ಅಲೈವೆರಾ (ಲೋಳೆರಸ) ಗಿಡವನ್ನು ಈಜಿಪ್ಟಿಯನ್ನರು ಅಮರತ್ವದ ಗಿಡ ಎಂದೇ ನಂಬಿದ್ದಾರೆ. ಅಮೆರಿಕನ್ನರು ಸಹ ಅಲೈವೆರಾ ಗಿಡಕ್ಕೆ ಸ್ವರ್ಗ ಸಮಾನ ವ್ಯಾಖ್ಯಾನ ನೀಡಿದ್ದಾರೆ.
ಅಲೈವೆರಾ ಗಿಡ ಅದ್ಭುತವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರೊಂದಿಗೆ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಔಷಧೀಯ ಗುಣವನ್ನು ಹೊಂದಿದೆ. ಈ ಗಿಡ ಕುರಿತು ಸಾಕಷ್ಟು ಜನರಿಗೆ ಮಾಹಿತಿ ಇದೆ. ಆದರೆ ಇದರ ಮಾಹಿತಿ ಇನ್ನೂ ವಿಸ್ತಾರಗೊಳ್ಳಬೇಕೆನ್ನುವ ಅಭಿಪ್ರಾಯವನ್ನು ಸಾಕಷ್ಟು ಜನ ವ್ಯಕ್ತಪಡಿಸಿದ್ದಾರೆ.
ಮನೆಯೊಳಗೆ ಅಲೈವೆರಾ ಗಿಡವೊಂದನ್ನು ಬೆಳೆಸುವ ಮೂಲಕ ಸಣ್ಣಪುಟ್ಟ ಚಿಕಿತ್ಸೆಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ತರಚು ಗಾಯ, ಹರಿತವಾದ ಉಪಕರಣಗಳಿಂದ ಆಗುವ ಗಾಯ, ಸುಟ್ಟ ಗಾಯಗಳಿಗೆ ಅಲೈವೆರಾ ರಾಮಬಾಣವಾಗಿದೆ. ಆದರೆ ಅಲೈವೆರಾವನ್ನು ನಿರ್ದಿಷ್ಟವಾದ ಚಿಕಿತ್ಸೆಗಾಗಿ ಬಳಸಬೇಕೆಂದೇನೂ ಇಲ್ಲ. ಇದರಲ್ಲಿರುವ ಹೇರಳವಾದ ಔಷಧೀಯ ಗುಣದಿಂದ ಬಹುತೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಅಲೈವೆರಾ ಒಂದು ಉತ್ತಮ ಔಷಧಿಯಾಗಿದೆ.
ಜರ್ನಲ್ ಎನ್ವಿರಾಮಂಟಲ್ ಸೈನ್ಸ್ ಮತ್ತು ಹೆಲ್ತ್ ಎಂಬ ಮಾಹಿತಿಯನ್ವಯ ಅಲೈವೆರಾ ಬ್ಯಾಕ್ಟೀರಿಯಾ, ವೈರಸ್ ಹಾಗೂ ಫಂಗಸ್ ನಿರೋಧಕ ಶಕ್ತಿಯನ್ನು ಹೊಂದಿದೆ. ಶರೀರದಲ್ಲಿನ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೂ ಅಲೈವೆರಾ ಬಳಕೆ ಸಹಕಾರಿಯಾಗಲಿದೆ. ಇನ್ನುಳಿದಂತೆ ಶರೀರದಲ್ಲಿರುವ ವಿಷ ವಸ್ತುಗಳನ್ನು ಹೊರಹಾಕುವಲ್ಲಿ ಅಲೈವೆರಾ ಪಾನೀಯ ಬಹು ಅಗತ್ಯ ಎಂದು ತಿಳಿದುಬಂದಿದೆ.
