ಆರೋಗ್ಯ

ಕೊರೋನಾ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಉಡುಪಿ ಡಿಸಿ ಜಿ. ಜಗದೀಶ್

Pinterest LinkedIn Tumblr

ಕುಂದಾಪುರ : ದೇಶಾದ್ಯಾಂತ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಾಕಷ್ಟು ಸಿದ್ದತೆಗಳು ನಡೆಯುತ್ತಿದ್ದು, ನಿರ್ಮಿತಿ ಕೇಂದ್ರದ ಮೂಲಕ 25 ಐಸಿಯು ಬೆಡ್‌ಗಳನ್ನು ಹೊಂದಿರುವ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇಲ್ಲಿನ ಉಪ ವಿಭಾಗ ಸರ್ಕಾರಿ ಆಸ್ಪತ್ರೆಯ ಶುಕ್ರವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಕೋವಿಡ್ ಆಸ್ಪತ್ರೆಗೆ ಕುಂದಾಪುರದ ರೆಡ್‌ಕ್ರಾಸ್‌ ಘಟಕದ ವತಿಯಿಂದ ನೀಡಲಾದ ಐದು ಆಕ್ಸಿಜನ್ ಕಾನ್ಸನ್ ಟ್ರೇಟರ್ ಸ್ವೀಕರಿಸಿ ಅವರು ಮಾತನಾಡಿದರು.

3ನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಬೀರ ಪರಿಣಾಮ ಬೀರಬಹುದು ಎನ್ನುವ ಅನುಭವಿಗಳ ಅಭಿಪ್ರಾಯದ ಕುರಿತಾದ ವರದಿಗಳ ಆಧಾರದ ಮೇಲೆ ಜಿಲ್ಲೆಯ ನಿರ್ಮಿತಿ ಸಂಸ್ಥೆಯ ಲಾಭಾಂಶ ಹಣದಲ್ಲಿ ಉಡುಪಿಯಲ್ಲಿ 15 ಹಾಗೂ ಕುಂದಾಪುರದಲ್ಲಿ 10 ಐಸಿಯು ಹಾಸಿಗೆಗಳನ್ನು ಹೊಂದಿರುವ ಪರಿಪೂರ್ಣ ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ. ದೇಶದ ವಿವಿಧೆಡೆ ಆಕ್ಸಿಜನ್ ಕೊರತೆಯ ವರದಿಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ದಾನಿಗಳು ಆಕ್ಸಿಜನ್ ಕಾನ್ಸನ್ ಟ್ರೇಟರ್ ನೀಡುವ ಮೂಲಕ ಜನರ ಜೀವ ರಕ್ಷಣೆಗೆ ನೆರವಾಗುತ್ತಿರುವುದು ಸುತ್ಯರ್ಹವಾಗಿದೆ.

ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಕಾನ್ಸನ್ ಟ್ರೇಟರ್ ವ್ಯವಸ್ಥೆಗಾಗಿ ಉದ್ಯಮಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ನಿಂದ 10, ರೆಡ್‌ಕ್ರಾಸ್‌ನಿಂದ 5 ಸೇರಿದಂತೆ ಅನೇಕ ದಾನಿಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಸರ್ಕಾರದಿಂದಲೂ 20 ಉಪಕರಣ ದೊರಕುತ್ತಿದೆ. ಕುಂದಾಪುರದ ಕೋವಿಡ್ ಆಸ್ಪತ್ರೆಯ ಬಗ್ಗೆ ಅತ್ಯಂತ ಹೆಮ್ಮ ಇದೆ. ಎಲ್ಲೆಡೆಯಲ್ಲಿಯೂ ಈ ಕುರಿತು ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದಾಯ ಉಪ ವಿಭಾಗಾಧಿಕಾರಿ ಕೆ.ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್‌ ರೆಬೆಲ್ಲೊ, ಕೋವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ.ನಾಗೇಶ್‌, ವೈದ್ಯರಾದ ಡಾ.ವಿಜಯಶಂಕರ್, ಡಾ.ಆಶಿತ್, ಹಿರಿಯ ಶುಶ್ರೂಷಕಿ ಅನ್ನಪೂರ್ಣಾ, ರೆಡ್‌ಕ್ರಾಸ್ ಸಭಾಪತಿ ಎಸ್.ಜಯಕರ ಶೆಟ್ಟಿ, ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ವೈ.ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ್ ಆಚಾರ್ಯ, ಕೆ.ಸೀತಾರಾಮ ನಕ್ಕತ್ತಾಯ, ಸಂತೋಷಕುಮಾರ್ ಶೆಟ್ಟಿ, ನಾರಾಯಣ ದೇವಾಡಿಗ, ಡಾ.ಸೋನಿ ಡಿ’ಕೋಸ್ಟಾ ಇದ್ದರು.

Comments are closed.