ಆರೋಗ್ಯ

ಉಡುಪಿಯಲ್ಲಿ ಫೀಲ್ಡಿಗಿಳಿದ ಡಿಸಿ ಜಗದೀಶ್: ಮಾಸ್ಕ್ ಹಾಕದವರಿಗೆ ದಂಡದ ಜೊತೆ ಸಖತ್ ಕ್ಲಾಸ್!

Pinterest LinkedIn Tumblr

ಉಡುಪಿ: ಕೋವಿಡ್ -19 ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತಂತೆ ,ಸಾರ್ವಜನಿಕರು ಈ ನಿಯಮಗಳ ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು , ಜಿಲ್ಲಾಧಿಕಾರಿ ಜಿ.ಜಗದೀಶ್ ಮಂಗಳವಾರ , ಉಡುಪಿ ನಗರದಲ್ಲಿ ದಿಡೀರ್ ದಾಳಿ ನಡೆಸಿ, ನಿಮಯಗಳ ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದರು.

ಮಂಗಳವಾರ ಜಿಲ್ಲೆಯ ಎಲ್ಲಾ ನಗರಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲಕ್ಕೆ ನಡೆಸಲಾದ ಈ ಕಾರ್ಯಾಚರಣೆಯಲ್ಲಿ , ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಜೊತೆಯಲ್ಲಿ , ಕೋವಿಡ್-19 ನಿಯಂತ್ರಣ ಕುರಿತಂತೆ ಪ್ರತಿಯೊಬ್ಬರ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು.

ಬಸ್ ಸ್ಟ್ಯಾಂಡ್ ಬಳಿಯ ಹೋಟೆಲ್ ಒಂದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೋಟೆಲ್ ನಲ್ಲಿ ಗ್ರಾಹಕರಿಗೆ ಕೈ ತೊಳೆಯಲು ಸೋಪ್ ಇಡದ ಕಾರಣ ಮಾಲೀಕರಿಗೆ ದಂಡ ವಿಧಿಸಿದರು, ಪೆಟ್ರೋಲ್ ಬಂಕ್ ನಲ್ಲಿ ಕ್ಯಾಷಿಯರ್ ಕೈಗವಸು ತೊಡದೆ ಹಣ ಪಡೆಯುವುದನ್ನು ಕಂಡ ಜಿಲ್ಲಾಧಿಕಾರಿಗಳು, ನೋಟಿನಿಂದಲೂ ಸಹ ಕೋವಿಡ್-19 ಹರಡಲಿದ್ದು , ಎಚ್ಚರಿಕೆ ವಹಿಸುವಂತೆ ಸೂಚಿಸಿ, ಸುರಕ್ಷತಾ ಕ್ರಮ ಪಾಲಿಸಿದ ಕ್ಯಾಷಿಯರ್ ಗೆ ದಂಢ ವಿಧಿಸಿದರು. ಮೆಡಿಕಲ್ ಶಾಪ್ ಒಂದರಲ್ಲಿ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ, ಮೆಡಿಕಲ್ ನಲ್ಲಿ ವೈದ್ಯರ ಅನುಮತಿಯಿಲ್ಲದೇ ಜ್ವರ ಶೀತ ಕೆಮ್ಮು ರೋಗಗಳಿಗೆ ಔಷಧ ವಿತರಿಸದಂತೆ ಸೂಚನೆ ನೀಡಿದರು. ಅಂಗಡಿಯಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕ ಮತ್ತು ಸಿಬ್ಬಂದಿಗಳಿಗೆ ದಂಡ ವಿಧಿಸಿದರು. ಹೋಟೆಲ್ ಒಂದರಲ್ಲಿ ಅಗತ್ಯ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಕುರಿತು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ರಿಲಯನ್ಸ್ ಮಳಿಗೆಗೆ ತೆರಳಿದ ಜಿಲ್ಲಾಧಿಕಾರಿ, ಮಳಿಗೆ ಒಳಗೆ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ಅನುಮತಿ ನೀಡುವಂತೆ ಹಾಗೂ ಎಲ್ಲಾ ಗ್ರಾಹಕರು ಮಾಸ್ಕ್ ಧರಿಸಿ ಖರೀದಿ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚಿಸಿ, ಒಂದೇ ವಸ್ತುಗಳ ಬಳಿ ಸಾಮಾಜಿಕ ಅಂತರವಿಲ್ಲದೇ ಗ್ರಾಹಕರು ಖರೀದಿ ನಡೆಸದಂತೆ ಒಬ್ಬ ಸಿಬ್ಬಂದಿಯನ್ನು ಪರಿಶೀಲನೆಗೆ ನಿಯೋಜಿಸುವಂತೆ ಸೂಚನೆ ನೀಡಿದರು.

ನಗರಸಭೆಯ ಅಧಿಕಾರಿಗಳು ಪ್ರತಿದಿನ ಕೋವಿಡ್-19 ನಿಯಮ ಉಲ್ಲಂಘನೆ ಕುರಿತು ಪರಿಶೀಲಿಸಿ, ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿ, 2100 ರೂ ದಂಡ ವಸೂಲಿ ಮಾಡಲಾಯಿತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್, ಇಂಜಿನಿಯರ್ ದುರ್ಗಾಪ್ರಸಾದ್, ಕಂದಾಯ ಅಧಿಕಾರಿ ಧನಂಜಯ, ಮೆನೇಜರ್ ವೆಂಕಟರಮಣಯ್ಯ, ಸಮುದಾಯ ಆರೋಗ್ಯ ವಿಭಾಗದ ನಾರಾಯಣ್, ಆರೋಗ್ಯ ನಿರೀಕ್ಷಕ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

Comments are closed.