ಕುಂದಾಪುರ: ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆ ಕುಂದಾಪುರದಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶ್ರೀಮತಿ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಆದೇಶಿಸಲಾಗಿತ್ತು. ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿದ್ದು ಕುಂದಾಪುರ ಕೋವಿಡ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಉದ್ಯಮಿ ಕಮಲಕಿಶೋರ್ ಹೆಗ್ಡೆ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದಾರೆ.
ಕೋವಿಡ್ ಆಸ್ಪತ್ರೆ ಪ್ರಯೋಗಾಲಯಕ್ಕೆ ಅಗತ್ಯವಿದ್ದ 2 ಲಕ್ಷ ಮೌಲ್ಯದ ಆನ್‍ಲೈನ್ ಯು.ಎಸ್.ಬಿ. ಸಿಸ್ಟಮ್ ಕೊಡುಗೆಯಾಗಿ ನೀಡಿದ್ದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅವರು ಅದನ್ನು ಸ್ವೀಕರಿಸಿದರು.
ಬಳಿಕ ಮಾತನಾಡಿದ ಎಸಿ ಕೆ. ರಾಜು, ಕುಂದಾಪುರದಲ್ಲಿ ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಹತ್ತಾರು ಕೊಡುಗೆಗಳು ಲಭಿಸಿದ್ದು ದಾನಿಗಳ ಸಹಕಾರದಿಂದ ಆಸ್ಪತ್ರೆ ಉನ್ನತೀಕರಣಕ್ಕೆ ಹೋಗುತ್ತಿದೆ: ಇನ್ನು ಹೆಚ್ಚೆಚ್ಚು ದಾನಿಗಳಿಂದ ಕೊಡುಗೆಗಳು ಸಿಕ್ಕಲ್ಲಿ ಮತ್ತಷ್ಟು ಸೇವೆಗಳು ಸೋಂಕಿತರಿಗೆ ಸಿಗಲಿದೆ. ಕುಂದಾಪುರದಲ್ಲಿ ದಾನಿಗಳ ಸಹಕಾರ ಪ್ರಶಂಸನೀಯ ಎಂದರು.
ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ನಾಗೇಶ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ರೋಬರ್ಟ್ ರೆಬೆಲ್ಲೋ, ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ, ಡಾ.ವೀಣಾ, ಸಬ್ಲಾಡಿ ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ನ ಜಯರಾಮ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.