ: ಸೀನುವುದನ್ನು ತಡೆದಾಗ ಗಾಳಿಯ ಒತ್ತಡವು ಮಿದುಳಿ ನತ್ತಲೂ ನುಗ್ಗಬಹುದು ಮತ್ತು ಮಿದುಳಿನ ರಕ್ತನಾಳ ಒಡೆಯುವಂತೆ ಮಾಡುತ್ತದೆ. ಇದು ಮಿದುಳಿನ ಸುತ್ತ ತಲೆಬುರುಡೆಯಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಪಕ್ಕೆಲಬುಗಳ ಮುರಿತ:
ಸೀನುವುದನ್ನು ಬಲವಂತದಿಂದ ತಡೆಹಿಡಿದಾಗ ಒತ್ತಡವು ಪಕ್ಕೆಲಬುಗಳ ಮುರಿತಕ್ಕೆ ಕಾರಣವಾಗುತ್ತದೆ. ಹೆಚ್ಚಾಗಿ ವಯಸ್ಸಾದವರಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಗಂಟಲಿಗೆ ಹಾನಿ, ವಪೆಗೆ ಪೆಟ್ಟು ಇತ್ಯಾದಿಗಳು ಸೀನುವಿಕೆಯನ್ನು ತಡೆಹಿಡಿಯುವುದರ ಇತರ ಅಡ್ಡಪರಿಣಾಮಗಳಾಗಿವೆ.

Comments are closed.