ಖನಿಜಾಂಶ
ಅಲೈವೆರಾದಲ್ಲಿ ಖನಿಜಾಂಶಗಳ ಖಣಜವೇ ಆಗಿದ್ದು, ಪ್ರಮುಖವಾಗಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಜಿಂಕ್, ಕ್ರೋಮಿಯಂ, ಸೆಲೇನಿಯಂ, ಸೋಡಿಯಂ, ಕಬ್ಬಿಣ, ಗಂಧಕ, ತಾಮ್ರ ಹಾಗೂ ಮ್ಯಾಂಗನೀಸ್ ಖನಿಜಗಳನ್ನು ಹೊಂದಿದೆ. ಈ ಖನಿಜಾಂಶಗಳು ಒಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ದೇಹದಲ್ಲಿನ ಚಯಾಪಚಯ ಕ್ರಿಯೆಗಳ ಅಭಿವೃದ್ಧಿಗೆ ಬಹು ಸಹಕಾರಿಯಾಗಿದೆ.
ಎಂಜೈಮ್ಸ್ (ಕಿಣ್ವ)
ಅಲೈವೆರಾ ಬಹುಮುಖ್ಯ ಕಿಣ್ವಗಳನ್ನು ಹೊಂದಿದೆ. ಪ್ರಮುಖವಾಗಿ ಅಮಲೈಸ್, ಲೈಪೇಸ್‍ಗಳು ಅಲೈವೆರಾದಲ್ಲಿದ್ದು, ಮನುಷ್ಯನ ಶರೀರದಲ್ಲಿನ ಜೀರ್ಣಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಕ್ಕರೆ ಮತ್ತು ಕೊಬ್ಬಿನ ಅಣುಗಳನ್ನು ಒಡೆದುಹಾಕುವ ಮೂಲಕ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತದೆ. ಇವುಗಳಲ್ಲಿ ಬ್ರೈಡಿಕೈನೇಸಿ ಕಿಣ್ವ ಉರಿಯೂತ ನಿವಾರಿಸುವಲ್ಲಿ ಸಹಕಾರಿಯಾಗಿದೆ.
ವಿಟಮಿನ್ಸ್ (ಪೌಷ್ಟಿಕಾಂಶ)
ಒಂದು ಅಧ್ಯಯನದ ಪ್ರಕಾರ, ಅಲೈವೆರಾದಲ್ಲಿ ನಿರ್ದಿಷ್ಟವಾಗಿ ವಿಟಮಿನ್ ಬಿ12 ಅಡಕವಾಗಿದ್ದು, ಇದು ಕೆಂಪು ರಕ್ತ ಕಣ ಜೀವಕೋಶಗಳ ಉತ್ಪತ್ತಿಯನ್ನು ಹೆಚ್ಚಳ ಮಾಡಲಿದೆ. ಸಸ್ಯಹಾರಿಗಳಿಗೆ ನಿಜಕ್ಕೂ ಇದೊಂದು ಉತ್ತಮ ಹಾಗೂ ಸಂತೋಷಕರ ಸುದ್ದಿಯಾಗಿದೆ. ಯಾರು ತಮ್ಮ ದಿನನಿತ್ಯ ಬಿ12 ಅನ್ನಾಂಗ ಇಲ್ಲದ ಆಹಾರ ಸೇವನೆ ಮಾಡುತ್ತಿರುತ್ತಾರೋ ಅವರಿಗೆ ಅಲೈವೆರಾ ಸೇವನೆಯಿಂದ ಇದನ್ನು ಸರಿದೂಗಿಸಬಹುದು. ನಿರಂತರವಾಗಿ ಅಲೈವೆರಾ ಸೇವನೆ ಯಿಂದ ಬಿ12 ಅನ್ನಾಂಗ ಕೊರತೆ ನೀಗಿಸಿಕೊಳ್ಳಬಹುದಾಗಿದೆ.
