ಕುಂದಾಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಲಾಕ್ ಡೌನ್ ತೆರವುಗೊಳಿಸಿ ಆದೇಶಿಸಿದ್ದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕೂಡ ಉಡುಪಿಗೆ ವಿಧಿಸಿದ್ದ ಸೀಲ್ ಡೌನ್ ತೆರವುಗೊಳಿಸಿ ಆದೇಶಿಸಿದ ಬೆನ್ನಲ್ಲೇ ಕುಂದಾಪುರದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ.
ಬುಧವಾರ ಬೆಳಿಗ್ಗೆನಿಂದಲೇ ಬೆರಳೆಣಿಕೆ ಸಂಖ್ಯೆಯಲ್ಲಿ ಬಸ್ಸುಗಳು ರಸ್ತೆಗಿಳಿದಿದ್ದು ಪ್ರಯಾಣಿಕರ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಿತ್ತು. ಖಾಸಗಿ ಸಂಸ್ಥೆಯ ಎರಡು ಬಸ್ ಮಾತ್ರ ರಸ್ತೆಗಿಳಿದಿತ್ತು. ಬಹುತೇಕ ಪ್ರಯಾಣಿಕರು, ಉದ್ಯೋಗಿಗಳು, ಕಾರ್ಮಿಕರು ಖಾಸಗಿ ವಾಹನಗಳಿಗೆ ಒಗ್ಗಿಕೊಂಡಿದ್ದು ಬಸ್ ಸಂಚಾರ ಆರಂಭವಾದರೂ ಕೂಡ ಬಸ್ಸಿಗೆ ಪ್ರಯಾಣಿಕರು ಬರುತ್ತಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಸಮುದಾಯದಲ್ಲೂ ಕೊರೋನಾ ಸೋಂಕು ಹರಡಿರುವ ಭೀತಿಯಿರುವ ಕಾರಣ ಜನರು ಬಸ್ ಹತ್ತಲು ಭಯಪಡುವ ದೃಶ್ಯವೂ ಕಂಡುಬರುತ್ತಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್, ಮುಖ್ಯಮಂತ್ರಿಗಳು ಲಾಕ್ ಡೌನ್ ತೆರವುಗೊಳಿಸಿದ ಹಿನ್ನೆಲೆ ಉಡುಪಿಯಲ್ಲಿ ಸೀಲ್ ಡೌನ್ ಇರುವುದಿಲ್ಲ. ಆದರೆ ಸೀಲ್ ಡೌನ್ ಆಗಿರುವ ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸಲಿದ್ದು ಅನಗತ್ಯ ಸಂಚರಿಸುವರಿಗೆ ಕಡಿವಾಣ ಹಾಕಲಾಗುತ್ತದೆ. ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ ಕಡ್ಡಾಯ. ಕೇಂದ್ರ ಮತ್ತು ರಾಜ್ಯ ಸರಕಾರದ ನಿಯಮಾವಳಿಗಳನ್ನು ಬಸ್ ಮಾಲಕರು, ಚಾಲಕ-ನಿರ್ವಾಹಕರು ಪಾಲಿಸಬೇಕು. ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೊರೋನಾ ಪ್ರಕರಣಗಳು ಕಂಡುಬರುತ್ತಿರುವುದರಿಂದ ಜನರು ಅನಾವಶ್ಯಕವಾಗಿ ಜಿಲ್ಲೆಯೊಳಗೆ ಮತ್ತು ಹೊರಗೆ ಓಡಾಡುವುದು ಸೂಕ್ತವಲ್ಲ ಎಂದು ಡಿಸಿ ಸೂಚನೆ ನೀಡಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.