ಆರೋಗ್ಯ

ಬೆಂಗಳೂರಿನಿಂದ ಉಡುಪಿ ಜಿಲ್ಲೆಗೆ ಬಂದವರು ಸೆಲ್ಫ್ ಹೋಮ್ ಕ್ವಾರೆಂಟೈನ್ ಇರಿ: ಎಡಿಸಿ ಸದಾಶಿವ ಪ್ರಭು (VIdeo)

Pinterest LinkedIn Tumblr

ಉಡುಪಿ: ಮಂಗಳವಾರ ಸಂಜೆಯಿಂದ ಬೆಂಗಳೂರು ಲಾಕ್ ಡೌನ್ ಮಾಡಲು ಸರಕಾರ ಆದೇಶ ನೀಡಿದ ಹಿನ್ನೆಲೆ ಬೆಂಗಳೂರಿನಿಂದ ಅಧಿಕ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಗೆ ಜನರು ಆಗಮಿಸುವ ನಿರೀಕ್ಷೆಯಿದ್ದು ಅವರನ್ನು ಹೇಗೆ ಕೊರೋನಾ ತಪಾಸಣೆ ಮಾಡಬೇಕೆಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಹೊರ ಜಿಲ್ಲೆಗಳಿಂದ ಬಂದವರನ್ನು ಕ್ವಾರೆಂಟೈನ್ ಮಾಡಲು ನಿಯಮವಿಲ್ಲ. ಬೆಂಗಳೂರಿನಿಂದ ಬಂದವರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಕ್ವಾರೆಂಟೈನ್ ಆಗಬೇಕಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ್ ಪ್ರಭು ಹೇಳಿದ್ದಾರೆ.

  

ಭಾನುವಾರ ಬೆಳಿಗ್ಗೆ ಕುಂದಾಪುರದ ಆರೋಗ್ಯಾಧಿಕಾರಿ ಕಚೇರಿಗೆ ಆಗಮಿಸಿ ಸಭೆ ನಡೆಸಿದ ಅವರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಸಂದರ್ಭ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪಿಜಿಶಿಯನ್ ಡಾ. ನಾಗೇಶ್ ಇದ್ದರು.

ಅಂಗನವಾಡಿ ಕಾರ್ಯಕರ್ತರ ನಿಯೋಜನೆ….
ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಜೊತೆ ಸಭೆ ನಡೆಸಲಿದ್ದು ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಮನೆ ಮನೆ ಸಮೀಕ್ಷೆ ನಡೆಸಿ ಕೊರೋನಾ ಸಂಬಂಧಿ ಲಕ್ಷಣಗಳ ಮಾಹಿತಿ ಕುರಿತು ಮತ್ತು ಬೆಂಗಳೂರು ಸೇರಿದಂತೆ ಹೊರಜಿಲ್ಲೆಗಳಿಂದ ಬಂದವರ ಮಾಹಿತಿ ಕ್ರೋಡಿಕರಿಸಿ ಇಲಾಖೆಗೆ ಒದಗಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಹೊರ ಜಿಲ್ಲೆಗಳಿಂದ ಬಂದವರ ಮಾಹಿತಿ ಸಿಕ್ಕಿದಲ್ಲಿ ಅಂತವರನ್ನು ಸಂಪರ್ಕಿಸಿ ಆರೋಗ್ಯ ಮಾಹಿತಿ ತಿಳಿಯುವ ಜೊತೆಗೆ ಅವರು ಹೊರಗಡೆ ತಿರುಗಾಡದಂತೆ ಎಚ್ಚರಿಕೆ ನೀಡುವ ಕೆಲಸವೂ ಮಾಡಲಿದ್ದೇವೆ. ಅಲ್ಲದೇ ಪಾಸಿಟಿವ್ ಲಕ್ಷಣಗಳಿದ್ದರೆ ಕರೆತಂದು ತಪಾಸಣೆ ನಡೆಸುವ ಕಾರ್ಯವೂ ಆಗುತ್ತೆ ಎಂದರು.