ಮತ್ತೊಂದು ಅಧ್ಯಯನದ ಪ್ರಕಾರ, ಅಲೈವೆರಾ ಶರೀರದಲ್ಲಿನ ಅನ್ನಾಂಗದ ಕ್ರಿಯೆಗಳನ್ನು ಹೆಚ್ಚಿಸಲಿದೆ. ಶರೀರ ಬಹುಬೇಗನೆ ಅಲೈವೆರಾವನ್ನು ಹೀರಿಕೊಳ್ಳುವುದರೊಂದಿಗೆ ಬಳಸಿಕೊಳ್ಳುವುದರಿಂದ ಶರೀರದಲ್ಲಿನ ಬಿ12 ಅನ್ನಾಂಗ ಕೊರತೆ ಸುಲಭವಾಗಿ ತಡೆಯಬಹುದಾಗಿದೆ. ಇನ್ನುಳಿದಂತೆ ಅಲೈವೆರಾ ವಿಟಮಿನ್ ಎ, ಸಿ, ಇ, ಫೋಲಿಕ್ ಆಮ್ಮ, ಫ್ಲೋರಿನ್, ಬಿ1, ಬಿ2, ಬಿ3 ಮತ್ತು ಬಿ6 ಅನ್ನಾಂಗಗಳನ್ನು ಹೊಂದಿದೆ. ಅಲೈವೆರಾ ಸೇವನೆಯಿಂದ ಮೆದುಳಿನ ಗ್ರಹಿಕಾ ಶಕ್ತಿ ಸಹ ಹೆಚ್ಚಾಗಲಿದೆ.
ಅಲೈವೆರಾ ಅಂದಾಜು 20ರಿಂದ 22 ಅಗತ್ಯ ಅಮೈನೋ ಆಸಿಡ್ ಅಂಶ ಹೊಂದಿದ್ದು, ಅದು ಮನುಷ್ಯನ ಶರೀರಕ್ಕೆ ಬಹು ಅಗತ್ಯವಾಗಿದೆ. ಇದರೊಂದಿಗೆ ಅಲೈವೆರಾದಲ್ಲಿ ಸ್ಯಾಲಿಸಿಲಿಕ್ ಆಸಿಡ್ ಸಹ ಇದ್ದು, ಇದು ಶರೀರ ಪ್ರವೇಶಿಸುವ ಬ್ಯಾಕ್ಟೀರಿಯಗಳಿಂದಾಗುವ ಉರಿಯೂತವನ್ನು ನಿಯಂತ್ರಣದಲ್ಲಿ ಇಡುವ ಶಕ್ತಿ ಹೊಂದಿದೆ.
ಇನ್ನಿತರ ಅಲೈವೆರಾಗಳ ಉಪಯೋಗ
ಇನ್ನಿತರ ಅಲೈವೆರಾಗಳು ಸಹ ಶರೀರವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಟ್ಟೆ, ಜಠರ, ಮೂತ್ರಕೋಶದಲ್ಲಿನ ವಿಷಯುಕ್ತ ಅಂಶಗಳನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಕೂದಲು ಸಮಸ್ಯೆ, ಚರ್ಮ ಸಮಸ್ಯೆ, ಬೆವರುಸಾಲೆ,ಒಣ ತ್ವಚೆ, ಅಜೀರ್ಣ, ಹೊಟ್ಟೆಯಲ್ಲಿನ ಏರುಪೇರು, ಅಲ್ಸರ್, ಗಂಟಲಿನ ಉರಿಯೂತ ಸಹ ಅಲೈವೆರಾ ಸೇವನೆಯಿಂದ ಶಮನಪಡಿಸಿಕೊಳ್ಳಬಹುದಾಗಿದೆ. ಸಂಧಿವಾತ ಸಮಸ್ಯೆ ನಿವಾರಣೆಗೆ ಅಲೈವೆರಾ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬಾಯಿ ಮೂಲಕ ಸೇವಿಸುವ ಅಲೈವೆರಾ ಶರೀರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಇದೊಂದು ಬಹುಮುಖ್ಯ ಪರ್ಯಾಯ ಆರೋಗ್ಯ ಸಮಸ್ಯೆಗೆ ನೈಸರ್ಗಿಕ ಔಷಧಿಯಾಗಿದೆ ಹಾಗೂ ಅನಗತ್ಯ ರಾಸಾಯನಿಕಗಳನ್ನು ಶರೀರದಿಂದ ಹೊರಸಾಗಿಸುವ ಒಂದು ಉತ್ತಮ ಮಾಧ್ಯಮ ಎಂದೇ ಬಣ್ಣಿಸಲಾಗಿದೆ.
Comments are closed.