ಕೊಲ್ಲೂರು ಲಲಿತಾಂಬಿಕೆ ಗೆಸ್ಟ್ ಹೌಸ್ ಕೋವಿಡ್ ಆಸ್ಪತ್ರೆ…
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಜಾಸ್ಥಿಯಾಗುತ್ತಿದ್ದು ಅದರಲ್ಲಿ ಬಹುತೇಕ ಯಾವುದೇ ಲಕ್ಷಣಗಳು ಇಲ್ಲದೆಯೂ ಪಾಸಿಟಿವ್ ಬರುವ ಪ್ರಕರಣಗಳೇ ಹೆಚ್ಚುತ್ತಿದೆ. ಈ ಹಿನ್ನೆಲೆ ಮೊದಲಿನಂತೆ ಕೊಲ್ಲೂರಿನ ಲಲಿತಾಂಬಿಕಾ ಗೆಸ್ಟ್ ಹೌಸ್ ಕೊವೀಡ್ ಆಸ್ಪತ್ರೆಯಾಗಿ ಪುನಶ್ಚೇತನ ಮಾಡಲಾಗುತ್ತಿದೆ. ಉಡುಪಿ ಹಾಗೂ ಕುಂದಾಪುರದಲ್ಲಿನ ಕೆಲ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುತ್ತಿದ್ದು ಅಗತ್ಯ ಬಿದ್ದರೆ ಅದನ್ನು ಉಪಯೋಗಿಸಿಕೊಳ್ಳಲಾಗುತ್ತದೆ.

ಹೋಮ್ ಐಸೋಲೇಶನ್ ಶಿಸ್ತುಬದ್ಧ ವ್ಯವಸ್ಥೆ….
ಹೋಂ ಐಸೋಲೇಶನ್ ಬಗ್ಗೆ ಸರಕಾರದ ನಿರ್ದೇಶನವಿದ್ದು ಅದನ್ನು ಶಿಸ್ತುಬದ್ದವಾಗಿ ರೂಪಿಸುವ ಹಿನ್ನೆಲೆಯಲ್ಲಿ ಅಂತಹ ವ್ಯಕ್ತಿಗಳ ಮನೆ ಹೋಂ ಐಸೋಲೇಶನ್ ಮಾಡಲು ಸೂಕ್ತವಿದೆಯೇ, ವ್ಯಕ್ತಿಯ ಬುದ್ದಿಮತ್ತೆಯೇನು ಎಂಬಿತ್ಯಾದಿ ಹಲವು ವಿಚಾರಗಳ ಬಗ್ಗೆ ಆರೋಗ್ಯ ಇಲಾಖೆ ತಂಡ ತೆರಳಿ ಪರಿಶೀಲನೆ ಮಾಡಲಿದೆ. ಸಮಸ್ಯೆಗಳಿದ್ದರೆ ಹೋಂ ಐಸೋಲೇಶನ್ ಮಾಡಲು ಸೂಕ್ತವಲ್ಲ. ಹಾಗಾಗಿ ಅಂತವರಿಗೆ ತಿಳುವಡಿಕೆ ನೀಡುವ ಹಿನ್ನೆಲೆಯಲ್ಲಿ ೨೪*೭ ಕಾಲ್ ಸೆಂಟರ್ ಅಂತಹ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುತ್ತಿದೆ.

ಕುಂದಾಪುರ ಸೆಲ್ಫ್ ಲಾಕ್ ಡೌನ್ ಬಗ್ಗೆ….
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಅಗತ್ಯ ವಸ್ತುಗಳ ಖರೀದಿಗೆ ತೊಂದರೆಯಾಗದಂತೆ ವರ್ತಕರು ಸ್ವಯಂಪ್ರೇರಿತವಾಗಿ ಮಧ್ಯಾಹ್ನ 2 ಗಂಟೆ ಬಳಿಕ ಲಾಕ್ ಡೌನ್ ಮಾಡುವ ಬಗ್ಗೆ ತಿಳಿದಿದ್ದು ಇದು ಒಳ್ಳೆಯ ವಿಚಾರವಾಗಿದ್ದು ಇದನ್ನು ಜಿಲ್ಲಾಡಳಿತ ಸ್ವಾಗತಿಸುತ್ತದೆ ಎಂದವರು ಹೇಳಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.